ಶ್ರೀಮಂಗಲ, ಆ. ೧೦: ಜಿಲ್ಲೆಯಲ್ಲಿ ಬೆಳೆಗಾರರು ಮತ್ತು ಕಾರ್ಮಿಕರ ಜಾಗೃತಿ ಸಮಿತಿ ಮೂಲಕ ಸ್ಥಳೀಯ ಕಾರ್ಮಿಕರನ್ನು ಹೊರತುಪಡಿಸಿ ವಲಸೆ ಕಾರ್ಮಿಕರಿಗೆ ದಿನಗೂಲಿ ನಿಗದಿಪಡಿಸಿ ಅದನ್ನು ಅನುಷ್ಠಾನಗೊಳಿಸಲು ನಿರ್ಣಯ ಕೈಗೊಳ್ಳಲಾಯಿತು.

ಶ್ರೀಮಂಗಲ ಪಿ.ಎ.ಸಿ.ಎಸ್. ಸಭಾಂಗಣದಲ್ಲಿ ಬೆಳೆಗಾರ ಮತ್ತು ಕಾರ್ಮಿಕ ಜಾಗೃತಿ ಸಮಿತಿಯಿಂದ ಏರ್ಪಡಿಸಿದ್ದ ಸಭೆಯಲ್ಲಿ ಈ ನಿರ್ಧಾರ ಕೈಗೊಂಡು ಜಿಲ್ಲೆಯ ಎಲ್ಲಾ ಭಾಗಗಳಲ್ಲಿ ಗ್ರಾಮಮಟ್ಟದಲ್ಲಿ ಸಮಿತಿ ರಚಿಸಿ ಬೆಳೆಗಾರರ ಸಂಕಷ್ಟ ವಿವರಿಸಿ ಸಮಿತಿಯಿಂದ ನಿಗದಿಪಡಿಸಿದ ದಿನಗೂಲಿಗಿಂತ ಹೆಚ್ಚು ಕೊಡುವ ಬೆಳೆಗಾರರು ಅಥವಾ ಹೆಚ್ಚು ಕೇಳುವ ಕಾರ್ಮಿಕರ ಮನವೊಲಿಸಿ ನಿಗದಿಪಡಿಸಿದ ಕೂಲಿ ಅನುಷ್ಠಾನ ಗೊಳಿಸಲು ನಿರ್ಧರಿಸಲಾಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ರೈತ ಸಂಘದ ಹಸಿರು ಸೇನೆ ಜಿಲ್ಲಾ ಕಾನೂನು ಸಲಹೆಗಾರ ಹೇಮಚಂದ್ರ ಅವರು ಕಾರ್ಮಿಕರ ಕನಿಷ್ಟ ಕೂಲಿಯನ್ನು ದೈನಂದಿನ ಬಳಕೆಯ ಹಲವು ಸಾಮಗ್ರಿಗಳ ಬೆಲೆ ಏರಿಕೆ ಪರಿಗಣಿಸಿ ಸರಕಾರ ಪ್ರತಿ ವರ್ಷ ಪರಿಷ್ಕರಿಸಲಾಗುತ್ತದೆ. ಆದರೆ, ಕಾಫಿ ತಯಾರಿಕೆಯಲ್ಲಿ ಹಾಲು, ಸಕ್ಕರೆ ದರ ಏರಿಕೆಯಾಗಿದೆ. ಕಾಫಿ ಪುಡಿ ದರ ೩೦ ವರ್ಷದ ಹಿಂದಿನAತಿದೆ. ಕನಿಷ್ಟ ಕೂಲಿ ಪರಿಷ್ಕರಣೆ ಸಂದರ್ಭ ಬೆಳೆಗಾರರ ಆದಾಯಗಳನ್ನು ಗಣನೆಗೆ ತೆಗೆದುಕೊಂಡು ನಿರ್ಧರಿಸಬೇಕಾಗಿದೆ ಎಂದರು. ಪ್ರಥಮ ಹಂತವಾಗಿ ಕಾಫಿ ಬೆಳೆಗಾರರ ವಾಸ್ತವಿಕತೆಯನ್ನು ರಾಜ್ಯ ಸರಕಾರದ ಕಾರ್ಮಿಕ ಸಚಿವಾಲಯ, ಅಧಿಕಾರಿಗಳಿಗೆ ಮನವರಿಕೆ ಮಾಡಬೇಕಾಗಿದೆ ಎಂದರು.

