ಗೋಣಿಕೊಪ್ಪಲು, ಆ. ೨೨: ಕಾಫಿ ಉದ್ಯಮದ ಚೇತರಿಕೆಗೆ ಭಾರತ ಕಾಫಿ ಮಂಡಳಿ ಹಾಗೂ ಸಹದ್ಯೋಗಿ ಸಂಸ್ಥೆಗಳು ಹಲವು ಪ್ರಗತಿಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಆಂತರಿಕ ಕಾಫಿ ಬಳಕೆ ಅಧಿಕಗೊಳ್ಳುವ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯ ಹಾಗೂ ಭಾರತದ ಕಾಫಿ ಉತ್ಪಾದನೆ ಅಧಿಕಗೊಳ್ಳಲು ಮತ್ತು ಉತ್ತಮ ಬೆಲೆ ಲಭ್ಯವಾಗುವ ನಿಟ್ಟಿನಲ್ಲಿ ಭಾರತ ಕಾಫಿ ಮಂಡಳಿ ಸಲಹಾ ಸಮಿತಿ ಸಭೆ ಯಲ್ಲಿಯೂ ಚರ್ಚೆ ನಡೆದಿರುವದಾಗಿ ಕಾಫಿ ಮಂಡಳಿ ಸಲಹಾ ಸಮಿತಿ ಸದಸ್ಯರಾದ ಮಚ್ಚಮಾಡ ಡಾಲಿ ಚಂಗಪ್ಪ ಹಾಗೂ ಟಿ.ಟಿ.ಜಾನ್ ತಿಳಿಸಿದ್ದಾರೆ.
ಗೋಣಿಕೊಪ್ಪಲಿನಲ್ಲಿ ಮಾಧ್ಯಮ ದೊಂದಿಗೆ ಅಭಿಪ್ರಾಯ ವ್ಯಕ್ತಪಡಿಸಿದ ಅವರುಗಳು ಈ ಹಿಂದೆ ಇದ್ದ
ಶೇ.೨೫ ರ ಸಬ್ಸಿಡಿಯನ್ನು ಶೇ.೪೦ಕ್ಕೆ ಏರಿಸಲಾಗಿದೆ. ಇದರ ಸದುಪ ಯೋಗವನ್ನು ಅರ್ಹ ಕಾಫಿ ಬೆಳೆಗಾರರು ಹೊಂದಿಕೊಳ್ಳಲು ಮನವಿ ಮಾಡಿದ್ದಾರೆ.
ಕೋವಿಡ್-೧೯ ಹಿನ್ನೆಲೆ ೨೦೨೦ರಲ್ಲಿ ಯಾವದೇ ಸಬ್ಸಿಡಿ ಬಿಡುಗಡೆಯಾಗಿಲ್ಲ. ಆದರೆ, ಬಾಕಿ ಸಬ್ಸಿಡಿ ಮೊತ್ತವನ್ನು ಅರ್ಹ ಫಲಾನುಭವಿಗಳಿಗೆ ಸಂದಾಯ ಮಾಡಲಾಗಿದೆ. ಈ ಹಿಂದೆ ನೀರಾವರಿ ಟ್ಯಾಂಕ್ ನಿರ್ಮಾಣ,
(ಮೊದಲ ಪುಟದಿಂದ) ಕೆರೆ ಅಭಿವೃದ್ಧಿ, ಪಂಪ್ಸೆಟ್, ಸ್ಪಿçಂಕ್ಲರ್ ಇತ್ಯಾದಿ ಸಾಲದ ಮೇಲೆ ಶೇ.೨೫ ಸಬ್ಸಿಡಿ ನೀಡಲಾಗಿದೆ. ಇನ್ನು ಮುಂದೆ ಕಾಫಿ ಕಣ ಅಭಿವೃದ್ಧಿ, ಕಾಫಿ ದಾಸ್ತಾನು ಮಳಿಗೆ, ಕೃಷಿ ಉಪಕರಣಗಳು (ಕಳೆ ಕೊಚ್ಚುವ ಯಂತ್ರ, ವೀಡ್ ಕಟ್ಟರ್, ವುಡ್ ಕಟ್ಟರ್, ಸ್ಪೆçÃಯರ್) ಇತ್ಯಾದಿಗಳಿಗೆ ಇನ್ನು ಮುಂದೆ ಶೇ.೪೦ ಸಬ್ಸಿಡಿ ದೊರೆಯಲಿದೆ ಎಂದು ಕಾಫಿ ಮಂಡಳಿ ಸಲಹಾ ಸಮಿತಿ ಸದಸ್ಯರಾದ ಡಾಲಿ ಚಂಗಪ್ಪ ಹಾಗೂ ಜಾನ್ ತಿಳಿಸಿದರು.
