ರಾಜ್ಯದಲ್ಲಿ ಕೊರೊನಾ ತುಸು ಹೆಚ್ಚಳ

ಬೆಂಗಳೂರು, ಆ. ೧೨: ಕಳೆದ ಕೆಲ ದಿನಗಳಿಂದ ಇಳಿಕೆಯಾಗುತ್ತಿದ್ದ ಕೊರೊನಾ, ನಿನ್ನೆಯಿಂದ ಮತ್ತೆ ಹೆಚ್ಚಳವಾಗುತ್ತಿದೆ. ಕಳೆದ ೨೪ ಗಂಟೆಗಳಲ್ಲಿ ರಾಜ್ಯದಲ್ಲಿ ೧೮೫೭ ಹೊಸ ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ ೨೯,೨೪,೭೩೨ಕ್ಕೆ ಏರಿಕೆಯಾಗಿದೆ. ೧,೯೫೦ ಸೋಂಕಿತರು ಇಂದು ಗುಣಮುಖರಾಗಿದ್ದು, ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಈವರೆಗಿನ ಒಟ್ಟು ಗುಣಮುಖರಾದವರ ಸಂಖ್ಯೆ ೨೮,೬೫,೦೬೭ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ೨೨೭೨೮ ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಸೋಂಕಿನಿAದ ಇಂದು ೩೦ ಜನರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಒಟ್ಟು ೩೬,೯೧೧ ಸೋಂಕಿತರು ರಾಜ್ಯದಲ್ಲಿ ಮೃತಪಟ್ಟಿದ್ದಾರೆ. ಸೋಂಕಿನ ಪ್ರಮಾಣ ಶೇ. ೧.೧೫ ರಷ್ಟಿದ್ದು, ಮರಣ ಪ್ರಮಾಣ ಶೇ. ೧.೬೧ ರಷ್ಟಿದೆ. ಬೆಂಗಳೂರಿನಲ್ಲಿ ೩೨೧ ಹೊಸ ಪ್ರಕರಣ ಪತ್ತೆಯಾಗಿದ್ದು, ೪೧೩ ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಐವರು ಸಾವನ್ನಪ್ಪಿದ್ದಾರೆ.

