ತಾಲಿಬಾನ್ ಮುಖಂಡರ ಜೊತೆ ಹಮೀದ್ ಕರ್ಜೈ ಚರ್ಚೆ

ಕಾಬೂಲ್, ಆ. ೧೮: ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಹಮೀದ್ ಕರ್ಜೈ ಅವರು ಪ್ರಬಲ ತಾಲಿಬಾನ್ ಹಿರಿಯ ನಾಯಕರನ್ನು ಭೇಟಿಯಾಗಿದ್ದು, ಸರ್ಕಾರದಲ್ಲಿ ಹಕ್ಕಾನಿ ನೆಟ್‌ವರ್ಕ್ ಪಾಲ್ಗೊಳ್ಳುವಿಕೆಯ ಕುರಿತು ಚರ್ಚೆ ನಡೆಸಿದ್ದಾರೆ. ಹಕ್ಕಾನಿ ನೆಟ್‌ವರ್ಕ್ ಅನ್ನು ಅಮೇರಿಕಾ ಸರ್ಕಾರ ಉಗ್ರಗಾಮಿ ಸಮೂಹ ಎಂದು ೨೦೧೨ರಲ್ಲಿ ಘೋಷಣೆ ಮಾಡಿತ್ತು. ಅಲ್ಲದೆ ಅದರ ನಾಯಕರನ್ನು ಬಂಧಿಸಿ ಜೈಲಿಗಟ್ಟಿತ್ತು. ಇದೀಗ ಇದೇ ಗುಂಪಿನ ಮುಖಂಡರು ತಾಲಿಬಾನ್ ಸರ್ಕಾರದ ಭಾಗವಾಗುವ ಕುರಿತು ಮಾತುಕತೆಗಳು ನಡೆಯುತ್ತಿದ್ದು, ಇದೇ ವಿಚಾರವಾಗಿ ಹಮೀದ್ ಕರ್ಜೈ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಮಾಜಿ ಅಧ್ಯಕ್ಷ ಹಮೀದ್ ಕರ್ಜೈ ಮತ್ತು ಪದಚ್ಯುತ ಸರ್ಕಾರದ ಹಿರಿಯ ಅಧಿಕಾರಿಯಾದ ಅಬ್ದುಲ್ಲಾ, ಪ್ರಾಥಮಿಕ ಸಭೆಗಳ ಭಾಗವಾಗಿ ಅನಸ್ ಹಕ್ಕಾನಿಯನ್ನು ಭೇಟಿಯಾದರು, ಕರ್ಜೈ ಅವರ ವಕ್ತಾರರು ತಾಲಿಬಾನ್‌ನ ಉನ್ನತ ರಾಜಕೀಯ ನಾಯಕ ಮುಲ್ಲಾ ಅಬ್ದುಲ್ ಘನಿ ಬರದಾರ್ ಅವರೊಂದಿಗೆ ಅಂತಿಮವಾಗಿ ಮಾತುಕತೆ ನಡೆಸಲು ಅನುಕೂಲ ವಾಗಲಿದೆ ಎಂದು ಹೇಳಿದರು. ಮೂಲಗಳ ಪ್ರಕಾರ ೨೦೧೨ರಲ್ಲೇ ಅಮೇರಿಕಾ ಸರ್ಕಾರ ಹಕ್ಕಾನಿ ನೆಟ್‌ವರ್ಕ್ ಅನ್ನು ಭಯೋತ್ಪಾದಕ ಗುಂಪಿಗೆ ಸೇರ್ಪಡೆ ಮಾಡಿದ್ದು, ಭವಿಷ್ಯದ ಸರ್ಕಾರದಲ್ಲಿ ಅದರ ಪಾಲ್ಗೊಳ್ಳುವಿಕೆ ಅಂರ‍್ರಾಷ್ಟಿçÃಯ ನಿರ್ಬಂಧಗಳನ್ನು ಹೇರಲು ದಾರಿ ಮಾಡಿಕೊಡಬಹುದು ಎಂದು ಹೇಳಿದ್ದಾರೆ ಎಂದು ಹೇಳಲಾಗಿದೆ. ತಾಲಿಬಾನ್‌ಗಳು ಅಂತರ್ಗತ, ಇಸ್ಲಾಮಿಕ್ ಸರ್ಕಾರ ವನ್ನು ಸ್ಥಾಪಿಸಲು ಪ್ರತಿಜ್ಞೆ ಮಾಡಿವೆಯಾದರೂ ಇಸ್ಲಾಂ ಧರ್ಮದ ಅತ್ಯಂತ ತೀವ್ರವಾದ ವ್ಯಾಖ್ಯಾನಗಳನ್ನು ಅನುಸರಿಸದವರಿಗೆ ಈ ಹಿಂದಿನ ತಾಲಿಬಾನ್ ಸರ್ಕಾರದ ನಿಯಮಗಳೇ ಅನುಸರಿಸಲಾಗುತ್ತದೆ ಎಂದು ಹೇಳಲಾಗಿದೆ.

