ಮಡಿಕೇರಿ, ಆ. ೧೩: ಶ್ರಾವಣ ಮಾಸದ ಶುಕ್ಲ ಪಕ್ಷದ ೫ನೇ ದಿನ ಆಚರಿಸಲ್ಪಡುವ ನಾಗರ ಪಂಚಮಿಯನ್ನು ಜಿಲ್ಲೆಯ ವಿವಿಧೆಡೆ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಮಡಿಕೇರಿಯ ಬ್ರಾಹ್ಮಣರ ಬೀದಿಯ ಅಶ್ವತ್ಥಕಟ್ಟೆಯಲ್ಲಿ ನಾಗನಕಲ್ಲಿಗೆ ಅಭಿಷೇಕ, ಅಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಜರುಗಿದವು. ಶ್ರೀ ಮುತ್ತಪ್ಪ ದೇವಾಲಯದಲ್ಲಿ ವಿವಿಧ ಪೂಜಾ ಕೈಂಕರ್ಯ ಭಕ್ತಿಭಾವದಿಂದ ನೆರವೇರಿತು. ಭಕ್ತಾದಿಗಳು ನಾಗನಿಗೆ ವಿಶೇಷ ಪೂಜೆ ಸಲ್ಲಿಸಿದರು. ನಗರದ ಓಂಕಾರೇಶ್ವರ, ದಂಡಿನ ಮಾರಿಯಮ್ಮ, ಕೋಟೆ ಮಾರಿಯಮ್ಮ ದೇವಾಲಯ ಸೇರಿದಂತೆ ನಗರದ ವಿವಿಧ ದೇವಾಲಯದಲ್ಲಿ ನಾಗಾರಾಧನೆ ನಡೆಯಿತು.

ಮಹಿಳೆಯರು ನಸುಕಿನ ವೇಳೆಯಲ್ಲಿ ಮನೆಯನ್ನು ಸ್ವಚ್ಛಗೊಳಿಸಿ, ಸಾರಿಸಿ ರಂಗೋಲಿ ಹಾಕಿ, ದೇವಸ್ಥಾನದಲ್ಲಿರುವ ನಾಗಪ್ರತಿಮೆಗಳಿಗೆ ಹಾಲು ಎರೆದು, ಹೂ ಹಣ್ಣು ಇಟ್ಟು ಭಕ್ತಿಯಿಂದ ಪೂಜಿಸಿದರು. ನಾಗರ ಪಂಚಮಿ ಹಬ್ಬಕ್ಕೆಂದೇ ವಿಶೇಷವಾಗಿ ತಯಾರಿಸಿದ ತಿಂಡಿಗಳನ್ನು ನಾಗಪ್ರತಿಮೆಗೆ ನೈವೇದ್ಯ ಮಾಡಿ ಹಬ್ಬ ಆಚರಿಸಿದರು.ಸೋಮವಾರಪೇಟೆ: ಸೋಮವಾರಪೇಟೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ವಿವಿಧೆಡೆಗಳಲ್ಲಿ ನಾಗರ ಪಂಚಮಿಯನ್ನು ಆಚರಿಸಲಾಯಿತು.

ಪಟ್ಟಣದ ಸೋಮೇಶ್ವರ ದೇವಾಲಯ, ಆನೆಕೆರೆ, ಅಯ್ಯಪ್ಪ ಸ್ವಾಮಿ ದೇವಾಲಯ, ಕಟ್ಟೆ ಬಸವೇಶ್ವರ ದೇವಾಲಯ, ಚಂದನಮಕ್ಕಿಯ ನಾಗಬನ, ಅರಸಿನಕುಪ್ಪೆ ಸಿದ್ಧಲಿಂಗಪುರದ ಶ್ರೀ ಮಂಜುನಾಥ ಹಾಗೂ ನವನಾಗನಾಥ ದೇವಾಲಯಗಳಲ್ಲಿ ನಾಗರ ಪಂಚಮಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಅರಸಿನಕುಪ್ಪೆ ಶ್ರೀಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಗಣಪತಿ ಹೋಮ, ಅಭಿಷೇಕ, ಮಹಾಮಂಗಳಾರತಿ ನಡೆಯಿತು. ಶ್ರೀ ನವನಾಗನಾಥ ಸನ್ನಿಧಿಯಲ್ಲಿ ಪಂಚಮಿ ಪ್ರಯುಕ್ತ ತಂಬಿಲ ಸೇವೆ, ಅಭಿಷೇಕ, ಅಲಂಕಾರ, ಮಹಾಮಂಗಳಾರತಿ, ನಾಗರ ಪಂಚಮಿ ಪ್ರಯುಕ್ತ ವಿಶೇಷ ಪೂಜೆಗಳು ನೆರವೇರಿದವು.

