ಮಾನವೀಯತೆಗೂ ಒಂದು ದಿನವಿದೆಯೇನು ಎಂದು ತುಟಿ ಮೇಲೆ ನಗೆ ತರಿಸಿದರೂ,ಎಲ್ಲರನ್ನು ಒಂದರೆ ಘಳಿಗೆ ಚಿಂತನೆಗೆ ಹಚ್ಚಿಬಿಡುವ ವಿಷಯವಿದು.ಪರಸ್ಪರ ಸ್ನೇಹಭಾವ ಸಹಕಾರ, ಸೌಹಾರ್ದ ಮನೋಭಾವಗಳ ಗಣಿ ಗ್ರಾಮೀಣ ಪ್ರದೇಶದ ಕುಟುಂಬಗಳು. ವಿಭಿನ್ನ ಮನೋಸ್ಥಿತಿಗಳಲ್ಲೂ ಏಕ ನಿರ್ಧಾರ, ಸಮಯೋಚಿತ.

ಉಲ್ಲಾಸ, ಸಂಭ್ರಮ, ಒಗ್ಗಟ್ಟು ಕೂಡು ಕುಟುಂಬ ಎಲ್ಲವನ್ನು ಕಾಣಬಹುದು. ಇಂದಿಗೂ ಹಲವೆಡೆ ಉಳಿಸಿಕೊಂಡ ಸಂಸ್ಕೃತಿಗಳ ಛಾಯೆಯನ್ನು ಬಿಂಬಿಸುತ್ತಿವೆ. ನಗರ ಪ್ರದೇಶದಲ್ಲಿ ಜನರ ನಡುವೆ ಈ ಬಾಂಧವ್ಯಗಳು ಇಲ್ಲವೆಂದಲ್ಲ., ಇವೆ. ಆದರೆ ಆಧುನಿಕತೆ ಮತ್ತು ಹಣಗಳಿಕೆಯ ಬರದಲ್ಲಿ ಮೂಲೆಗುಂಪಾಗಿವೆ. ರಿಪೇರಿಗೆ ಸಮಯಾವಕಾಶವೇ ಇಲ್ಲವೆಂಬ ದುಡಿಮೆಯ ಗಳಿಕೆ ಭರಾಟೆಗೆ ಸಿಲುಕಿವೆ.

ಕೊರೊನಾದಂತಹ ಸಾಂಕ್ರಾಮಿಕ ರೋಗದ ಚಾಟಿ ಏಟು ಹತ್ತು ಹಲವು ಮೌಲ್ಯಗಳ ಮರುಕಳಿಸುವಿಕೆಗೆ ಮತ್ತು ಒಂದೆಡೆ ಕುಳಿತು ಸಾವಾಧಾನದ ಚಿಂತನೆಗೆ ಭರಪೂರ ಸಮಯ ನೀಡಿದೆ. ನೋಡನೋಡತ್ತಿದ್ದಂತೆಯೆ ಆಗಿ ಹೋದ ನೆರೆಹೊರೆಯ, ಬಂಧುಗಳ, ಸಹೋದ್ಯೋಗಿಗಳ, ಪರಿಚಿತರ ಸಾವು ನೋವುಗಳ ಆಕ್ರಂದನಗಳು ಇನ್ನೂ ಹಸಿಯಾಗಿಯೆ ಉಳಿದಿವೆ.

