ಮಡಿಕೇರಿ, ಆ. ೧೪: ಕನ್ನಡ ಜಾಗೃತಿ ಸಮಿತಿ ಸಭೆಯು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಮಿತಿ ಸದಸ್ಯರಾದ ರಜಿತಾ ಕಾರ್ಯಪ್ಪ, ಕಾಜೂರು ಸತೀಶ್, ಇ. ರಾಜು ಇತರರು ಪಾಲ್ಗೊಂಡಿದ್ದರು. ಸಭೆಯಲ್ಲಿ ಮಾತನಾಡಿದ ಕಾಜೂರು ಸತೀಶ್, ಸರ್ಕಾರಿ ಸಭೆ ಸಮಾರಂಭಗಳು ಹಾಗೂ ಕಾರ್ಯಕ್ರಮ ದಲ್ಲಿ ಹಾರ, ತುರಾಯಿ, ಹೂಗುಚ್ಚ ಬದಲಾಗಿ, ಕನ್ನಡ ಪುಸ್ತಕ ನೀಡಬೇಕೆಂದು ಸರ್ಕಾರ ಆದೇಶಿಸಿದೆ. ಆ ದಿಸೆಯಲ್ಲಿ ಕನ್ನಡ ಪುಸ್ತಕಗಳನ್ನು ನೀಡುವಂತಾಗಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬಳಸಬೇಕು, ಎಲ್ಲಾ ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡನಾಮ ಫಲಕ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗ ಬೇಕು, ಕನ್ನಡ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಕನ್ನಡ ಭಾಷೆಯನ್ನು ಅನ್ನದ ಭಾಷೆಯನ್ನಾಗಿ ಮಾಡಬೇಕು. ಜೊತೆಗೆ ಕನ್ನಡ ಮಾದ್ಯಮದಲ್ಲಿ ಓದಿದ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡ ಬೇಕು ಎಂದು ಸಲಹೆ ಮಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಕೆ.ಟಿ. ದರ್ಶನ್ ಮಾತನಾಡಿ, ಗಡಿ ಭಾಗಗಳಲ್ಲಿ ಕನ್ನಡ ಶಾಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ದಾಖಲಾಗುತ್ತಿದ್ದು, ಅಗತ್ಯ ಮೂಲ ಸೌಲಭ್ಯವನ್ನು ಒದಗಿಸಬೇಕು. ಕನ್ನಡ ಕುರಿತು ಅಂತರ್ಜಾಲದಲ್ಲಿ ಮಾಹಿತಿ ಲಭ್ಯವಾಗುವಂತಾಗಬೇಕು, ಪ್ರಮುಖ ರಸ್ತೆಗಳಿಗೆ ಕನ್ನಡ ಕವಿ ಹಾಗೂ ಸಾಹಿತಿಗಳ ಹೆಸರಿಡಬೇಕು. ಬ್ಯಾಂಕ್‌ನ ರಸೀದಿಯಲ್ಲಿ ಕನ್ನಡ ಭಾಷೆ ಬಳಸುವಂತಾಗಬೇಕೆAದು ಸಮಿತಿ ಸದಸ್ಯರು ಪ್ರಸ್ತಾಪಿಸಿದ್ದಾರೆ ಎಂದು ಸಭೆಯ ಗಮನಕ್ಕೆ ತಂದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಕಾಂತರಾಜು, ಮಣಜೂರು ಮಂಜುನಾಥ್ ಇದ್ದರು.