ಶನಿವಾರಸಂತೆ, ಆ. ೧೨: ಕೋವಿಡ್ ಮಹಾಮಾರಿ ಕಳೆದ ೨ ವರ್ಷಗಳಿಂದ ಭೀಕರವಾಗಿ ನಮ್ಮ ದೇಶದ ಜನರನ್ನು ಕಾಡುತ್ತಿದ್ದು ಅದರಲ್ಲೂ ವಿದ್ಯಾರ್ಥಿ ಸಮೂಹದ ಮೇಲೆ ತುಂಬಾ ಪರಿಣಾಮ ಬೀರುತ್ತಿರುವ ನಡುವೆ ಕರ್ನಾಟಕ ಸರಕಾರ ಹತ್ತನೆ ತರಗತಿ ಪರೀಕ್ಷೆಯನ್ನು ಅನಿವರ್ಯ ಮತ್ತು ಸರಳ ವಿಧಾನದ ಮೂಲಕ ಪರೀಕ್ಷೆ ನಡೆಸಿದೆ ಇದರಿಂದ ಹತ್ತನೆ ತರಗತಿ ವಿದ್ಯಾರ್ಥಿಗಳೆಲ್ಲರೂ ಉತ್ತೀರ್ಣಗೊಂಡಿದ್ದಾರೆ. ಬಹಳಷ್ಟು ವಿದ್ಯಾರ್ಥಿಗಳು ಅತ್ಯುನ್ನತ್ತ, ಉನ್ನತ್ತ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಕೊಡ್ಲಿಪೇಟೆ ಸೆಂಟ್ ಆನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿಶೇಷಚೇತನ ವಿದ್ಯಾರ್ಥಿ ಕೆ.ಬಿ.ಅರ್ಮಾನ್ ಹತ್ತನೆ ತರಗತಿ ಪರೀಕ್ಷೆಯಲ್ಲಿ ೬೨೫ ಕ್ಕೆ ೬೧೭ (ಶೇ ೯೮.೭೨) ಅಂಕಗಳಿಸಿ ಕೊಡ್ಲಿಪೇಟೆ ಕ್ಲಸ್ಟರ್ ವ್ಯಾಪ್ತಿಗೆ ಪ್ರಥಮ ಸ್ಥಾನ ತಂದುಕೊಟ್ಟಿದ್ದಾನೆ. ಕೊಡ್ಲಿಪೇಟೆ ನಿವಾಸಿ ಮತ್ತು ವರ್ತಕ ಬಶೀರ್ ಆಹಮ್ಮದ್, ಗುಲ್ಶೀರ್ ಭಾನು ದಂಪತಿ ಪುತ್ರ ಕೆ.ಬಿ.ಅರ್ಮಾನ್ ಹುಟ್ಟುವಾಗಲೆ ಬಲಗೈ ಸ್ವಾಧೀನ ಕಳೆದುಕೊಂಡಿದ್ದು, ಬರೆಯುವುದು ಸೇರಿದಂತೆ ಇತರೆ ಎಲ್ಲಾ ಕೆಲಸಗಳನ್ನು ಎಡಗೈ ಮೂಲಕ ಮಾಡುತ್ತಾನೆ. ಎಲ್.ಕೆ.ಜಿ.ಯಿಂದಲೇ ಎಡಗೈಯಲ್ಲಿ ಬರೆಯುವ ಅಭ್ಯಾಸಕ್ಕೆ ಹೊಂದಿಕೊAಡಿದ್ದ ಅರ್ಮಾನ್ಗೆ ಶಾಲೆಯಲ್ಲಿ ಬರೆಯಲು ಯಾವುದೇ ತೊಡಕ್ಕಾಗಿರಲಿಲ್ಲ. ಶಾಲೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಯಾಗಿರುವ ಈತ ವಿಶೇಷಚೇತನರಿಗೆ ಮಾತ್ರವಲ್ಲದೆ ವಿದ್ಯಾರ್ಥಿ ಸಮೂಹಕ್ಕೆ ಸ್ಫೂರ್ತಿಯಾಗಿದ್ದಾನೆ.