ಸರ್ಕಾರಕ್ಕೆ ಸಂಸದೀಯ ಪ್ರಜಾಪ್ರಭುತ್ವದ ಬಗ್ಗೆ ಗೌರವವಿಲ್ಲ: ವಿಪಕ್ಷಗಳು

ನವದೆಹಲಿ, ಆ. ೧೨: ಸರ್ಕಾರ ಉದ್ದೇಶಪೂರ್ವಕವಾಗಿ ಸಂಸತ್ ಕಲಾಪವನ್ನು ಹಳಿತಪ್ಪಿಸುತ್ತಿದೆ ಎಂದು ೧೧ ವಿಪಕ್ಷಗಳ ನಾಯಕರು ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಜಂಟಿ ಹೇಳಿಕೆ ನೀಡಿದ್ದು, ವಿಪಕ್ಷಗಳು ಸರ್ಕಾರದ ಸರ್ವಾಧಿಕಾರಿ ಧೋರಣೆ ಹಾಗೂ ಪ್ರಜಾಪ್ರಭುತ್ವ ವಿರೋಧಿ ಕ್ರಮಗಳು ಖಂಡಿಸಿದ್ದು, ಬುಧವಾರ ರಾಜ್ಯಸಭೆಯಲ್ಲಿ ನಡೆದಿದ್ದು ಆಘಾತಕಾರಿ ಹಾಗೂ ಸದನದ ಘನತೆಗೆ ಧಕ್ಕೆ ತಂದಿರುವ ಘಟನೆ ಹಾಗೂ ಸದಸ್ಯರಿಗೆ ಅವಮಾನ ಮಾಡುವ ಘಟನೆ ಎಂದು ವಿಪಕ್ಷಗಳ ನಾಯಕರು ಹೇಳಿದ್ದಾರೆ. ಚರ್ಚೆ ನಡೆಸುವ ಪ್ರತಿಪಕ್ಷಗಳ ಬೇಡಿಕೆಗಳಿಗೆ ಸರ್ಕಾರ ತಡೆಯೊಡ್ಡಿತ್ತು. ಪೆಗಾಸಸ್ ಗೂಢಚರ್ಯೆ ಪ್ರಕರಣಕ್ಕೆ ಸಂಬAಧಿಸಿದAತೆ ಸರ್ಕಾರ ಚರ್ಚೆಯಿಂದ ಪಲಾಯನ ಮಾಡುತ್ತಿದೆ ಎಂದು ವಿಪಕ್ಷಗಳ ನಾಯಕರು ಆರೋಪಿಸಿದ್ದಾರೆ. ಪ್ರತಿಪಕ್ಷಗಳ ನಾಯಕರು ಸಂಸತ್‌ನಲ್ಲಿ ಸಭೆ ನಡೆಸಿ ನಂತರ ಸರ್ಕಾರದ ವಿರುದ್ಧ ವಿಜಯ್ ಚೌಕ್‌ನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಕಾಂಗ್ರೆಸ್, ಎನ್‌ಸಿಪಿ, ಶಿವಸೇನೆ, ಎಸ್‌ಪಿ, ಡಿಎಂಕೆ, ಸಿಪಿಐಎಂ, ಸಿಪಿಐ, ಆರ್‌ಜೆಡಿ, ಐಯುಎಂಎಲ್, ಆರ್‌ಎಸ್‌ಪಿ ಹಾಗೂ ಕೇರಳ ಕಾಂಗ್ರೆಸ್(ಎA)ನ ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಭಾಗಿಯಾಗಿದ್ದ ಈ ಸಭೆಯಲ್ಲಿ ಟಿಎಂಸಿ, ಆಮ್ ಆದ್ಮಿ, ಬಿಎಸ್‌ಪಿ ಭಾಗವಹಿಸಿರಲಿಲ್ಲ ಎಂಬುದು ವಿಶೇಷ.

ಪ್ರತಿ ಜಿಲ್ಲೆಯಲ್ಲೂ ಮಕ್ಕಳಿಗಾಗಿ ಪ್ರತ್ಯೇಕ ಐಸಿಯು ಘಟಕ

ಮಂಗಳೂರು, ಆ. ೧೨: ಸಂಭವನೀಯ ಮೂರನೇ ಕೊರೊನಾ ಅಲೆಯಿಂದ ಮಕ್ಕಳನ್ನು ರಕ್ಷಿಸಲು ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಿಗೆ ಹೆಚ್ಚಿನ ಮೂಲಸೌಕರ್ಯಗಳನ್ನು ಒದಗಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಹೇಳಿದ್ದಾರೆ. ಮಂಗಳೂರಿನಲ್ಲಿ ಎಸ್‌ಡಿಆರ್‌ಎಫ್ ಅನುದಾನದಲ್ಲಿ ವೆನ್ಲಾಕ್ ಆಸ್ಪತ್ರೆಯಲ್ಲಿ ನಿರ್ಮಾಣಗೊಂಡ ೩೨ ಬೆಡ್‌ಗಳ ಮೆಡಿಸಿನ್ ವಿಭಾಗ ಮತ್ತು ಐಸಿಯು ಘಟಕ ಉದ್ಘಾಟಿಸಿ ಮಾತನಾಡಿದ ಸಿಎಂ, ಪ್ರತಿ ಜಿಲ್ಲೆಯಲ್ಲೂ ಮಕ್ಕಳಿಗಾಗಿ ಪ್ರತ್ಯೇಕ ಐಸಿಯು ಘಟಕ ತೆರೆದು ಅರೋಗ್ಯ ತಪಾಸಣೆಗೆ ಆದ್ಯತೆ ನೀಡುವುದಾಗಿ ಹೇಳಿದರು. ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಅರೋಗ್ಯ ಇಲಾಖೆ, ಜಿಲ್ಲಾಡಳಿತ ಸೇರಿ ವೆಂಟಿಲೇಟರ್, ಮೊನಿಟರ್ ಸೇರಿದಂತೆ ಉತ್ತಮವಾದ ಐಸಿಯು ಘಟಕವನ್ನು ನಿರ್ಮಾಣ ಮಾಡಲಾಗಿದ್ದು, ಇದೆ ರೀತಿಯಲ್ಲಿ ಇನ್ನು ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲೆಗಳಲ್ಲಿಯೂ ಆಧುನಿಕ ಘಟಕಗಳನ್ನು ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿದೆ. ಯಾವುದೇ ಪರಿಸ್ಥಿತಿ ಬಂದರು ಅದನ್ನು ಎದುರಿಸಲು ಆರೋಗ್ಯ ಇಲಾಖೆ ಸನ್ನದ್ಧರಾಗಬೇಕು ಎಂದು ಹೇಳಿದರು. ಕೊರೊನಾ ನಿಯಂತ್ರಿಸಲು ಗಡಿಭಾಗದ ಜಿಲ್ಲೆಗಳಿಗೆ ಹೆಚ್ಚಿನ ಲಸಿಕೆ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಮುಂದಿನ ದಸರಾ ವೇಳೆಗೆ ಮೈಸೂರು-ಬೆಂಗಳೂರು ಹತ್ತು ಪಥಗಳ ಕಾಮಗಾರಿ ಪೂರ್ಣ

