ಸೋಮವಾರಪೇಟೆ, ಆ. ೧೭: ವಿವಿಧ ಆಮಿಷಗಳನ್ನು ಒಡ್ಡಿ ಮತಾಂತರ ಮಾಡುವ ವ್ಯಕ್ತಿಗಳ ವಿರುದ್ಧ ಸಮಾಜ ಸದಾಕಾಲ ಜಾಗೃತವಾಗಿರಬೇಕೆಂದು ಇಲ್ಲಿನ ವಿರಕ್ತ ಮಠಾಧೀಶರಾದ ಶ್ರೀ ಮೋಕ್ಷಪತಿ ಸ್ವಾಮೀಜಿ ಕರೆ ನೀಡಿದರು.

ಮಠದ ಆವರಣದಲ್ಲಿ ವೀರಶೈವ ಸಮಾಜದ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಸಮಾಜದ ಕೆಳವರ್ಗದ ಜನತೆಯನ್ನೇ ಗುರಿಯಾಗಿಸಿಕೊಂಡು ಅವರಿಗೆ ವಿವಿಧ ಆಮಿಷವೊಡ್ಡಿ ಮತಾಂತರ ಮಾಡುವ ಮೂಲಕ ಸಮಾಜದಲ್ಲಿ ಶಾಂತಿ ಕದಡುವ ಕೆಲಸಗಳಾಗುತ್ತಿವೆ. ಈ ಬಗ್ಗೆ ಜನತೆ ಎಚ್ಚರ ವಹಿಸಬೇಕೆಂದರು.

೧೨ನೆ ಶತಮಾನದಲ್ಲಿಯೇ ಬಸವೇಶ್ವರರು ಇಂತಹ ಸಾಮಾಜಿಕ ಪಿಡುಗಿನ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಆದರೆ ಇಂತಹ ಪಿಡುಗು ಇಂದಿಗೂ ಜೀವಂತವಾಗಿರುವುದು ವಿಷಾದನೀಯ ಎಂದ ಅವರು, ಸಮುದಾಯದ ಜನತೆ ಆರ್ಥಿಕವಾಗಿ, ಸಾಮಾಜಿಕವಾಗಿ ಸದೃಢರಾಗಬೇಕು. ಆ ಮೂಲಕ ದೀನ ದುರ್ಬಲರಿಗೆ ಸಹಾಯ ಮಾಡಬೇಕೆಂದರು.

ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ.ಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ವೀರಶೈವ ಸಮಾಜದ ಯಜಮಾನ ಕೆ.ಎನ್. ಶಿವಕುಮಾರ್, ಶೆಟ್ರು ಕೆ.ಎನ್. ತೇಜಸ್ವಿ, ಕಾರ್ಯದರ್ಶಿ ಜೆ.ಸಿ. ಶೇಖರ್, ಅಕ್ಕನ ಬಳಗದ ಅಧ್ಯಕ್ಷೆ ಜಲಜಾ ಶೇಖರ್, ನಿರ್ದೇಶಕರುಗಳಾದ ಗುರುಪ್ರಸಾದ್, ನಂದೀಶ್, ಸಚಿನ್, ಭುವನೇಶ್ವರ್ ಸೇರಿದಂತೆ ಇತರರು ಹಾಜರಿದ್ದರು.