ಅಫ್ಘಾನ್‌ನಲ್ಲಿರುವ ಕನ್ನಡಿಗರನ್ನು ಕರೆತರಲು ನೋಡಲ್ ಅಧಿಕಾರಿ ನೇಮಕ

ಬೆಂಗಳೂರು, ಆ. ೧೮: ತಾಲಿಬಾನ್ ಉಗ್ರರ ವಶದಲ್ಲಿರುವ ಅಫ್ಘಾನಿಸ್ತಾನದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕರ್ನಾಟಕ ರಾಜ್ಯದ ನಾಗರಿಕರನ್ನು ತವರಿಗೆ ವಾಪಸ್ ಕರೆತರಲು ರಾಜ್ಯ ಸರ್ಕಾರ ವಿಶೇಷ ನೋಡಲ್ ಅಧಿಕಾರಿಯನ್ನು ನೇಮಕ ಮಾಡಿದೆ. ಈಗಾಗಲೇ ಕೇಂದ್ರ ಸರ್ಕಾರ ಆಫ್ಘಾನಿಸ್ತಾನದಲ್ಲಿರುವ ಭಾರತೀಯರನ್ನು ಕರೆತರಲು ಮತ್ತು ಅವರ ರಕ್ಷಣೆಗಾಗಿ ವಿದೇಶಾಂಗ ಸಚಿವಾಲಯದಿಂದ ಸಹಾಯವಾಣಿ ಹಾಗೂ ಇ-ಮೇಲ್ ಸೇವೆಯನ್ನು ಕೂಡ ಆರಂಭಿಸಲಾಗಿದೆ. ಇದರ ನಡುವೆ ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಕನ್ನಡಿಗರ ಬಗ್ಗೆ ಮಾಹಿತಿ ನೀಡಿ, ಅವರನ್ನು ಸುರಕ್ಷಿತವಾಗಿ ಕರೆಸಿಕೊಳ್ಳಲು ಕೇಂದ್ರ ಸರ್ಕಾರದ ಜೊತೆ ಸಮನ್ವಯತೆಗಾಗಿ ಬೆಂಗಳೂರಿನ ಸಿಐಡಿ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿರುವ ಐಪಿಎಸ್ ಅಧಿಕಾರಿ ಉಮೇಶ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ. ಇವರು ಭಾರತ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದು, ಅಫ್ಘಾನ್‌ನಲ್ಲಿ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಭಾರತಕ್ಕೆ ವಾಪಾಸ್ ಕರೆತರುವ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಈ ಕುರಿತು ಕರ್ನಾಟಕದ ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಅವರ ಆದೇಶದ ಅನುಸಾರ ಉಮೇಶ್ ಕುಮಾರ್ ಅವರನ್ನು ನೇಮಿಸಲಾಗಿದೆ. ಅಫ್ಘಾನಿಸ್ತಾನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಜನ ಸಿಲುಕಿದ್ದಾರೆ. ಅಫ್ಘಾನಿಸ್ತಾನದಲ್ಲಿ ಕನ್ನಡಿಗರು ಮಾನಸಿಕ ಒತ್ತಡದಲ್ಲಿದ್ದಾರೆ. ಕನ್ನಡಿಗರನ್ನು ರಾಜ್ಯಕ್ಕೆ ಕರೆತರುವ ಕೆಲಸ ಮಾಡಬೇಕು. ಅದಕ್ಕಾಗಿ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಕ ಮಾಡಬೇಕು. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಮನವಿ ಮಾಡಲಾಗಿದೆ ಎಂದು ವಿಧಾನಸೌಧದಲ್ಲಿ ಮಾಜಿ ಸಚಿವ ಯು.ಟಿ. ಖಾದರ್ ಇಂದು ಹೇಳಿಕೆ ನೀಡಿದ್ದರು. ನಮ್ಮ ಮನವಿಗೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಅವರು ತಿಳಿಸಿದ್ದರು. ಅದರ ಬೆನ್ನಲ್ಲೇ ಇಂದು ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ.

