ಮಡಿಕೇರಿ, ಆ. ೧೩: ನಡುರಾತ್ರಿ ಕಳೆದು ಮುಂಜಾವಿನ ವೇಳೆಯಲ್ಲಿ ಇಳಿಜಾರು ರಸ್ತೆಯ ಬದಿಯಲ್ಲಿ ಲಾರಿಯೊಂದು ಮಗುಚಿ ಬಿದ್ದಿದೆ. ಬೆಳಿಗ್ಗೆವರೆಗೂ ನೋಡಿದವರಿಗೆಲ್ಲ ಕಂಡಿದ್ದು, ‘ಫುಲ್ ಕವರ್’ ಆಗಿದ್ದ ಲಾರಿ ಮಾತ್ರ. ಬೆಳಕು ಹರಿದು ಸೂರ್ಯನ ಚಲನೆ ಆರಂಭವಾದಾಗ ಬಂದು ನೋಡುವಾಗ ಅಚ್ಚರಿ ಕಾದಿತ್ತು., ಅಲ್ಲಿದ್ದ ಲಾರಿ ಮಾಯವಾಗಿತ್ತು..! ಲಾರಿ ಬಿದ್ದಿದ್ದ ಜಾಗದಲ್ಲಿ ಹತ್ತಾರು ಗೋವುಗಳು ನಿಂತಿದ್ದವು..!

ಈ ಘಟನೆ ನಡೆದಿದ್ದು, ಕಳೆದ ತಾ. ೯ ರಂದು. ಅಂದು ಮುಂಜಾವು ಅಂದಾಜು ೩.೩೦ರ ವೇಳೆಗೆ ಮಂಗಳೂರು ರಸ್ತೆಯ ಮದೆನಾಡು ಶಾಲೆ ಬಳಿಯ ತಿರುವಿನಲ್ಲಿ ಲಾರಿಯೊಂದು ಮಗುಚಿ ಬಿದ್ದಿದೆ. ಲಾರಿಯ ಹಿಂಭಾಗ ಸಂಪೂರ್ಣ ಕವರ್ ಆಗಿದ್ದರಿಂದ ಅದರೊಳಗಡೆ ಏನಿದೆ ಎಂಬದು ನೋಡಿದವರಿಗೆ ಯಾರಿಗೂ ಗೊತ್ತಿಲ್ಲ. ಖಾಲಿ ವಾಹನವಿರಬಹುದೆಂದು ಕೆಲವರು ತಿಳಿದುಕೊಂಡರೆ, ಮತ್ತೆ ಕೆಲವರು ಸರಕು ಸಾಮಗ್ರಿಗಳಿರಬಹುದೆಂದು ಸುಮ್ಮನಾಗಿದ್ದಾರೆ. ಲಾರಿ ಬಿದ್ದಿರುವ ಬಗ್ಗೆ ಯಾರೋ ಪೊಲೀಸರಿಗೂ ಸುದ್ದಿ ಮುಟ್ಟಿಸಿದ್ದಾರೆ.

ಬೆಳಿಗ್ಗೆ ಲಾರಿ ಮಾಯ...!

ಮುಂಜಾವು ೩.೩೦ಕ್ಕೆ ಅವಘಡ ಸಂಭವಿಸಿದ್ದು, ಅದನ್ನು ನೋಡಿದವರು ಬೆಳಿಗ್ಗೆ ಮತ್ತೆ ೮.೩೦ರ ವೇಳೆಗೆ ಬಂದು ನೋಡುವಾಗ ಅಲ್ಲಿ ಲಾರಿ ಇರಲಿಲ್ಲ. ಮಡಿಕೇರಿಯಿಂದ ಕ್ರೇನ್ ತರಿಸಿ ಲಾರಿಯನ್ನು ಅಲ್ಲಿಂದ ಕೊಂಡೊಯ್ಯಲಾಗಿತ್ತು. ಆದರೆ ಲಾರಿ ಬಿದ್ದ ಜಾಗದಲ್ಲಿ ೨೦ ರಿಂದ ೩೦ ಗೋವುಗಳು ಮಾತ್ರ ಇದ್ದವು. ಯಾರೂ ವಾರಸುದಾರರಿಲ್ಲದ ಕಾರಣ ಗ್ರಾಮದ ಜನರು ತಾವು ಸಾಕುವದಾಗಿ ಹೇಳಿ ಒಬ್ಬರು ಒಂದು, ಎರಡು ಹೀಗೆ ಗೋವುಗಳನ್ನು ‘ಸೆಲೆಕ್ಟ್’ ಮಾಡಿ ಕೊಂಡೊಯ್ದಿದ್ದಾರೆ.