ಕಾಫಿ ಮಂಡಳಿ ಸದಸ್ಯ ಮಚ್ಚಮಾಡ ಡಾಲಿ ಚಂಗಪ್ಪ ಮಾತನಾಡಿ, ಅಸ್ಸಾಂ, ಬಿಹಾರ್ ಇತರ ರಾಜ್ಯಗಳಿಂದ ಕಾರ್ಮಿಕರು ಬಂದ ನಂತರ ಜಿಲ್ಲೆಯ ಕಾಫಿ ತೋಟ ನಿರ್ವಹಣೆ ಕಾಣುತ್ತಿದ್ದು, ಕಾರ್ಮಿಕರ ಸಮಸ್ಯೆ ಬಹುತೇಕ ದೂರವಾಗಿದೆ. ಬೆಳೆಗಾರರು, ಕಾರ್ಮಿಕರ ಆರೋಗ್ಯ ಸೇರಿದಂತೆ ಮಾನವೀಯತೆಯಿಂದ ನೋಡಿಕೊಳ್ಳುತ್ತಿದ್ದೇವೆ. ಬೆಳೆಗಾರರು ಬೆಳೆನಷ್ಟ, ಎರಡೂವರೆ ದಶಕದ ಹಿಂದಿನ ದರದಲ್ಲಿರುವ ಕಾಫಿ ಮಾರುಕಟ್ಟೆ, ರಸಗೊಬ್ಬರ ದರ ಏರಿಕೆ ಇತ್ಯಾದಿ ಸಮಸ್ಯೆಗಳ ಬಗ್ಗೆ ಕಾರ್ಮಿಕರಿಗೆ ಹೇಳಿ ಮನವರಿಕೆ ಮಾಡಿಕೊಟ್ಟು ಕನಿಷ್ಟ ಕೂಲಿ ನಿಗದಿಪಡಿಸಬೇಕು. ಕಾರ್ಮಿಕರು ಕಾಫಿ ಬೆಳೆಗಾರರೊಂದಿಗೆ ಅವಿಭಾಜ್ಯ ಅಂಗವಾಗಿದ್ದಾರೆ ಎಂದರು.

ಇರ್ಪು ಶ್ರೀ ರಾಮೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಮದ್ರೀರ ವಿಷ್ಣು ಮಾತನಾಡಿ, ಗ್ರಾಮಮಟ್ಟದಲ್ಲಿ ನಿಗದಿಪಡಿಸಿದ ಕನಿಷ್ಟ ಕೂಲಿ ಸ್ಥಳೀಯ ಕಾರ್ಮಿಕರಿಗೆ ಹೊರತುಪಡಿಸಿ ಹೊರರಾಜ್ಯದ ಕಾರ್ಮಿಕರಿಗೆ ಅನ್ವಯಿಸುವಂತೆ ನಿಗದಿಪಡಿಸಿ ಪ್ರತಿ ಗ್ರಾಮ ಮಟ್ಟದಲ್ಲಿ ಸಮಿತಿ ರಚಿಸಿ ಅನುಷ್ಠಾನಕ್ಕೆ ತರಬೇಕೆಂದರು.

(ಮೊದಲ ಪುಟದಿಂದ) ಬೆಳೆಗಾರ ಜಾಗೃತಿ ಸಮಿತಿ ಮುಖಂಡ ಕಳ್ಳಂಗಡ ರಜತ್‌ಪೂವಣ್ಣ ಮಾತನಾಡಿ, ಕಾರ್ಮಿಕರ ವೇತನ ದಿನೇ ದಿನೇ ದುಬಾರಿಯಾಗುತ್ತಿದ್ದು, ಕೆಲಸದ ಸಮಯ ಕಡಿಮೆಯಾಗುತ್ತಿದೆ. ಇದರಿಂದ ಬೆಳೆಗಾರರಿಗೆ ನಷ್ಟವಾಗು ತ್ತಿದೆ. ಹೊರ ರಾಜ್ಯದ ವಲಸೆ ಕಾರ್ಮಿ ಕರು ತೋಟಗಾರಿಕಾ ಕೆಲಸಗಳನ್ನು ಕಲಿಯುವವರಾಗಿದ್ದು, ಕೌಶಲ್ಯಯುತ ಕಾರ್ಮಿಕರಲ್ಲ. ವಲಸೆ ಕಾರ್ಮಿಕರಿಗೆ ಕೆಲಸಗಳನ್ನು ಕಲಿಸಿ ತರಬೇತಿ ಹಂತದಲ್ಲಿ ಕೌಶಲ್ಯಯುತ ಕಾರ್ಮಿಕರಿಗೆ ನೀಡುವಂತೆ ಕೂಲಿ ನೀಡಲು ಸಾಧ್ಯವಿಲ್ಲ ಎಂದರು.