ರಾಜ್ಯದಲ್ಲಿ ಕೊರೊನಾ ಇಳಿಮುಖ

ಬೆಂಗಳೂರು, ಆ. ೧೮: ಕೊರೊನಾ ಎರಡನೇ ಅಲೆ ನಂತರ ರಾಜ್ಯದಲ್ಲಿ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಇಂದು ೧,೩೬೫ ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ ೨೯,೩೩,೧೯೨ಕ್ಕೆ ಏರಿಕೆಯಾಗಿದೆ. ಒಂದೇ ದಿನದಲ್ಲಿ ಮಹಾಮಾರಿಗೆ ೨೨ ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ ೩೭,೦೬೧ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಪ್ರಕಟಿಸಿದೆ. ಬೆಂಗಳೂರಿನಲ್ಲಿ ಇಂದು ೩೨೭ ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ ೧೨,೩೩,೮೩೯ಕ್ಕೆ ಏರಿಕೆಯಾಗಿದೆ. ನಗರದಲ್ಲಿ ಸೋಂಕಿಗೆ ೨ ಮಂದಿ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಇಂದು ೧,೫೫೮ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿAದ ಚೇತರಿಸಿಕೊಂಡವರ ಸಂಖ್ಯೆ ೨೮,೭೪,೮೩೯ಕ್ಕೆ ಏರಿಕೆಯಾಗಿದೆ. ಇನ್ನು ೨೧,೨೬೬ ಸಕ್ರಿಯ ಪ್ರಕರಣಗಳಿವೆ. ರಾಜ್ಯಾದ್ಯಂತ ಇಂದು ೧,೭೯,೦೧೬ ಕೋವಿಡ್ ಟೆಸ್ಟ್ ನಡೆಸಲಾಗಿದ್ದು, ೧,೩೬೫ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. ೦.೭೬ಕ್ಕೆ ಇಳಿದಿದೆ.

ಸಂಸತ್ ಕಲಾಪಕ್ಕೆ ಅಡ್ಡಿಪಡಿಸುವವರ ವಿರುದ್ಧ ಕ್ರಮ

ಬೆಂಗಳೂರು, ಆ. ೧೮: ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ನಡೆಯುತ್ತಿರುವ ಅವಾಂತರಗಳ ಬಗ್ಗೆ ಮತ್ತು ಜನಪ್ರತಿನಿಧಿಗಳ ವರ್ತನೆ ಬಗ್ಗೆ ತೀವ್ರ ಬೇಸರ ಮತ್ತು ಕಳವಳ ವ್ಯಕ್ತಪಡಿಸಿದ ಉಪರಾಷ್ಟçಪತಿ ಹಾಗೂ ರಾಜ್ಯಸಭೆ ಸಭಾಪತಿ ವೆಂಕಯ್ಯ ನಾಯ್ಡು ಅವರು, ಸಂಸತ್ ಕಲಾಪಗಳಿಗೆ ಅಡ್ಡಿ ಉಂಟು ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ಹೇಳಿದ್ದಾರೆ. ವಿಧಾನಸೌಧದಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಗಳ ಒಕ್ಕೂಟ (ಎಫ್‌ಕೆಸಿಸಿಐ) ಆಯೋಜಿಸಿದ್ದ ಸರ್ ಎಂ. ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ನಾಯ್ಡು, ಕಲಾಪಕ್ಕೆ ಅಡ್ಡಿ ಎಂದರೆ ನೀವು ದೇಶದ ಕಾರಣಕ್ಕೆ ಅಡ್ಡಿಪಡಿಸುತ್ತಿದ್ದೀರಿ ಎಂದು ಅರ್ಥವೇ? ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಉತ್ತಮ ಚರ್ಚೆಗಳು ನಡೆಯಬೇಕು. ಚರ್ಚೆ ಉದ್ವಿಗ್ನತೆ ಇರುತ್ತದೆ. ಆದರೆ ಜನರು ಅವುಗಳನ್ನು ಗಮನಿಸಿದಂತೆ ಸದಸ್ಯರು ನಡೆದುಕೊಳ್ಳಬೇಕು ಎಂದರು. ನಾನು ಕ್ರಮ ತೆಗೆದುಕೊಳ್ಳಲು ಹೆದರುತ್ತೇನೆ ಎಂದಲ್ಲ. ನಾನು ಕ್ರಮ ತೆಗೆದುಕೊಳ್ಳಬಹುದು ಮತ್ತು ಅಗತ್ಯವಿದ್ದರೆ ನಾನು ಕ್ರಮ ತೆಗೆದುಕೊಳ್ಳುತ್ತೇನೆ. ಆದರೆ, ಇಂತಹ ವಿಷಯಗಳನ್ನು ದೂರದರ್ಶನದಲ್ಲಿ ನೋಡಿದಾಗ ಜನರು ದುಃಖಿತರಾಗುತ್ತಾರೆ. ಇದನ್ನು ಪ್ರತಿಯೊಬ್ಬರೂ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ರಾಜ್ಯಸಭೆಯಲ್ಲಿನ ಇತ್ತೀಚಿನ ಗದ್ದಲವನ್ನು ಉಲ್ಲೇಖಿಸಿ ಹೇಳಿದರು. ಕಲಾಪಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಕೇಂದ್ರ ಸಚಿವರು ಪ್ರತಿಪಕ್ಷ ಸದಸ್ಯರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರೆ, ಸಂಸತ್ತಿನ ಮೇಲ್ಮನೆಯಲ್ಲಿ ಗದ್ದಲಕ್ಕೆ ಪ್ರತಿಪಕ್ಷಗಳು ಸರ್ಕಾರವನ್ನು ದೂಷಿಸಿವೆ. ಚುನಾಯಿತ ಪ್ರತಿನಿಧಿಗಳು ಮತ್ತು ಉನ್ನತ ಹುದ್ದೆಗಳನ್ನು ಹೊಂದಿರುವವರು ಜನರ ಜೀವನ ಮಟ್ಟವನ್ನು ಸುಧಾರಿಸಲು ನಿರಂತರವಾಗಿ ಪ್ರಯತ್ನಿಸಬೇಕು ಮತ್ತು ಅವರ ಕಾರ್ಯಕ್ಷಮತೆಯನ್ನು ಸುಧಾರಿಸಲು ಪ್ರಯತ್ನಿಸಬೇಕು ಎಂದು ಉಪರಾಷ್ಟçಪತಿ ಕರೆ ನೀಡಿದರು.