ಪAಚಾಯಿತಿಯಿAದ ಸೂಚನೆ

ಗ್ರಾಮಸ್ಥರು ಕೊಂಡೊಯ್ದಿರುವ ಗೋವುಗಳನ್ನು ಸಾಕುತ್ತಿರುವರೋ ಅಥವಾ ಮಾರಾಟ ಮಾಡಿದ್ದಾರೆಯೋ ಗೊತ್ತಿಲ್ಲ. ಆದರೆ ಅವಘಡವಾದ ಸಂದರ್ಭ ಕಾಲು ಮುರಿತಕ್ಕೊಳಗಾಗಿದ್ದ ಗೋವನ್ನು ಕೊಂಡೊಯ್ದಿದ್ದವರು ಅದನ್ನು ಬೇರೆಯವರಿಗೆ ಮಾರಾಟ ಮಾಡಿರುವದಾಗಿ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಜಾಗೃತರಾಗಿರುವ ಗ್ರಾಮ ಪಂಚಾಯಿತಿಯವರು ಈ ಬಗ್ಗೆ ಚರ್ಚಿಸಿದ್ದು, ಯಾರೂ ಕೂಡ ಗೋವುಗಳನ್ನು ಮಾರಾಟ ಮಾಡದಂತೆ ಸೂಚನೆ ನೀಡಲು ತೀರ್ಮಾನಿಸಿದ್ದಾರೆ.

ಗೋವುಗಳು ಎಲ್ಲಿಯವು...?

ಇಷ್ಟೊಂದು ಗೋವುಗಳು ರಾತ್ರಿ ವೇಳೆಯಲ್ಲಿ ಎಲ್ಲಿಂದ ಎಲ್ಲಿಗೆ ಸಾಗಾಟವಾಗುತ್ತಿತ್ತು. ಇವುಗಳು ಯಾರಿಗೆ ಸೇರಿದ್ದು, ವಾಹನ ಯಾರಿಗೆ ಸೇರಿದ್ದು, ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಬಿದ್ದಿದ್ದ ವಾಹನವನ್ನು ನೋಡಿರುವ ಗ್ರಾ.ಪಂ. ಸದಸ್ಯ ಸಜನ್ ಅವರು ಕೆ.ಎ. ೧೨ರ ಲಾರಿಯಾಗಿದ್ದು, ಇನ್ನುಳಿದ ಸಂಖ್ಯೆಯನ್ನು ಸರಿಯಾಗಿ ಗಮನಿಸಲಿಲ್ಲವೆಂದು ಹೇಳುತ್ತಾರೆ.

ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವಿಚಾರಿಸಿದ ಸಂದರ್ಭ ಲಾರಿ ಮಗುಚಿ ಬಿದ್ದಿದ್ದು, ನಂತರದಲ್ಲಿ ಅವರುಗಳೇ ಲಾರಿಯನ್ನು ಕೊಂಡೊಯ್ದಿದ್ದಾರೆ. ದನಗಳನ್ನು ಮಾತ್ರ ರಸ್ತೆಯಲ್ಲಿ ಬಿಟ್ಟು ಹೋಗಿದ್ದಾರೆ ಎಂದು ಯಾರೋ ಗ್ರಾಮಸ್ಥರು ತಿಳಿಸಿದ್ದರು. ಆದರೆ, ಸ್ಥಳದಲ್ಲಿ ಲಾರಿ ಇರಲಿಲ್ಲ. ಅಲ್ಲದೆ, ಲಾರಿಯ ಸಂಖ್ಯೆ ಕೂಡ ತಿಳಿದಿಲ್ಲವಾದ್ದರಿಂದ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂಬ ಮಾಹಿತಿ ನೀಡುತ್ತಾರೆ. ಮಗುಚಿದ್ದ ಲಾರಿಯನ್ನು ಮೇಲೆತ್ತಲು ಬಳಸಲಾದ ಕ್ರೇನ್ ಚಾಲಕರನ್ನು ವಿಚಾರಣೆಗೊಳ ಪಡಿಸಿದ್ದರೂ ಲಾರಿಯ ಬಗ್ಗೆ ಯಾದರೂ ಒಂದಿಷ್ಟು ಮಾಹಿತಿ ಸಿಗುತ್ತಿತ್ತೇನೋ?

ತಪಾಸಣೆ ಇಲ್ಲವೇ?

ರಾತ್ರಿ ವೇಳೆ ಸಂಚರಿಸುವ ಲಾರಿಗಳ ತಪಾಸಣೆ ಆಗುತ್ತಿಲ್ಲವೇ ಎಂಬದು ಇಲ್ಲಿ ಕಾಡುತ್ತಿರುವ ಪ್ರಶ್ನೆ...? ೮ನೇ ತಾರೀಕು ಮಧ್ಯರಾತ್ರಿ ಕಳೆದ ಬಳಿಕ ಈ ಘಟನೆ ಸಂಭವಿಸಿದೆ. ೮ ರಂದು ವಾರಾಂತ್ಯದ ಕರ್ಫ್ಯೂ ಹಾಗೂ ತಪಾಸಣೆ ಜಾರಿಯಲ್ಲಿತ್ತು. ಎಲ್ಲಾ ಚೆಕ್ ಪೋಸ್ಟ್ ಹಾಗೂ ನಗರ ಪ್ರದೇಶದಲ್ಲಿ ತಪಾಸಣೆ ವ್ಯವಸ್ಥೆ ಇದ್ದರೂ ಈ ‘ಅಕ್ರಮ ಗೋ ಸಾಗಾಟ’ ಹೇಗಾಯಿತು ಎಂಬದಕ್ಕೆ ಎಲ್ಲಿಯೂ ಉತ್ತರ ಮಾತ್ರ ಸಿಗುತ್ತಿಲ್ಲ...!

- ಸಂತೋಷ್