ವೀರಾಜಪೇಟೆ, ಆ. ೧೨: ದಿನದಿಂದ ದಿನಕ್ಕೆ ಕೇರಳ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಸಾವಿನ ಸಂಖ್ಯೆ ಅಧಿಕವಾಗಿದೆ. ರಾಜ್ಯದ ಗಡಿಯಲ್ಲಿ ಕಟ್ಟುನಿಟ್ಟಿನ ಕೋವಿಡ್ ತಪಾಸಣೆ ಇದ್ದರೂ ನಕಲಿ ಅರ್.ಟಿ.ಪಿ.ಸಿ.ಆರ್. ವರದಿ ಸೃಷ್ಟಿ ಮಾಡಿ ಜಿಲ್ಲೆಗೆ ಆಗಮಿಸಿದ ಕೇರಳ ರಾಜ್ಯದ ದಂಪತಿಗಳ ಬಂಧನವಾದ ಘಟನೆ ವೀರಾಜಪೇಟೆ ಹೊರವಲಯ ಅಮ್ಮತ್ತಿ ಗ್ರಾಮದಲ್ಲಿ ನಡೆದಿದೆ.

ಕೇರಳ ರಾಜ್ಯದ ಕಾಸರಗೋಡು ಜಿಲ್ಲೆ ಮಂಜೇಶ್ವರ ತಾಲೂಕಿನ ಬಲ್ಲಂಗೋಡು ಗ್ರಾಮದ ಉದ್ಯಾವರ ನಿವಾಸಿ ಸೈಯದ್ ಮೊಹಮ್ಮದ್ (೩೨) ಮತ್ತು ಪತ್ನಿ ಅಯಿಷತ್ ರೆಹಮಾನ್ ಬಿ.ಎಂ. ನಕಲಿ ದಾಖಲೆ ಸೃಷ್ಟಿ ಮಾಡಿ ಬಂಧಿತರಾದ ದಂಪತಿಗಳು.

(ಮೊದಲ ಪುಟದಿಂದ) ಬಂಧಿತರಾದ ಸೈಯದ್ ಮೊಹಮ್ಮದ್ ಕೊಡಗಿನ ಎಮ್ಮೆಮಾಡು ಗ್ರಾಮದಿಂದ ಮದುವೆಯಾಗಿದ್ದು, ಪತ್ನಿ ಅಯಿಷತ್ ರೆಹಮಾನ್ ಅವರ ಮನೆಗೆ ಎಮ್ಮೆಮಾಡು, ಅಮ್ಮತ್ತಿ ಮಾರ್ಗವಾಗಿ ತೆರಳುತಿದ್ದ ವೇಳೆ ಸಂಜೆ ೫.೪೫ ಗಂಟೆಗೆ ಅಮ್ಮತ್ತಿ ಕೋವಿಡ್ ತಪಾಸಣೆ ಕೇಂದ್ರದ ಬಳಿ ದಂಪತಿಗಳು ಪ್ರಯಾಣಿಸುತಿದ್ದ ಮಾರುತಿ ಅಲ್ಟೋ ಬಿಳಿ ಬಣ್ಣದ ಕಾರನ್ನು (ಕೆಎಲ್ ೧೪ ಡಬ್ಲೂö್ಯ ೩೯೬) ಸಂಶಯದಿAದ ತಪಾಸಣೆ ಕೇಂದ್ರದಲ್ಲಿದ್ದ ಕಂದಾಯ ಇಲಾಖೆಯ ಅಮ್ಮತ್ತಿ ಗ್ರಾಮ ಲೆಕ್ಕಿಗ ಪ್ರವೀಣ್ ಮತ್ತು ಸಿದ್ದಾಪುರ ಗ್ರಾಮ ಲೆಕ್ಕಿಗ ಓಮಪ್ಪ ಬಣಗಾರ್ ಹಾಗೂ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಕೋವಿಡ್ ವರದಿಯನ್ನು ಪರಿಶೀಲನೆಗೆ ಒಳಪಡಿಸಿದ್ದಾರೆ.

ಪರಿಶೀಲನೆ ವೇಳೆಯಲ್ಲಿ ಸೈಯದ್ ನೀಡಿರುವ ಪತಿ ಮತ್ತು ಪತ್ನಿಯರ ಆರ್.ಟಿ.ಪಿ.ಸಿ.ಆರ್. ವರದಿಯನ್ನು ಕ್ಯುಆರ್ ಬಾರ್ ಕೊಡ್ ಸ್ಕಾö್ಯನ್ ಮಾಡಲಾಗಿದೆ. ವರದಿಯಲ್ಲಿ ಸರ್ಫುದ್ದೀನ್ ಎಂಬ ಹೆಸರು ನಮೂದಾಗಿರುವುದು ಕಂಡುಬAದಿದೆ. ಈ ಹಿನ್ನೆಲೆಯಲ್ಲಿ ದಂಪತಿಗಳನ್ನು ಹೆಚ್ಚಿನ ತನಿಖೆಗೆ ಒಳಪಡಿಸಲಾಯಿತು. ತನಿಖೆ ವೇಳೆಯಲ್ಲಿ ಮಂಜೇಶ್ವರದಲ್ಲಿ ನಕಲಿ ಆರ್.ಟಿ.ಪಿ.ಸಿ.ಆರ್. ವರದಿಯನ್ನು ಸಿದ್ಧಪಡಿಸಿಕೊಂಡು ಜಾಲ್ಸೂರು, ಸಂಪಾಜೆ, ಮಾರ್ಗವಾಗಿ ಎಮ್ಮೆಮಾಡುವಿಗೆ ಬಂದಿದ್ದೇನೆ. ನಂತರದಲ್ಲಿ ಸಿದ್ದಾಪುರ ಸ್ನೇಹಿತರ ಮನೆಗೆ ತೆರಳುತಿದ್ದೆ ಎಂದು ಪೊಲೀಸರಿಗೆ ಸೈಯ್ಯದ್ ಮಾಹಿತಿ ನೀಡಿದ್ದಾನೆ.

ದಂಪತಿಗಳು ನೀಡಿರುವ ಆರ್.ಟಿ.ಪಿ.ಸಿ.ಆರ್. ವರದಿ ನಕಲಿ ಎಂದು ತಿಳಿದ ಹಿನ್ನೆಲೆಯಲ್ಲಿ ಅಮ್ಮತ್ತಿ ಗ್ರಾಮ ಲೆಕ್ಕಿಗ ಬಿ.ಕೆ. ಪ್ರವೀಣ್ ನೀಡಿರುವ ದೂರಿನ ಮೇರೆಗೆ ದಂಪತಿಗಳ ಮೇಲೆ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಸಾಂಕ್ರಾಮಿಕ ರೋಗಗಳ (ತಿದ್ದುಪಡಿ) ಅಧಿನಿಯಮ ೨೦೨೦ರ ಅನ್ವಯ ಪ್ರಕರಣ ದಾಖಲಾಗಿದ್ದು, ಕೃತ್ಯಕ್ಕೆ ಉಪಯೋಗಿಸಿದ ಕಾರು ವಶಕ್ಕೆ ಪಡೆಯಲಾಗಿದೆ. ಆರೋಪಿತ ದಂಪತಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.

-ಕಿಶೋರ್ ಕುಮಾರ್ ಶೆಟ್ಟಿ