ಸೋಮವಾರಪೇಟೆ,ಆ.೧೧: ಮಡಿಕೇರಿ ತಾಲೂಕಿಗೆ ಒಳಪಟ್ಟ ಹಮ್ಮಿಯಾಲ ಗ್ರಾಮದಲ್ಲಿ ಕಳೆದೆರಡು ದಿನಗಳಿಂದ ಹುಲಿ ಧಾಳಿ ನಿರಂತರವಾಗಿ ನಡೆಯುತ್ತಿದ್ದು, ಕೃಷಿಕರ ಜಾನುವಾರುಗಳು ಬಲಿಯಾಗುತ್ತಿವೆ.
ಹಮ್ಮಿಯಾಲದ ಮೊಣ್ಣಂಡ ಕೆ. ಶಿವಯ್ಯ ಅವರಿಗೆ ಸೇರಿದ ಹಸುವಿನ ಮೇಲೆ ಕಳೆದೆರಡು ದಿನಗಳ ಹಿಂದೆ ಹುಲಿ ಧಾಳಿ ನಡೆಸಿದ್ದು, ಇಂದು ಕಳೇಬರ ಪತ್ತೆಯಾಗಿದೆ. ಇದರೊಂದಿಗೆ ಇವರಿಗೆ ಸೇರಿದ ೬ ಜಾನುವಾರುಗಳು ಕಳೆದ ಒಂದು ವರ್ಷದಲ್ಲಿ ಹುಲಿ ಧಾಳಿಗೆ ಬಲಿಯಾದಂತಾಗಿದೆ. ಬಡ ಕೃಷಿಕ ಕುಟುಂಬವಾಗಿರುವ ಶಿವಯ್ಯ ಅವರಿಗೆ ೨.೩೦ ಲಕ್ಷ ನಷ್ಟವಾಗಿದ್ದು, ಅರಣ್ಯ ಇಲಾಖೆಯಿಂದ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಹಮ್ಮಿಯಾಲ ಭಾಗದಲ್ಲಿ ನಿರಂತರವಾಗಿ ಹುಲಿ ಧಾಳಿ ನಡೆಯುತ್ತಿದ್ದು, ಜಾನುವಾರುಗಳನ್ನು ಮೇಯಲು ಬಿಡಲೂ ಸಹ ಭಯ ಪಡುವ ಸನ್ನಿವೇಶ ನಿರ್ಮಾಣವಾಗಿದೆ. ಹುಲಿ ಧಾಳಿಗೆ ಹಸು, ಕೋಣ, ಎಮ್ಮೆ, ಕರುಗಳು ಬಲಿಯಾಗುತ್ತಿದ್ದು, ಅರಣ್ಯ ಇಲಾಖಾಧಿಕಾರಿಗಳು ಭೇಟಿ ನೀಡಿ ಪರಿಹಾರದ ಭರವಸೆ ನೀಡುತ್ತಾರೆಯೇ ಹೊರತು, ಶಾಶ್ವತ ಪರಿಹಾರಕ್ಕೆ ಈವರೆಗೆ ಕ್ರಮ ಕೈಗೊಂಡಿಲ್ಲ. ಇದರಿಂದಾಗಿ ಗ್ರಾಮಸ್ಥರೂ ಸಹ ಭಯದಿಂದಲೇ ಗದ್ದೆ, ತೋಟದ ಕೆಲಸಗಳಿಗೆ ತೆರಳುವ ಪರಿಸ್ಥಿತಿ ಎದುರಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖಾ ಸಿಬ್ಬಂದಿಗಳಾದ ಗಣೇಶ್, ರಾಜೇಶ್ ಅವರುಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.