ಕಾಫಿ ಮಂಡಳಿಗೆ ಕೇಂದ್ರ ಸರ್ಕಾರವು ಮುಂದಿನ ಐದು ವರ್ಷದ ಅಭಿವೃದ್ಧಿಗಾಗಿ ರೂ.೧೧೫೯ ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಇದರಲ್ಲಿ ಸುಮಾರು ರೂ.೪೫೯ ಕೋಟಿ ರೂ. ಸಬ್ಸಿಡಿಗಾಗಿ ಮೀಸಲಿರಿಸ ಲಾಗಿದೆ. ಉಳಿಕೆ ಮೊತ್ತದ ಆಡಳಿತಾತ್ಮಕ ವೆಚ್ಚ,ವೇತನ ಇತ್ಯಾದಿಗಳಿಗೆ ಬಳಕೆ ಯಾಗಲಿದೆ ಎಂದು ಮಾಹಿತಿ ನೀಡಿದರು.
ಉಪ ಶಾಖೆಗಳ ಸ್ಥಳಾಂತರ
ಕೊಡಗು ಜಿಲ್ಲೆಯಲ್ಲಿ ಇನ್ನು ಮುಂದೆ ಗೋಣಿಕೊಪ್ಪಲು,ಮಡಿಕೇರಿ, ಸೋಮವಾರಪೇಟೆಯಲ್ಲಿ ಮಾತ್ರ ಕಾಫಿ ಮಂಡಳಿ ಉಪ ನಿರ್ದೇಶಕರ ಕಚೇರಿ ಅಸ್ತಿತ್ವದಲ್ಲಿರುತ್ತದೆ. ಬಾಳೆಲೆ, ಸಿದ್ದಾಪುರ, ಶ್ರೀಮಂಗಲ, ನಾಪೋಕ್ಲು, ಮೂರ್ನಾಡು, ಮಾದಾಪುರ, ಸುಂಟಿಕೊಪ್ಪ ಹಾಗೂ ಶನಿವಾರಸಂತೆ ಕಾಫಿ ಉಪ ವಿಭಾಗ ಕೇಂದ್ರವನ್ನು ರದ್ದುಗೊಳಿಸಿ, ಉಳಿತಾಯ ಆದಾಯವನ್ನು ಕಾಫಿ ಕೃಷಿಕರ ಸಬ್ಸಿಡಿ ಮೊತ್ತವನ್ನು ಶೇ.೨೫ ರಿಂದ ಶೇ.೪೦ಕ್ಕೆ ಏರಿಕೆ ಮಾಡಲು ನಿರ್ಧರಿಸಲಾಗಿದೆ. ಕೇಂದ್ರ ವಾಣಿಜ್ಯ ಸಚಿವಾಲಯದ ನಿರ್ದೇಶನ ಮೇರೆ ಇಡೀ ಭಾರತ ದೇಶದಲ್ಲಿ ಉಪಕೇಂದ್ರವನ್ನು ರದ್ದುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆಯೇ ವಿನಃ ಇದರ ಹಿಂದೆ ಯಾವುದೇ ದುರುದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಫಿ ಕೃಷಿ ಅಭಿವೃದ್ಧಿಗೆ ಜಿಲ್ಲೆಯ ಮೂರು ಕಾಫಿ ಮಂಡಳಿ ಡಿಡಿ ಕಚೇರಿ ಮೂಲಕ ಮೂರು ಮಣ್ಣು ಪರೀಕ್ಷಾ ‘ಮೊಬೈಲ್ ಯೂನಿಟ್’ ತೆರೆಯಲಾಗಿದ್ದು ಇದರ ಸದುಪಯೋಗವನ್ನು ಎಲ್ಲ ಬೆಳೆಗಾರರು ಹೊಂದಬಹುದಾಗಿದೆ ಎಂದು ಹೇಳಿದರು.
