ಕರಿಕೆ, ಆ. ೧೪: ಅದೊಂದು ಸುಂದರ ಪ್ರದೇಶ, ಕಣ್ಣು ಹಾಯಿಸಿದ ಕಡೆಗಳೆಲ್ಲ ಹಸಿರ ಸೊಬಗು, ಸ್ವರ್ಗವೆ ಧರಗೆ ಬಂದAತಿರುವ ಆ ಪ್ರದೇಶದ ಅಂದ ಇದೀಗ ದುಪ್ಪಟ್ಟಾಗಿದೆ. ಮಂಜಿನ ನಡುವಿನ ಆ ಸ್ಥಳ ನೀಲಿ ಹೂಗಳಿಂದ ತುಂಬಿ ಮತ್ತಷ್ಟು ಆಕರ್ಷಣಿಯವಾಗಿದೆ.
ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿ ಕರ್ನಾಟಕದ ಕಾಶ್ಮೀರ ಕೊಡಗು ಜಿಲ್ಲೆಯ ಪ್ರಸಿದ್ದ ಪ್ರವಾಸಿ ತಾಣ ಮಾಂದಲ್‌ಪಟ್ಟಿ (ಮುಗಿಲುಪೇಟೆ) ಬೆಟ್ಟದಲ್ಲಿ ಇದೀಗ ನೀಲಿ ಕುರುಂಜಿ ಗಿಡ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ೭-೮ ವರ್ಷಕೊಮ್ಮೆ ಹೂ ಬಿಟ್ಟು ಎರಡು ತಿಂಗಳ ಕಾಲ ಇಡೀ ಬೆಟ್ಟವನ್ನು ನೀಲಿ ಬಣ್ಣದಲ್ಲಿ ಕಂಗೊಳಿಸುವAತೆ ಮಾಡುವ ಈ ಹೂಗಳು ಇದೀಗ ಬೆಟ್ಟದ ತುಂಬೆಲ್ಲ ಅರಳಿ ನಿಂತಿವೆ. ಮುಗಿಲುಪೇಟೆಗೆ ಪುಷ್ಪರಾಶಿ ಮುತ್ತಿಕ್ಕಿದ್ದಂತೆ ಭಾಸವಾಗುತ್ತಿದೆ. ಮಂಜಿನ ಅರಮನೆ ಎಂದೆ ಕರೆಸಿಕೊಳ್ಳುವ ಮಾಂದಲ್ ಪಟ್ಟಿಯ ಸೊಬಗಿಗೆ ನೀಲಿ ಹೂ ಮತ್ತಷ್ಟು ಅಂದ ನೀಡುತ್ತಿದೆ.
ಈ ನೀಲಿ ಕುರುಂಜಿ ಸಸ್ಯವು ಇದೀಗ ಹೂ ಬಿಟ್ಟು ಜನರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ನೂರಾರು ಎಕರೆ ವಿಸ್ತೀರ್ಣದಲ್ಲಿರುವ ಬೆಟ್ಟ ಪ್ರದೇಶ ಪೂರ್ತಿಯಾಗಿ ನೀಲಿಬಣ್ಣದ ಹೂಗಳು ಅವೃತವಾಗಿವೆ. ಇದೊಂದು ಪ್ರಕೃತಿಯ ವಿಸ್ಮಯದಂತೆ ಗೋಚರಿಸುತ್ತಿದೆ. ಈ ನೀಲಿ ಕುರುಂಜಿ ಗಿಡಗಳಲ್ಲಿ ಸುಮಾರು ವಿವಿಧ ಜಾತಿ ಇದ್ದು ಕೆಲವು ಮೂರು ವರ್ಷ, ಏಳು ವರ್ಷ, ಹನ್ನೆರಡು ವರ್ಷಗಳಿಗೊಮ್ಮೆ ಹೂ ಬಿಡುತ್ತದೆ. ತಾಣಕ್ಕೆ ಭೇಟಿ ನೀಡುವ ಜನರು ಇದನ್ನು ಕಂಡು ಮೂಕವಿಸ್ಮಿತ ರಾಗುತ್ತಿದ್ದಾರೆ. ಹೂಗಳನ್ನು ಮುಟ್ಟಿ ಆನಂದಿಸುತ್ತಿದ್ದಾರೆ. ಸ್ವರ್ಗಕ್ಕೆ ಬಂದಿದ್ದೇವೆ ಏನೋ ಎಂದು ಸಂಭ್ರಮಿಸುತ್ತಿದ್ದಾರೆ. ಸೆಲ್ಫಿ ಕ್ಲಿಕ್ಕಿಸಿಕೊಂಡು ನೆನಪುಗಳನ್ನು ಅಮರವಾಗಿಸಿಕೊಳ್ಳುವ ದೃಶ್ಯಗಳು ಕಂಡುಬರುತ್ತಿವೆ. -ಸುಧೀರ್ ಹೊದ್ದೆಟ್ಟಿ