ಕ್ಷೇತ್ರದ ಪ್ರಧಾನ ಗುರುಗಳಾದ ಶ್ರೀರಾಜೇಶ್‌ನಾಥ್ ಗುರೂಜಿ ಮಾರ್ಗದರ್ಶನದಲ್ಲಿ, ಪ್ರಧಾನ ಅರ್ಚಕ ಜಗದೀಶ್ ಉಡುಪ, ಪರಮೇಶ್ವರ ಭಟ್, ಮಯೂರ ಭಟ್ ಅವರುಗಳ ಪೌರೋಹಿತ್ವದಲ್ಲಿ ಪೂಜಾ ವಿಧಿ ವಿಧಾನಗಳು ನಡೆದವು.

ದೇವಾಲಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾಪಂಡ ಮುತ್ತಪ್ಪ, ಕಾರ್ಯದರ್ಶಿ ಪ್ರಕಾಶ್, ದೇವಾಲಯ ಸಮಿತಿ ಅಧ್ಯಕ್ಷ ಮೋಹನ್, ಕಾರ್ಯದರ್ಶಿ ರಮೇಶ್ ಸೇರಿದಂತೆ ಪದಾಧಿಕಾರಿಗಳು, ಗ್ರಾಮಸ್ಥರು, ಭಕ್ತಾದಿಗಳು ಪಾಲ್ಗೊಂಡಿದ್ದರು.ವೀರಾಜಪೇಟೆ

ವೀರಾಜಪೇಟೆ: ವೀರಾಜಪೇಟೆ ಸಮೀಪದ ಬೇಟೋಳಿ ರಾಮನಗರದ ಶ್ರೀ ಪುದುಪಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ನಾಗರ ಪಂಚಮಿ ಯನ್ನು ಸರಳವಾಗಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕÀ ಬಿ. ಎಸ್. ವೇಣುಗೋಪಾಲ್ ಪೂಜಾ ಕಾರ್ಯ ಕ್ರಮಗಳನ್ನು ನೆರವೇರಿಸಿದರು.

ಅಯ್ಯಪ್ಪ ಸ್ವಾಮಿ, ಗಣಪತಿ ಹಾಗೂ ವನದುರ್ಗೆ ದೇವಿಯ ಪೂಜೆಯ ಬಳಿಕ ನಾಗ ಪೂಜಾರಾದನೆ ನಡೆಯಿತು. ನಾಗನಿಗೆ ಅಭಿಷೇಕ, ಸಂಕಲ್ಪ ನೆರವೇರಿಸಿ, ನಾಗತಂಬಿಲ ಹಾಗೂ ಮಹಾ ಮಂಗಳಾರತಿ ಮಾಡಲಾಯಿತು. ಬಳಿಕ ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು.

ಭಕ್ತರು ಸಾಮಾಜಿಕ ಅಂತರವನ್ನು ಕಾಪಾಡುವು ದರೊಂದಿಗೆ ಪೂಜಾ ಕಾರ್ಯ ಕ್ರಮದಲ್ಲಿ ಪಾಲ್ಗೊಂಡರು. ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಸರಳವಾಗಿ ಆಚರಿಸಲಾಯಿತು. ಈ ಸಂದರ್ಭ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಇದ್ದರು.