ರಾಜ್ಯ ರೈತ ಸಂಘ ಹಸಿರುಸೇನೆ ಜಿಲ್ಲಾ ಕಾರ್ಯದರ್ಶಿ ಅಜ್ಜಮಾಡ ಟಿ. ಚಂಗಪ್ಪ ಅವರು ಮಾತನಾಡಿ, ದಲ್ಲಾಳಿ ಮೇಸ್ತಿçಗಳಿಂದ ಬೆಳೆಗಾರರಿಗೆ ದೊಡ್ಡ ತೊಂದರೆಯಾಗುತ್ತಿದೆ. ಕಮಿಷನ್‌ಗಾಗಿ ಒಂದು ಬೆಳೆಗಾರರಿಂದ ಇನ್ನೊಂದು ಬೆಳೆಗಾರರಲ್ಲಿಗೆ ವಲಸೆ ಕಾರ್ಮಿಕರನ್ನು ಆಗಾಗ ಬದಲಾಯಿಸಲಾಗುತ್ತಿದೆ. ರೈತ ಸಂಘದಿAದ ಕನಿಷ್ಟ ಕೂಲಿ ನಿಗದಿ ಜಾರಿಗೆ ತರುವ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಬಗ್ಗೆ ರೈತ ಸಂಘ ಜಿಲ್ಲಾ ಸಮಿತಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.

ಕಾಫಿ ಮಂಡಳಿ ಬಗ್ಗೆ ಅಸಮಾಧಾನ

ಕಾಫಿ ಮಂಡಳಿಯ ಕಾರ್ಯ ವೈಖರಿ ಬೆಳೆಗಾರರ ಪರವಾಗಿಲ್ಲ. ಕಾಫಿ ಮಂಡಳಿಯ ಸಭೆಗೆ ಚಿಕ್ಕಮಗಳೂರು, ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಮತ್ತು ಕೊಡಗು, ಮೈಸೂರು ಸಂಸದ ಪ್ರತಾಪ್ ಸಿಂಹ ಬರುವುದಿಲ್ಲ ಎಂದು ಕಾಫಿ ಮಂಡಳಿ ಸದಸ್ಯ ಮಚ್ಚಮಾಡ ಡಾಲಿ ಚಂಗಪ್ಪ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

೩ ವರ್ಷಗಳಲ್ಲಿ ೭ ಸಭೆಯಾಗಿದ್ದು, ಯಾವುದೇ ಸಭೆಗೆ ಸಂಸದರು ಬಂದಿಲ್ಲ. ಆದರೆ, ಕೇರಳದ ಸಂಸದರು ತಪ್ಪದೇ ಬರುತ್ತಾರೆ. ಸಭೆಯಲ್ಲಿ ಚರ್ಚೆಯಾಗುವ ವಿಚಾರ ಸಂಸದರ ಮೂಲಕವೇ ಕೇಂದ್ರ ಸರಕಾರಕ್ಕೆ ತಲುಪಬೇಕು. ಆದರೆ, ಸಂಸದರುಗಳೇ ಸಭೆಗೆ ಬರದಿದ್ದರೇ ಬೆಳೆಗಾರರ ಸಮಸ್ಯೆ ಪರಿಹಾರ ಕಾಣುವುದು ಹೇಗೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಸಕ್ತ ಅವಧಿಯಲ್ಲಿ ಕಾಫಿ ಮಂಡಳಿಗೆ ಕೇಂದ್ರದಿAದ ರೂ. ೪೫೦ ಕೋಟಿ ಅನುದಾನ ಬಂದಿದ್ದು, ಇದರಲ್ಲಿ ರೂ. ೧೫೦ ಕೋಟಿ ಮಾತ್ರ ಬೆಳೆಗಾರರಿಗೆ ಸಹಾಯ ಧನಕ್ಕೆ ವಿನಿಯೋಗವಾಗುತ್ತದೆ. ಉಳಿದ ಹಣವೆಲ್ಲ ಮಂಡಳಿಯಲ್ಲಿ ಅಧಿಕಾರಿಗಳು, ಸಿಬ್ಬಂದಿಗಳ ವೇತನ, ವಾಹನ ಖರೀದಿ, ದುರಸ್ತಿ, ನಿರ್ವಹಣೆ, ಸಭೆಯ ಖರ್ಚುಗಳಿಗೆ ವಿನಿಯೋಗವಾಗುತ್ತದೆ ಎಂದರು. ಈ ಬಾರಿ ಕಾಫಿ ಕಣ, ಗೋದಾಮು ಮತ್ತು ಯಾಂತ್ರೀಕರಣಕ್ಕೆ ಶೇ. ೪೦ ರಷ್ಟು ಸಹಾಯಧನವಿದೆ ಎಂದರು. ವಿಶ್ವದಲ್ಲಿ ಕಾಫಿ ಬೆಳೆಯುವ ದೇಶಗಳಲ್ಲಿ ಎಕ್ರೆಯೊಂದಕ್ಕೆ ಭಾರತ ೧೫ ಚೀಲ (ಚೆರಿ), ಬ್ರೆಜಿಲ್ ೩೦ ಚೀಲ, ವಿಯೆಟ್ನಾಂ ೭೦ ಚೀಲ ಸರಾಸರಿ ಉತ್ಪಾದಿಸುತ್ತಿದೆ. ಬೆಳೆಗಾರರಿಗೆ ಕಾಫಿ ಮಂಡಳಿ ಅಧ್ಯಕ್ಷ ಸ್ಥಾನ ನೀಡಬೇಕೆಂಬ ಬೇಡಿಕೆ ಈಡೇರಿಸಿದ್ದರೂ, ಅವರಿಗೆ ಅಧಿಕಾರ ನೀಡದೇ ಕಾರ್ಯದರ್ಶಿ ಯಾದ ಐ.ಎ.ಎಸ್ ಅಧಿಕಾರಿಗೆ ಅಧಿಕಾರ ನೀಡಲಾಗಿದೆ ಎಂದರು.