ಬೆಂಗಳೂರು, ಆ. ೧೨: ಮೈಸೂರು-ಬೆಂಗಳೂರು ನಡುವಿನ ಪ್ರಯಾಣದ ಅವಧಿ ಇನ್ನು ಕೇವಲ ಒಂದೂವರೆ ಗಂಟೆ ಮಾತ್ರ..! ಅರ್ಥಾತ್ ಕೇವಲ ೯೦ ನಿಮಿಷ. ಹೌದು ಇದು ಹೇಗೆ ಸಾಧ್ಯ ? ಸದ್ಯ ಈ ಎರಡು ನಗರಗಳ ನಡುವೆ ೩ ಗಂಟೆ ಪ್ರಯಾಣ ಮಾಡಬೇಕಾಗಿದೆ. ೮ ಸಾವಿರದ ೧೭೨ ಕೋಟಿ ರೂಪಾಯಿ ವೆಚ್ಚದಲ್ಲಿ ಹತ್ತು ಪಥಗಳ ಕಾಮಗಾರಿ ತ್ವರಿತವಾಗಿ ನಡೆಯುತ್ತಿದ್ದು ಮುಂದಿನ ದಸರಾ ವೇಳೆಗೆ ರಾಜ್ಯದ ಜನತೆಗೆ ದಸರಾ ಕೊಡುಗೆಯಾಗಿ ಸಂಚಾರದ ಅವಧಿ ಕಡಿಮೆಯಾಗಲಿದೆ. ಸದ್ಯ ಮೈಸೂರು ಮತ್ತು ಬೆಂಗಳೂರು ನಡುವಣ ಹೆದ್ದಾರಿಯನ್ನು ಹತ್ತು ಪಥಗಳ ಹೆದ್ದಾರಿಯನ್ನಾಗಿ ಪರಿವರ್ತನೆ ಮಾಡುತ್ತಿದ್ದು, ಮುಂದಿನ ವರ್ಷದ ದಸರಾ ವೇಳೆಗೆ ಕಾಮಗಾರಿ ಪೂರ್ಣಗೊಂಡು ಸಂಚಾರಕ್ಕೆ ಹೆದ್ದಾರಿ ಅನುವಾಗಲಿದೆ. ಹಾಲಿ ಕಾಮಗಾರಿ ಪೂರ್ಣಗೊಂಡರೆ ಎರಡು ನಗರಗಳ ಸಂಚಾರದ ಅವಧಿ ಕೇವಲ ೯೦ ನಿಮಿಷಕ್ಕೆ ಇಳಿಯಲಿದೆ. ಮುಂದಿನ ದಸರಾ ವೇಳೆಗೆ ಕಾಮಗಾರಿ ಪೂರ್ಣಗೊಂಡು ಹೆದ್ದಾರಿ ಸಾರ್ವಜನಿಕರ ಸಂಚಾರ ಸೇವೆಗೆ ಲಭ್ಯವಾಗಲಿದೆ ಎಂದು ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರು ರಾಜ್ಯದ ಜನತೆಗೆ ಟ್ವೀಟ್ ಮೂಲಕ ಸಿಹಿ ಸುದ್ದಿ ನೀಡಿದ್ದಾರೆ. ಭಾರತಮಾಲಾ ಪರಿಯೋಜನ ಹಂತ-೧ರ ಅಡಿಯಲ್ಲಿ ಉಭಯ ನಗರಗಳನ್ನು ಸಂಪರ್ಕಿಸುವ ರಸ್ತೆಯನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ಎರಡು ಪ್ಯಾಕೇಜ್‌ಗಳಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಸಚಿವ ನಿತಿನ್ ಗಡ್ಕರಿ ಕಾಮಗಾರಿಗಳ ಚಿತ್ರಗಳನ್ನು ಸಹ ಟ್ವೀಟ್ ಮಾಡಿದ್ದಾರೆ. ಪ್ರಸ್ತುತ ಇರುವ ೧೩೫ ಕಿಲೋಮೀಟರ್ ರಸ್ತೆ ಸದ್ಯ ೪ ಪಥದ ಹೆದ್ದಾರಿಯಾಗಿದ್ದು, ವಾಹನ ದಟ್ಟಣೆ ಹೆಚ್ಚಾದ ಕಾರಣ ೧೦ ಪಥವಾಗಿ ಅಭಿವೃದ್ಧಿಗೊಳಿಸಲಾಗುತ್ತಿದೆ.