ಸುಂಟಿಕೊಪ್ಪ : ಸುಂಟಿಕೊಪ್ಪ ಸೇರಿದಂತೆ ಹೋಬಳಿ ವ್ಯಾಪ್ತಿಯ ದೇವಾಲಯಗಳಲ್ಲಿ ಸರಳ ರೀತಿಯಲ್ಲಿ ಭಕ್ತರ ದಟ್ಟಣೆ ಇಲ್ಲದೆ ಶುಕ್ರವಾರ ಶ್ರದ್ಧಾಭಕ್ತಿಯಿಂದ ನಾಗರಪಂಚಮಿ ಹಬ್ಬವನ್ನು ಆಚರಿಸಲಾಯಿತು.

ಜನ ದಟ್ಟಣೆ ಇಲ್ಲದೆ ನಾಗರಪಂಚಮಿ ಹಬ್ಬವು ಸಡಗರ ಸಂಭ್ರಮವಿಲ್ಲದೆ ಸರಳ ರೀತಿಯಲ್ಲಿ ನೇರವೇರಿತು.

ಚಾಮುಂಡೇಶ್ವರಿ ದೇವಾಲಯದಲ್ಲಿ ಬೆಳಿಗ್ಗೆಯಿಂದಲೇ ಮುಖ್ಯ ಅರ್ಚಕ ಮಂಜುನಾಥ್ ಉಡುಪ ರವರು ನಾಗ ಪೂಜೆ, ಕುಂಕುಮಾರ್ಚನೆ, ನೈವೇಧ್ಯ, ಅಭಿಷೇಕ ನೆರವೇರಿಸಿದರು. ೧೦ ಗಂಟೆಗೆ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನೇರವೇರಿತು.

ಪನ್ಯದ ಬೆಳ್ಳಾರಿಕಮ್ಮ ದೇವಾಲಯದಲ್ಲೂ ಸರಳವಾಗಿ ನಾಗರ ಪಂಚಮಿಯನ್ನು ಆಚರಿಸಲಾಯಿತು.

ಬೆಳಿಗ್ಗೆ ೧೧ ಗಂಟೆಯಿAದ ಹಾಲು ಮತ್ತು ಎಳನೀರು ಅಭಿಷೇಕ, ಗಂಧ, ಅರಶಿನ, ಕುಂಕುಮದ ನೈವೇಧ್ಯ ನಡೆಯಿತು. ಗ್ರಾಮದ ಬೆರಳೆಣಿಕೆಯಷ್ಟು ಮಂದಿ ಭಕ್ತರು ಆಗಮಿಸಿದ್ದರು. ೧ ಗಂಟೆಗೆ ಮಹಾಪೂಜೆ, ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.

ದೇವಾಲಯ ಸಮಿತಿಯ ಅಧ್ಯಕ್ಷ ಪಟ್ಟೆಮನೆ ಉದಯಕುಮಾರ್, ಪಿ.ಕೆ.ಅನಿಲ್, ಮಾಗೀಲು ವಸಂತ, ಕುಂಟಳ್ಳಿ ಚಂಗಪ್ಪ, ನಿರುಣಿಮನೆ ಗಣಪತಿ, ಮಧು, ಪಟ್ಟೆಮನೆ ಗಿರಿಜಾ, ಭಾಗೀರಥಿ, ರೋಹಿಣಿ ಸೇರಿದಂತೆ ಪದಾಧಿಕಾರಿಗಳು ಇದ್ದರು.

ಸಮೀಪದ ನಾಕೂರು, ಕೆದಕಲ್, ಕಂಬಿಬಾಣೆ, ಕೊಡಗರಹಳ್ಳಿ, ಮಾದಾಪುರ ದೇವಾಲಯಗಳಲ್ಲೂ ನಾಗರ ಪಂಚಮಿ ಹಬ್ಬವನ್ನು ಸರಳವಾಗಿ ಆಚರಿಸಲಾಯಿತು.