ಸದ್ಯದಲ್ಲಿಯೇ ವೀರಾಜಪೇಟೆ ಕಾಫಿ ಮಂಡಳಿ ಡಿ.ಡಿ. ಕಚೇರಿ ಗೋಣಿಕೊಪ್ಪಕ್ಕೆ ಸ್ಥಳಾಂತರವಾಗಲಿದೆ. ಬಾಳೆಲೆ, ಶ್ರೀಮಂಗಲ ಕಚೇರಿಯನ್ನು ಸಹ ಗೋಣಿಕೊಪ್ಪಕ್ಕೆ ಸ್ಥಳಾಂತರಿ ಸಲಾಗುತ್ತದೆ. ಸಿಬ್ಬಂದಿ ಕೊರತೆಯಿಂದ ವಾರದಲ್ಲಿ ಹಲವು ದಿನ ಬಾಳೆಲೆ, ಶ್ರೀಮಂಗಲ ಕಚೇರಿ ಮುಚ್ಚಲ್ಪಟ್ಟಿರುತ್ತದೆ. ವೀರಾಜಪೇಟೆ ಕಚೇರಿ ಬಾಡಿಗೆ ಕಟ್ಟಡದಲ್ಲಿದೆ. ಗೊಣಿಕೊಪ್ಪದ ಕಾಫಿ ಮಂಡಳಿಯ ಕಟ್ಟಡಕ್ಕೆ ಸ್ಥಳಾಂತರಿಸಿ ವಾರದ ರಜೆ ದಿನ ಹೊರತುಪಡಿಸಿ ಉಳಿದೆಲ್ಲ ದಿನ ಕಚೇರಿಯಲ್ಲಿ ಡಿಡಿ, ಎಸ್.ಎಲ್.ಓ, ಜೆ.ಎಲ್.ಓ. ಮತ್ತು ಸಂಚಾರಿ ಮಣ್ಣು ಪರೀಕ್ಷಾ ತಂಡ ಲಭ್ಯವಿರುವಂತೆ ಕ್ರಮ ಕೈಗೊಳ್ಳಲಾಗುತ್ತದೆ.

ವೇದಿಕೆಯಲ್ಲಿ ಪುತ್ತರಿ ರೈತ ಉತ್ಪಾದಕರ ಸಂಸ್ಥೆಯ ಅಧ್ಯಕ್ಷ ಕಳ್ಳಂಗಡ ಸುಬ್ಬಯ್ಯ, ರೈತ ಸಂಘ ತಾಲೂಕು ಅಧ್ಯಕ್ಷ ಬಾಚಮಾಡ ಭವಿಕುಮಾರ್, ಬೆಳೆಗಾರ, ಕಾರ್ಮಿಕ ಜಾಗೃತಿ ಸಮಿತಿಯ ಸದಸ್ಯರಾದ ಕೆ.ಎನ್. ಸಂದೀಪ್, ಬೊಳ್ಳೇರ ರಾಜಸುಬ್ಬಯ್ಯ ಹಾಜರಿದ್ದರು.