ಹಿಮಾಚಲದ ಕಿನ್ನೌರ್‌ನಲ್ಲಿ ಭೂಕುಸಿತ: ಮತ್ತೆ ನಾಲ್ವರ ಶವ ಪತ್ತೆ

ಶಿಮ್ಲಾ, ಆ. ೧೨: ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಬುಧವಾರ ಸಂಭವಿಸಿದ ಭೂಕುಸಿತ ಸ್ಥಳದಲ್ಲಿ ಗುರುವಾರ ಮತ್ತೆ ನಾಲ್ಕು ಮೃತದೇಹಗಳನ್ನು ಪತ್ತೆ ಮಾಡಲಾಗಿದ್ದು, ಸಾವಿನ ಸಂಖ್ಯೆ ೧೪ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಇಂದು ಪುನರಾರಂಭಗೊAಡ ನಂತರ ಸ್ಥಳದಿಂದ ಇನ್ನೂ ನಾಲ್ಕು ಶವಗಳನ್ನು ಹೊರತೆಗೆಯಲಾಗಿದೆ ಎಂದು ಕಿನ್ನೌರ್ ಉಪ ಆಯುಕ್ತ ಅಬಿದ್ ಹುಸೇನ್ ಸಾದಿಕ್ ಅವರು ತಿಳಿಸಿದ್ದಾರೆ. ಈವರೆಗೆ ೧೪ ಶವಗಳನ್ನು ಪತ್ತೆ ಮಾಡಲಾಗಿದೆ. ಹಿಮಾಚಲ ರಸ್ತೆ ಸಾರಿಗೆ ಸಂಸ್ಥೆ (ಹೆಚ್‌ಆರ್‌ಟಿಸಿ) ಬಸ್ ಸೇರಿದಂತೆ ಹಲವು ವಾಹನಗಳು ಭೂಕುಸಿತದ ನಂತರ ಅವಶೇಷಗಳ ಅಡಿಯಲ್ಲಿ ಹೂತುಹೋಗಿವೆ ಎಂದು ರಾಜ್ಯ ವಿಪತ್ತು ನಿರ್ವಹಣಾ ನಿರ್ದೇಶಕ ಸುದೇಶ್ ಕುಮಾರ್ ಮೊಖ್ತಾ ಅವರು ಹೇಳಿದ್ದಾರೆ. ಆದಾಗ್ಯೂ, ಒಂದು ಬೊಲೆರೊ ಕಾರನ್ನು ಇನ್ನೂ ಪತ್ತೆ ಮಾಡಲು ಸಾಧ್ಯವಾಗಿಲ್ಲ ಎಂದು ಅವರು ತಿಳಿಸಿದ್ದಾರೆ. ರಾಷ್ಟಿçÃಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ಐಟಿಬಿಪಿ ಮತ್ತು ಸ್ಥಳೀಯ ಪೊಲೀಸ್ ಹಾಗೂ ಗೃಹರಕ್ಷಕ ದಳದ ಸದಸ್ಯರು ಜಂಟಿಯಾಗಿ ನಡೆಸುತ್ತಿರುವ ರಕ್ಷಣಾ ಕಾರ್ಯಾಚರಣೆ ಇಂದು ಬೆಳಿಗ್ಗೆ ೬ ಗಂಟೆಗೆ ಪುನರಾರಂಭವಾಯಿತು ಎಂದು ಮೊಕ್ತಾ ಹೇಳಿದ್ದಾರೆ.