ನಾಪೋಕ್ಲು: ನಾಪೋಕ್ಲು ಸುತ್ತಮುತ್ತ ವಿವಿಧ ದೇವಾಲಯಗಳಲ್ಲಿ ನಾಗರಪಂಚಮಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಸಮೀಪದ ಪಾಲೂರಿನ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅರ್ಚಕ ದೇವಿಪ್ರಸಾದ್ ನಾಗಸನ್ನಿಧಿಯಲ್ಲಿ ಪಂಚಾಮೃತ ಅಭಿಷೇಕ ಸೇರಿದಂತೆ ಇನ್ನಿತರ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಕೂರುಳಿ ಪರಂಬುವಿನ ಸುಭಾಷ್ ನಗರದ ನಾಗ ಸನ್ನಿಧಿಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಅರ್ಚಕ ಹರೀಶ್ ಭಟ್ ಧಾರ್ಮಿಕ ಕಾರ್ಯ ನೆರವೇರಿಸಿದರು. ಪ್ರಮುಖರಾದ ಮೋಹನ್, ಪ್ರವೀಣ್ ರೈ, ಜೀವನ್, ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಚೆಟ್ಟಳ್ಳಿ: ಚೆಟ್ಟಳ್ಳಿಯ ಶ್ರೀಮಂಗಲ ಶ್ರೀ ಭಗವತಿ ದೇವಾಲಯದ ಸನ್ನಿದ್ಧಿಯ ನಾಗನ ನೆಲೆಯಲ್ಲಿ ನಾಗರ ಪಂಚಮಿ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಲಾಯಿತು.

ಶ್ರಾವಣ ಮಾಸದ ಶುದ್ಧ ಪಂಚಮಿಯ ದಿನವಾದ ಇಂದು ಚೆಟ್ಟಳ್ಳಿಯ ಶ್ರೀಮಂಗಲ ಭಗವತಿ ದೇವಾಲಯದಲ್ಲಿ ಅಶ್ವಥ ಮರದ ಕೆಳಗೆ ಪ್ರತಿಷ್ಠಾಪಿಸಿರುವ ನಾಗರ ಮೂರ್ತಿಗೆ ಹಾಲು ಹಣ್ಣು ನೈವೇದ್ಯ ಅರ್ಪಿಸಿ ಅರ್ಚಕರು ವಿಶೇಷ ಪೂಜೆ ಸಲ್ಲಿಸಿದರು.

ಕೂಡಿಗೆ: ಕೂಡಿಗೆ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ ಆವರಣದಲ್ಲಿ ನಾಗರ ಪಂಚಮಿ ಅಂಗವಾಗಿ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.

ದೇವರಿಗೆ ಬೆಳಿಗ್ಗೆ ನಿಂದಲೇ ವಿವಿಧ ಅಭಿಷೇಕ ಹೋಮ ಹವನಗಳು ನಡೆದವು ಪೂಜೆ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಕೋವಿಡ್ ನಿಯಮನುಸಾರವಾಗಿ ಬಂದು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಪೂಜಾ ಕೈಂಕರ್ಯವನ್ನು ಪ್ರಧಾನ ಅರ್ಚಕ ನವೀನ ಭಟ್ ನೆರವೇರಿಸಿದರು.

ಗುಡ್ಡೆಹೊಸೂರು: ಇಲ್ಲಿಗೆ ಸಮೀಪದ ಬೆಟ್ಟಗೇರಿ ಗ್ರಾಮದ ಶ್ರೀಚೌಡೇಶ್ವರಿ ದೇವಸ್ಥಾನ ಆವರಣದಲ್ಲಿ ನೂತನವಾಗಿ ಪ್ರತಿಷ್ಠಾಪಿಸಿದ ನಾಗನಕಟ್ಟೆಯಲ್ಲಿ ನಾಗರಪಂಚಮಿ ಅಂಗವಾಗಿ ವಿಶೇಷ ಪೂಜೆ ನಡೆಸಲಾಯಿತು. ಪೂಜಾ ಕಾರ್ಯವನ್ನು ಕುಶಾಲನಗರದ ಅಯ್ಯಪ್ಪಸ್ವಾಮಿ ದೇವಸ್ಥಾನದ ಅರ್ಚಕ ಸೋಮಶೇಖರ್ ಮತ್ತು ತಂಡದವರು ನೆರವೇರಿಸಿದರು.

