*ಗೋಣಿಕೊಪ್ಪ, ಆ. ೧೦: ಕ್ವಿಟ್ ಇಂಡಿಯಾ ಚಳುವಳಿಯ ೭೯ನೇ ವರ್ಷದ ಅಂಗವಾಗಿ ಗೋಣಿಕೊಪ್ಪ ಕಾವೇರಿ ಕಾಲೇಜಿನ ಎನ್.ಸಿ.ಸಿ ಕೆಡೆಟ್ಗಳಿಂದ ನೆನಪಿನ ಆಚರಣೆ ನಡೆಸಲಾಯಿತು.
ಕಾಲೇಜಿನ ಆವರಣದಿಂದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ತಿಮ್ಮಯ್ಯ ಅವರ ಪ್ರತಿಮೆಯವರೆಗೆ ಮೆರವಣಿಗೆ ನಡೆಸಿದರು. ನಂತರ ಕ್ವಿಟ್ ಇಂಡಿಯಾ ಚಳವಳಿಯ ಉದ್ದೇಶ ಮತ್ತು ಹೋರಾಟದ ಫಲದ ಬಗ್ಗೆ ತಿಳಿಸಲಾಯಿತು.
ಮಹಾತ್ಮ ಗಾಂಧಿಯವರ ಮುಂದಾಳತ್ವದಲ್ಲಿ ಮುಂಬೈಯ ಗೊವಾಳಿಯ ಮೈದಾನದಲ್ಲಿ ನಡೆದ ‘ಮಾಡು ಇಲ್ಲವೇ ಮಡಿ’ ಘೋಷಣೆಯಿಂದ ಈ ಚಳವಳಿ ಪ್ರಾರಂಭಿಸಲಾಗಿದ್ದು, ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂಬ ಮುಖ್ಯ ಘೋಷಣೆಯನ್ನು ಹೊಂದಿತ್ತು. ಚಳುವಳಿಯಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರು, ಸಮಾಜದ ಎಲ್ಲ ವರ್ಗದ ಜನರೂ ಭಾಗವಹಿಸಿ ದೇಶಕ್ಕೋಸ್ಕರ ಲಕ್ಷಾಂತರ ಭಾರತೀಯರು ತಮ್ಮ ಜೀವವನ್ನೇ ಮುಡಿಪಾಗಿಟ್ಟ ಈ ದಿನವನ್ನು ಶ್ರದ್ಧಾಂಜಲಿ ಸಲ್ಲಿಸುವುದರೊಂದಿಗೆ ಆಚರಿಸುತ್ತಿರುವ ಉದ್ದೇಶವನ್ನು ಎನ್.ಸಿ.ಸಿ. ಕೆಡೆಟ್ಗಳಿಗೆ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಅಕ್ರಂ ಮನವರಿಕೆ ಮಾಡಿಕೊಟ್ಟರು.
ಘಟಕದ ನಾಯಕರುಗಳಾದ ಶರತ್, ಫರಾನ್, ಉತ್ತಯ್ಯ, ರಂಜಿತ್, ಎನ್.ಸಿ.ಸಿ. ಕೆಡೆಟ್ಗಳು ಪಾಲ್ಗೊಂಡಿದ್ದರು.