ಕಳೆದ ಮತ್ತು ಈ ವರ್ಷ ಕೋವಿಡ್ ಲಾಕ್ಡೌನ್ ಸಮಸ್ಯೆಯಿಂದ ಶಾಲಾ-ಕಾಲೇಜು ಪ್ರಾರಂಭಗೊAಡಿರಲಿಲ್ಲ. ಸರಕಾರ ಮತ್ತೆ ಕೇವಲ ೩ ತಿಂಗಳು ಮಾತ್ರ ಶಾಲೆಗಳನ್ನು ನಡೆಸಿತು. ಕೋವಿಡ್ ೨ನೇ ಅಲೆಯ ಲಾಕ್ಡೌನ್ ಸಮಸ್ಯೆಯಿಂದ ಮತ್ತೆ ಶಾಲೆಗಳನ್ನು ಬಂದ್ ಮಾಡಿತ್ತು. ಕೊಡ್ಲಿಪೇಟೆ ಸೆಂಟ್ ಆನ್ಸ್ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆ ಹತ್ತನೇ ತರಗತಿ ವಿದ್ಯಾರ್ಥಿ ಅರ್ಮಾನ್ ೩ ತಿಂಗಳು ಮಾತ್ರ ಶಾಲೆಗೆ ಹೋಗಿದ್ದ. ಮತ್ತೆ ಕೋವಿಡ್ ಲಾಕ್ಡೌನ್ ಸಮಸ್ಯೆಯಿಂದ ಮನೆಯಲ್ಲಿ ಅಭ್ಯಾಸ ನಡೆಸುತ್ತಿದ್ದ. ೩ ತಿಂಗಳು ಶಾಲೆ ಇದ್ದ ಸಮಯದಲ್ಲಿ ಶಿಕ್ಷಕರು ಮಾಡಿದ ಪಾಠ ಮತ್ತು ನೋಟ್ಸ್ಗಳನ್ನು ಓದಿಕೊಂಡು ತಯಾರಿ ನಡೆಸಿಕೊಂಡಿದ್ದ. ಮುಂದುವರೆದ ಪಠ್ಯ ವಿಷಯಗಳ ಪ್ರಶ್ನೆಗಳನ್ನು ಶಾಲೆಯ ಶಿಕ್ಷಕರಿಗೆ ದೂರವಾಣಿ ಕರೆ ಮಾಡಿ ಉತ್ತರ ಪಡೆದುಕೊಂಡು ಅದನ್ನು ನೋಟ್ಸ್ನಲ್ಲಿ ಬರೆದುಕೊಂಡು ಪರೀಕ್ಷೆಗಾಗಿ ಸಿದ್ದತೆ ಮಾಡಿಕೊಂಡಿದ್ದ, ಗಣಿತ, ವಿಜ್ಞಾನ ವಿಷಯಗಳಲ್ಲಿರುವ ಕಠಿಣ ಪ್ರಶ್ನೆಗಳಿಗೆ ತರಗತಿ ಶಿಕ್ಷಕರೊಂದಿಗೆ ಕರೆ ಮಾಡಿ ಸಂದೇಹಗಳನ್ನು ಬಗೆ ಹರಿಸಿಕೊಳ್ಳುತ್ತಿದ್ದ. ಕೋವಿಡ್ ಸಮಸ್ಯೆಯಿಂದ ಶಾಲೆ ಪ್ರಾರಂಭವಾಗದಿದ್ದರೂ ಹತ್ತನೆ ತರಗತಿ ಪರೀಕ್ಷೆ ನಡೆಸಲು ಸರಕಾರ ಅವಕಾಶ ನೀಡಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಅರ್ಮಾನ್ ವಿದ್ಯಾರ್ಥಿ ಸಮೂಹಕ್ಕೆ ಸ್ಫೂರ್ತಿಯಾಗಿದ್ದಾನೆ.