ಈ ಸಂದರ್ಭ ಶ್ರೀಚೌಡೇಶ್ವರಿ ಜೀರ್ಣೊದ್ಧಾರ ಟ್ರಸ್ಟ್ನ ಅಧ್ಯಕ್ಷ ಬಿ.ಬಿ.ಶಿವಕುಮಾರ್, ಉಪಾಧ್ಯಕ್ಷ ಕೆ.ಕೆ.ಚಿದಾನಂದ, ಕಾರ್ಯದರ್ಶಿ ಕೆ.ಕೆ.ತಿಮ್ಮಯ್ಯ, ಖಜಾಂಜಿ ಬಾಲಕೃಷ್ಣ, ನಿರ್ದೇಶಕರಾದ ಅಂಬಾಡಿ ರವಿ, ಐಲಪಂಡ ಕುಶಾಲಪ್ಪ, ಕೆ.ಪಿ. ನಾಣಯ್ಯ, ಕೆ.ಕೆ. ಬಸಪ್ಪ, ಕುಶಾಲಪ್ಪ, ಕುಡೆಕಲ್ ಗಣೇಶ್, ಸುಧಿ, ಮುತ್ತಪ್ಪ, ಅಣ್ಣಯ್ಯ, ಕೆ.ಬಿ.ಸುಂದರ ಗ್ರಾಮಸ್ಥರಾದ ಸಿನಪ್ಪ, ಜೀತೇಶ್, ಸಾಗರ್, ವಿಶ್ವನಾಥ ಭಾಗವಹಿಸಿದ್ದರು. ಮಧ್ಯಾಹ್ನ ಅನ್ನಸಂತರ್ಪಣೆ ಕಾರ್ಯ ನೆರವೇರಿತು.*ಗೋಣಿಕೊಪ್ಪ: ಶ್ರಾವಣ ಮಾಸದ ಮೊದಲ ಹಬ್ಬದ ಆಚರಣೆಯಾದ ನಾಗರಪಂಚಮಿಯನ್ನು ಗೋಣಿಕೊಪ್ಪ ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿ ಆಚರಿಸಲಾಯಿತು.

ಭಕ್ತಾದಿಗಳು ನಾಗನ ಆರಾಧನೆಗೆ ಬೆಳೆಗಿನ ಜಾವವೇ ಸರದಿ ಸಾಲಿನಲ್ಲಿ ನಿಂತು ನಾಗನ ಮೂರ್ತಿಗಳಿಗೆ ವಿಶೇಷ ಅಭಿಷೇಕಗಳನ್ನು ಅರ್ಪಿಸಿ ಸೇವೆ ಸಲ್ಲಿಸಿದರು. ನಾಗನಿಗೆ ಕ್ಷಿರಾಭಿಷೇಕ, ಪಂಚಾಮೃತಾಭಿಷೇಕ, ಎಳನೀರಾಭಿಷೇಕ, ಪುಷ್ಪಾರ್ಚನೆ, ಮಂಗಳಾರತಿ ಸೇರಿದಂತೆ ಹಲವು ಸೇವೆಗಳು ನಡೆದವು.

ಕೊರೊನಾ ನಿಯಮಪಾಲನೆಯ ಜಾಗೃತಿಯೊಂದಿಗೆ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಮನೆಯಪಂಡ ಮೇಜರ್ ಬೋಪಣ್ಣ, ಕಾರ್ಯದರ್ಶಿ ಪೊನ್ನಿಮಾಡ ಬೋಜಪ್ಪ, ಖಜಾಂಚಿ ಜಪ್ಪೆಕೊಡಿ ರಾಜ ಉತ್ತಪ್ಪ, ಸದಸ್ಯರಾದ ವಿ.ಟಿ. ವಾಸು, ಪಿ.ವಿ. ಶೋಬಿತ್, ಕುಲ್ಲಚಂಡ ಪ್ರಮೋದ್ ಗಣಪತಿ, ಕಾಡ್ಯಮಾಡ ಚೇತನ್, ಕೊಪ್ಪಿರ ಸನ್ನಿ ಸೋಮಯ್ಯ ಹಾಗೂ ದೇವಸ್ಥಾನದ ವ್ಯವಸ್ಥಾಪಕ ಮಧು ಭಕ್ತಾದಿಗಳಿಗೆ ಸೂಕ್ತ ವ್ಯವಸ್ಥೆಯನ್ನು ಒದಗಿಸಿದರು.