ಮಕ್ಕಳ ವಿದ್ಯಾಭ್ಯಾಸದ ಕತೆ ಒಂದು ರೀತಿಯಾದರೆ ಕೂಲಿ ಕಾರ್ಮಿಕರ ಕೆಲಸವಿಲ್ಲದ ಪರದಾಟ, ಮಧ್ಯಮ ವರ್ಗದವರ ಹೋರಾಟ, ಭಿಕ್ಷುಕ ನಿರಾಶ್ರಿತರ ಸಂಕಟ ಮರೆಯದ ಚಿತ್ರಣಗಳನ್ನು ಸೃಷ್ಟಿಸಿವೆ. ಉದ್ಯೋಗ ಕ್ಷೇತ್ರದಲ್ಲಿನ,ನೆರೆಹೊರೆಯ ಜನರ ನಡುವಿನ ಸಮಾಜದ ಒಳಗೆ, ಶಾಲೆಯ ಒಳಗೆ, ಕುಟುಂಬದ ಒಳಗೆ, ಸಂಚಾರದಲ್ಲಿ ಮಂದಿರ, ಮಠ, ಚರ್ಚು, ಮಸೀದಿಗಳಲ್ಲಿ ಎಲ್ಲೆಲ್ಲೂ ಬದುಕಿಗೆ ಬೇಕೆನಿಸಿ ಅಳವಡಿಸಿಕೊಳ್ಳಬೇಕೆನಿಸುವ, ಎಂದಿಗೂ ಬೇಡದ್ದು ಎನಿಸುವ ಅನೇಕಾನೇಕ ಅನುಭವಗಳು ಸರಿದು ಹೋಗುತ್ತಿರುತ್ತವೆ. ಬೇಕೆನಿಸಿ ಅಳವಡಿಸಿಕೊಳ್ಳಬಹುದಾದ ಮೌಲ್ಯಗಳಲ್ಲಿ ಮಹತ್ತರ ಸ್ಥಾನದ್ದೆ ಈ ಮಾನವೀಯತೆ. ಇದರ ಮಜಲುಗಳೆ ಶಾಲಾ ತರಗತಿ ಕೋಣೆಗಳು. ಶಾಲೆಯಲ್ಲಿ ಸ್ವತಃ ಮಗು ಪಾಲಿಸುವ ಸಹಾಯ, ಕರುಣೆ, ಅನುಕಂಪ, ಸಹಾನುಭೂತಿ ಸಹಕಾರ, ಹಂಚಿ ತಿನ್ನುವಿಕೆ, ಒಗ್ಗಟ್ಟು, ಸೌಹಾರ್ದತೆಗಳು ಮಾತ್ರವೇ ಮಾನವೀಯತೆಗೆ ಅಡಿಪಾಯ ಹಾಕಿಕೊಡಬಲ್ಲವು. ಮಗು ಹುಟ್ಟುವಾಗ ವಿಶ್ವಮಾನವ ಬೆಳೆಯುತ್ತಾ ಅಲ್ಪ ಮಾನವ ಎಂಬ ರಾಷ್ಟçಕವಿ ಕುವೆಂಪುರವರ ನುಡಿಯಂತೆ ಮಾನವೀಯತೆಯನ್ನು ಲ್ಯಾಂಟೀನ್ ಬೆಳಕಿನಲ್ಲಿ ಹುಡುಕಾಡುವ ಪರಿಸ್ಥಿತಿ ಈ ದಿನಮಾನಗಳಲ್ಲಿ ಬಂದೊಗಿದೆ ಎಂದರೆ ತಪ್ಪಾಗಲಾರದೆನಿಸುತ್ತದೆ.

ಅಸೂಯೆ, ದ್ವೇಷ, ವೈಷಮ್ಯಗಳಿಗೆ ಕಳೆ ಕಟ್ಟುವ ಜನರ ಸಂಚಿಗೆ ಮಾನವೀಯತೆಗಳು ಮರೆಯಾಗದೆ ಉಳಿದಾವೇನು ?

ಕಟ್ಟಿ ಕೊಟ್ಟ ಬುತ್ತಿ ಹಳಸದೆ ಉಳಿಯುವುದೆ..?

ಎಲ್ಲರಿಗೂ ವಿಶ್ವ ಮಾನವೀಯತೆಯ ದಿನದ ಶುಭಾಶಯಗಳು

-ಮಾಲಾಮೂರ್ತಿ, ಕುಶಾಲನಗರ