ಕೊರೊನಾದಿಂದ ಬಳಲಿರುವ ಶ್ರೀಲಂಕಾಗೆ ಆಮ್ಲಜನಕ

ನವದೆಹಲಿ, ಆ. ೧೮: ಕೊರೊನಾ ಹಾವಳಿಯಿಂದ ತತ್ತರಿಸಿರುವ ಶ್ರೀಲಂಕಾದ ಆಸ್ಪತ್ರೆಗಳು ಅಮ್ಲಜನಕ ಕೊರತೆಯನ್ನು ಎದುರಿಸುತ್ತಿದ್ದು, ಭಾರತ ೩೫ ಟನ್ ಆಮ್ಲಜನಕವನ್ನು ಒದಗಿಸಲಿದೆ. ಶ್ರೀಲಂಕಾದಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ಏಕಾಏಕಿ ಹೆಚ್ಚಳ ಕಂಡ ಪರಿಣಾಮ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆ ತಲೆದೋರಿತ್ತು. ಭಾರತ ಎರಡು ಕಂಟೈನರ್‌ಗಳಲ್ಲಿ ಆಮ್ಲಜನಕ ಪೂರೈಕೆ ಮಾಡಲಿದೆ. ಈ ಕಂಟೈನರ್‌ಗಳನ್ನು ಕೊಂಡೊಯ್ಯಲು ಶ್ರೀಲಂಕಾ ನೌಕಾದಳ ತನ್ನ ಹಡಗೊಂದನ್ನು ಚೆನ್ನೆöÊಗೆ ಕಳುಹಿಸಿದೆ. ಎಸ್‌ಎಲ್‌ಎನ್‌ಎಸ್ ಎನ್ನುವ ಹೆಸರಿನ ಶ್ರೀಲಂಕಾ ಹಡಗು ಬುಧವಾರ ಸಂಜೆ ಚೆನ್ನೆöÊ ನಗರವನ್ನು ತಲುಪಿ, ಗುರುವಾರ ಮುಂಜಾನೆ ಆಮ್ಲಜನಕದ ಕಂಟೈನರ್ ಹೊತ್ತುಕೊಂಡು ತನ್ನ ದೇಶಕ್ಕೆ ಮರಳಲಿದೆ. ಮುಂದಿನ ದಿನಗಳಲ್ಲಿ ಶ್ರೀಲಂಕಾ ೧೦೦ ಮೆಟ್ರಿಕ್ ಟನ್ ಪ್ರಮಾಣದ ಆಮ್ಲಜನಕವನ್ನು ಭಾರತದಿಂದ ಆಮದು ಮಾಡಿಕೊಳ್ಳುವ ಬಗ್ಗೆ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ. ಬೇಡಿಕೆಗೆ ತಕ್ಕಂತೆ ಶ್ರೀಲಂಕಾ ಭಾರತದ ಬಳಿ ಆಮ್ಲಜನಕ ಖರೀದಿ ಮಾಡಲಿದೆ. ಶ್ರೀಲಂಕಾದಲ್ಲಿ ಕೊರೊನಾ ಹಾವಳಿ ಹೆಚ್ಚಳಕ್ಕೆ ಡೆಲ್ಟಾ ವೈರಾಣು ಕಾರಣ ಎಂದು ಅಲ್ಲಿನ ಅರೋಗ್ಯಾಧಿಕಾರಿಗಳು ಈ ಹಿಂದೆ ತಿಳಿಸಿದ್ದರು.