ಕೊಡಗಿನ ಕಾಫಿ ಕೃಷಿಕರಿಗೆ ಅನುಕೂಲವಾಗುವಂತೆ ಹೆಚ್ಚಿನ ಪ್ರಚಾರ ನೀಡಲು ಶೇ.೪೦ ಸಬ್ಸಿಡಿ ಮೊತ್ತದ ಅನುಕೂಲ ಬಗ್ಗೆ ಆಕಾಶವಾಣಿ ಹಾಗೂ ಎಲ್ಲ ಪ್ರಚಾರ ಮಾಧ್ಯಮ ಮೂಲಕ ಬೆಳೆಗಾರರಿಗೆ ಮಾಹಿತಿ ನೀಡಲು ಉದ್ದೇಶ ಹೊಂದಲಾಗಿದೆ ಎಂದರು.
ಚಿಕೋರಿ ಆಂದೋಲನ
ಕಾಫಿಗೆ ಶೇ.೪೯ ರಷ್ಟು ಚಿಕೋರಿ ಬಳಸಲು ಈ ಹಿಂದೆ ಎಫ್ಎಸ್ಎಸ್ಎ ಅನುಮತಿ ನೀಡಿದ್ದು,ಇದನ್ನು ಶೇ.೩೦ಕ್ಕೆ ಇಳಿಸಲು ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಭಾರತದ ಕಾಫಿಗೆ ಮಾರುಕಟ್ಟೆ ದರ ರೂ.೨೫೦ ಇದ್ದರೆ, ಚಿಕೋರಿಗೆ ಕೆ.ಜಿ.ಗೆ ರೂ.೫೦ಕ್ಕಿಂತಲೂ ಕಡಿಮೆ ದರವಿದೆ. ಇದರಿಂದ ರೋಸ್ಟರ್ ಗೆ ಲಾಭವೇ ವಿನಃ, ಕಾಫಿ ಉತ್ಪಾದಕ ಹಾಗೂ ಬಳಕೆದಾರರಿಗೆ ಯಾವದೇ ಲಾಭವಿಲ್ಲ. ಈ ನಿಟ್ಟಿನಲ್ಲಿಯೂ ಬೆಳೆಗಾರರಿಗೆ ನ್ಯಾಯ ಕೊಡಿಸಲು ತೀರ್ಮಾನಿಸಲಾಗಿದೆ ಎಂದರು.
ಚಿಕೋರಿ ಬೆರಕೆ ಭಾರತ ದೇಶ ಹೊರತು ಪಡಿಸಿ ಬೇರೆ ಯಾವ ದೇಶದಲ್ಲಿಯೂ ಬಳಕೆಯಲ್ಲಿಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ಹೋರಾಟ ಅನಿವಾರ್ಯ ಎಂದು ಹೇಳಿದರು.
ಕಾಫಿ ಮಂಡಳಿಯ ಹಾಸನದ ಜಂಟಿ ನಿರ್ದೇಶಕರ ಕಚೇರಿಯನ್ನು ಕೊಡಗಿನ ಮಡಿಕೇರಿಗೆ ಸ್ಥಳಾಂತ ರಿಸುವ ಕುರಿತು ಚರ್ಚೆ ನಡೆದಿದೆ.
ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರು, ಸಣ್ಣ ಹಿಡುವಳಿದಾರರು ಹೆಚ್ಚಿನ ಮಾಹಿತಿಯನ್ನು ತಾಲೂಕು ಉಪ ನಿರ್ದೇಶಕರ ಕಚೇರಿಯಲ್ಲಿ ಹೊಂದಬಹುದಾಗಿದೆ.
ಭಾರತ ಕಾಫಿ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಾಗಿ ಡಾ. ಕೆ.ಜಿ.ಜಗದೀಶ್ ಕಾರ್ಯನಿರ್ವಹಿಸುತ್ತಿದ್ದು, ಈ ಹಿಂದೆ ಮಂಗಳೂರು ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ್ದರು.ಇದೀಗ ಉತ್ತಮ ಸಿಇಓ ಕಾಫಿ ಮಂಡಳಿಯಲ್ಲಿದ್ದು ಮುಂದೆ ಕಾಫಿ ಕೃಷಿಕರು ಉತ್ತಮ ದಿನಗಳನ್ನು ಎದುರು ನೋಡಬಹುದು ಎಂದು ಮಚ್ಚಾಮಾಡ ಡಾಲಿ ಚಂಗಪ್ಪ ಹಾಗೂ ಟಿ.ಟಿ. ಜಾನ್ ಅಭಿಪ್ರಾಯಪಟ್ಟರು.