ಬೆಂಗಳೂರು, ಆ. ೧೩: ಭಾರತೀಯ ಮಹಿಳಾ ಹಾಕಿ ತಂಡದ ಕೋಚ್ ಅಂಕಿತಾ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರಿನಲ್ಲಿ ಸನ್ಮಾನಿಸಿ ಗೌರವಿಸಿದರು.
ಟೋಕಿಯೋ ಒಲಂಪಿಕ್ ಟೂರ್ನಿಯಲ್ಲಿ ಭಾರತ ಮಹಿಳಾ ಹಾಕಿ ತಂಡ ಅತ್ಯುತ್ತಮ ಪ್ರದರ್ಶನ ತೋರಿದೆ. ಪದಕ ಗೆಲ್ಲಲು ಸಾಧ್ಯವಾಗದಿದ್ದರೂ ಭಾರತೀಯರ ಮನಸ್ಸನ್ನು ಆ ಮಹಿಳಾ ತಂಡ ಗೆದ್ದಿದೆ. ಆ ತಂಡದ ತರಬೇತಿದಾರರಾದ ನಿಮಗೆ ತುಂಬು ಹೃದಯದ ಶುಭಾಶಯ ಕೋರುತ್ತೇನೆ. ಕನ್ನಡದ ಯುವತಿ ಭಾರತ ತಂಡದ ಕೋಚ್ ಆಗಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ ಎಂದು ಸಿಎಂ ಹೇಳಿದರು.
ಅಂಕಿತ ಅವರು ಕೊಡಗು ಮೂಲದವರು. ಇವರ ತರಬೇತಿಯಲ್ಲಿ ಪಳಗಿದ ದೇಶದ ಮಹಿಳಾ ಹಾಕಿ ತಂಡ ಬಲಿಷ್ಠವಾಗಿದೆ. ಕಳೆದ ಎರಡು ವರ್ಷಗಳಿಂದ
(ಮೊದಲ ಪುಟದಿಂದ) ಭಾರತೀಯ ಮಹಿಳಾ ಹಾಕಿ ತಂಡಕ್ಕೆ ಅಂಕಿತಾ ತರಬೇತಿ ನೀಡುತ್ತಿದ್ದಾರೆ. ಹಲವಾರು ವರ್ಷಗಳ ಬಳಿಕ ಒಲಂಪಿಕ್ನಲ್ಲಿ ಮಹಿಳಾ ತಂಡ ಸೆಮಿಫೈನಲ್ ಹಂತಕ್ಕೆ ತಲುಪಿ ಅಭೂತಪೂರ್ವ ಅಮೋಘ ಸಾಧನೆ ಮಾಡಿದೆ. ಒಟ್ಟು ಮೂರು ಜನ ಕೋಚ್ಗಳ ಪೈಕಿ ಅಂಕಿತಾ ಒಬ್ಬರು. ಅವರು ಕನ್ನಡಿಗರು ಎಂಬುದು ಶ್ಲಾಘನೀಯ ಮತ್ತು ಹೆಮ್ಮೆ ಎಂದು ಸಿಎಂ ಬೊಮ್ಮಾಯಿ ಅಭಿಪ್ರಾಯಪಟ್ಟರು.
ಕ್ರೀಡಾ ಸಚಿವರಿಂದ ಸನ್ಮಾನ
ಭಾರತೀಯ ಮಹಿಳಾ ಹಾಕಿ ತಂಡದ ಕೋಚ್ ಅಂಕಿತಾ ಅವರನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ನಾರಾಯಣಗೌಡ ಅವರು ವಿಧಾನ ಸೌಧದ ತಮ್ಮ ಕಚೇರಿಯಲ್ಲಿ ಸನ್ಮಾನಿಸಿದರು. ಇಬ್ಬರು ವಿದೇಶಿ ಕೋಚ್ಗಳ ಜೊತೆ ತಂಡಕ್ಕೆ ಉತ್ತಮ ತರಬೇತಿ ನೀಡಿದ ಭಾರತೀಯ ಕೋಚ್ ಅಂಕಿತ ಅವರನ್ನು ಸಚಿವ ನಾರಾಯಣಗೌಡ ಅವರು ಗೌರವಿಸಿ, ಶೇಷ್ಠ ಸಾಧನೆಗೆ ಪ್ರಶಂಸಿಸಿದರು.