ಮಡಿಕೇರಿ ಆ.೧೧ : ಮತ್ತೂರು ಗ್ರಾಮದ ಕಾಕೇರ ಪೂವಯ್ಯ ಎಂಬವರ ಮನೆಗೆ ನುಗ್ಗಿ ನಗದು ಹಾಗೂ ಚಿನ್ನಾಭರಣ ಕಳವು ಮಾಡಿದ ಆರೋಪದಡಿ ಬಂಧನಕ್ಕೊಳಗಾಗಿರುವ ಪಣಿಯರವರ ಸುಬ್ರಮಣಿ ಚುಬ್ರು (೨೮) ಎಂಬಾತ ಅಪಾಯಕಾರಿ ವ್ಯಕ್ತಿಯಾಗಿದ್ದು, ಜನರ ಸುರಕ್ಷತೆಯ ದೃಷ್ಟಿಯಿಂದ ಈತನನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡಬಾರದು ಮತ್ತು ಜಿಲ್ಲೆಯಿಂದ ಗಡಿಪಾರು ಮಾಡಬೇಕು; ಇಲ್ಲವೇ ಸೂಕ್ತ ಚಿಕಿತ್ಸೆ ನೀಡಬೇಕೆಂದು ಕಿರುಗೂರು ಗ್ರಾ.ಪಂ ಸದಸ್ಯ ಚೆಪ್ಪುಡಿರ ರಾಕೇಶ್ ದೇವಯ್ಯ ಒತ್ತಾಯಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಹಲವು ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿರುವ ಈತ ಜೈಲಿನಿಂದ ಬಿಡುಗಡೆಯಾದ ತಕ್ಷಣ ಕತ್ತಿ ಹಿಡಿದುಕೊಂಡು ಊರೆಲ್ಲ ಸಂಚರಿಸುತ್ತಾನೆ, ಇದು ಗ್ರಾಮದ ಜನರ ಆತಂಕಕ್ಕೆ ಕಾರಣವಾಗಿದೆ ಎಂದು ಎಂದು ತಿಳಿಸಿದ್ದಾರೆ.

ಕಳ್ಳತನವನ್ನೇ ಕಾಯಕ ಮಾಡಿಕೊಂಡಿರುವ ಚುಬ್ರು ಕಿರುಗೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಒಂಟಿ ಮಹಿಳೆಯನ್ನು ಹತ್ಯೆ ಮಾಡಿದ ಆರೋಪದಡಿ ಜೈಲಿಗೂ ಹೋಗಿ ಬಂದಿದ್ದಾನೆ. ಹಲವು ಮನೆಗಳನ್ನು ದರೋಡೆ ಮಾಡಿದ್ದಾನೆ, ಅಲ್ಲದೆ ಜನರ ಮೇಲೆ ಹಲ್ಲೆಗೂ ಯತ್ನಿಸಿದ್ದಾನೆ. ಸದಾ ಆಯುಧದೊಂದಿಗೆ ಸುತ್ತಾಡುವ ಈತ ಸಮಾಜಕ್ಕೆ ಅಪಾಯಕಾರಿಯಾಗಿದ್ದು, ಪೊಲೀಸರು ಕಠಿಣ ಪ್ರಕರಣ ದಾಖಲಿಸಿಕೊಳ್ಳುವ ಮೂಲಕ ಬಿಡುಗಡೆಯಾಗದಂತೆ ನೋಡಿಕೊಳ್ಳಬೇಕು.

ಕಿರುಗೂರು ಪಂಚಾಯ್ತಿ ವ್ಯಾಪ್ತಿಯಲ್ಲಿ ಈತನ ಉಪಟಳ ಹೆಚ್ಚಾಗಿರುವುದರಿಂದ ಕೊಡಗಿನಿಂದಲೇ ಗಡಿಪಾರು ಮಾಡಬೇಕು. ಒಂದು ವೇಳೆ ಈತ ಮಾನಸಿಕ ಅಸ್ವಸ್ಥನಾಗಿದ್ದಲ್ಲಿ ಸೂಕ್ತ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ರಾಕೇಶ್ ದೇವಯ್ಯ ಒತ್ತಾಯಿಸಿದ್ದಾರೆ.