ಚಂದ್ರನ ನೆಲದಲ್ಲಿ ನೀರಿನಂಶ ಪತ್ತೆ ಹಚ್ಚಿದ ಇಸ್ರೊ ನೌಕೆ

ನವದೆಹಲಿ, ಆ. ೧೨: ಚಂದ್ರಯಾನ-೨ ಗಗನನೌಕೆಯ ಲ್ಯಾಂಡರ್ (ಚಂದ್ರವಾಹನ) ಚಂದ್ರನ ಮೇಲೆ ಅಪ್ಪಳಿಸಿ ಪತನಗೊಂಡಿದ್ದರೂ, ಚಂದ್ರನ ಸುತ್ತಲೇ ಸುತ್ತುತ್ತಿರುವ ನೌಕೆ ತನ್ನಲ್ಲಿನ ವೈಜ್ಞಾನಿಕ ಉಪಕರಣಗಳ ಸಹಾಯದಿಂದ ಚಂದ್ರನ ನೆಲದ ಮೇಲೆ ನೀರಿನಂಶ ಇರುವುದನ್ನು ಪತ್ತೆ ಹಚ್ಚಿದೆ. ಇದರಿಂದಾಗಿ ಇಸ್ರೋ ವಿಜ್ಞಾನಿಗಳು ಮುಂಬರುವ ಚಂದ್ರಯಾನ-೩ ಯೋಜನೆಯತ್ತ ಆಶಾಭಾವದ ನೋಟ ಬೀರಿದ್ದಾರೆ. ಚಂದ್ರನ ಸುತ್ತ ಸುತ್ತುತ್ತಿರುವ ಗಗನನೌಕೆಯಲ್ಲಿನ ಇನ್ ಫ್ರಾರೆಡ್ ಸ್ಪೆಕ್ಟ್ರೊಮೀಟರ್ ಉಪಕರಣ ಚಂದ್ರನ ಮೇಲಿನ ಖನಿಜಗಳ ಅಧ್ಯಯನಕ್ಕೆಂದೇ ಅಭಿವೃದ್ಧಿಗೊಳಿಸಲಾಗಿತ್ತು. ಇದೇ ಉಪಕರಣ ಈಗ ಹೈಡ್ರಾಕ್ಸಿಲ್ ಮತ್ತು ನೀರಿನ ಕಣಗಳನ್ನು ಚಂದಿರನ ನೆಲದಲ್ಲಿ ಪತ್ತೆ ಹಚ್ಚಿದೆ. ಚಂದ್ರಯಾನ-೩ ಯೋಜನೆ ೨೦೨೨ರಲ್ಲಿ ಕಾರ್ಯಗತಗೊಳ್ಳಲಿದೆ. ಮುಂದಿನ ವರ್ಷಗಳಲ್ಲಿ ಹಲವು ದೇಶಗಳೂ ಚಂದ್ರನಲ್ಲಿಗೆ ಮಾನವ ಸಹಿತ ಮತ್ತು ಮಾನವ ರಹಿತ ಬಾಹ್ಯಾಕಾಶ ಯೋಜನೆಯನ್ನು ಕಾರ್ಯಗತಗೊಳಿಸುತ್ತಿರುವ ಹಿನ್ನೆಲೆ ಭಾರತದ ಬಾಹ್ಯಾಕಾಶ ಸಂಸ್ಥೆಯ ನೂತನ ಸಂಶೋಧನೆ ಮಹತ್ವಪೂರ್ಣವಾದುದು.