ಕೂಡಿಗೆ, ಆ. ೧೮: ಇಲ್ಲಿಗೆ ಸಮೀಪದ ಹೆಬ್ಬಾಲೆ, ಸೋಮವಾರ ಪೇಟೆ, ಬಾಣಾವಾರ ರಸ್ತೆಯ ಬೈರಪ್ಪನಗುಡಿ ಸಮೀಪದ ಮುಖ್ಯ ರಸ್ತೆಯಲ್ಲಿ ಅಪರಿಚಿತ ವಾಹನ ಜಿಂಕೆಗೆ ಡಿಕ್ಕಿ ಹೊಡೆದ ಪರಿಣಾಮ ವಾಗಿ ಜಿಂಕೆಯ ಬಲಕಾಲಿಗೆ ಪೆಟ್ಟಾದ ಘಟನೆ ಸಂಭವಿಸಿದೆ. ಬೆಳಗ್ಗಿನ ಜಾವ ೭ ಗಂಟೆ ಸಮಯದಲ್ಲಿ ಕಾಡಿನಂಚಿನಿAದ ರಸ್ತೆ ದಾಟಿ ಹೋಗುವ ಸಂದರ್ಭದಲ್ಲಿ ಯಾವುದೋ ವಾಹನ ಜಿಂಕೆಗೆ ಡಿಕ್ಕಿ ಹೊಡೆದಿದೆ. ರಸ್ತೆಯ ಒಂದು ಬದಿಯಲ್ಲಿ ಬಿದ್ದು ಕಿರುಚುತ್ತಿದ್ದ ಸಂದರ್ಭದಲ್ಲಿ ಸ್ಥಳೀಯರು ಬಾಣಾವಾರ ಅರಣ್ಯ ಇಲಾಖೆಯವರಿಗೆ ತಿಳಿಸಿದ ಮೇರೆಗೆ ಅರಣ್ಯ ಇಲಾಖೆಯವರು ಸ್ಥಳಕ್ಕೆ ಬಂದು ಗಾಯಗೊಂಡ ಮೂರು ವರ್ಷ ಪ್ರಾಯದ ಜಿಂಕೆಯನ್ನು ಬಾಣಾವಾರ ಉಪ ವಲಯ ಅರಣ್ಯ ಕೇಂದ್ರಕ್ಕೆ ತೆಗೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ನೀಡಿ ನಂತರ ಸೋಮವಾರಪೇಟೆ ತಾಲೂಕು ಅರಣ್ಯ ಕೇಂದ್ರಕ್ಕೆ ವಾಹನದಲ್ಲಿ ತೆಗೆದುಕೊಂಡು ಹೋಗಿ ಅಲ್ಲಿನ ಪಶುಪಾಲನೆ ಇಲಾಖೆಯ ವೈದ್ಯಾಧಿಕಾರಿಯಿಂದ ಸಮರ್ಪಕ ಚಿಕಿತ್ಸೆ ನೀಡಿರುತ್ತಾರೆ. ಚಿಕಿತ್ಸೆಯ ನಂತರ ಸೋಮವಾರಪೇಟೆ ವಲಯ ಅರಣ್ಯ ಅಧಿಕಾರಿ ಶಮ ಅವರ ಸೂಚನೆಯಂತೆ ಬಾಣಾವಾರ ಮೀಸಲು ಅರಣ್ಯ ಪ್ರದೇಶಕ್ಕೆ ಬಿಡಲಾಯಿತು.
ಈ ಸಂದರ್ಭ ಬಾಣಾವಾರ ಉಪ ವಲಯ ಅರಣ್ಯ ಅಧಿಕಾರಿ ಪುನೀತ್ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.