ಕೂಡಿಗೆ, ಆ. ೯: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿಯಲ್ಲಿ ಹೊಸ ಆನೆ ಕ್ಯಾಂಪ್ ತೆರೆಯುವ ಬಗ್ಗೆ ಸರಕಾರದ ಮಟ್ಟದಲ್ಲಿ ಚಿಂತನೆ ನಡೆಸಲಾಗಿದ್ದು ಅದರ ಅನ್ವಯ ಅರಣ್ಯ ಇಲಾಖೆ ಮುಂದಾಗಿದೆ. ಈಗಾಗಲೇ ಅರಣ್ಯ ಇಲಾಖೆಯ ಮೂಲಕ ಸರಕಾರಕ್ಕೆ ರೂ. ೭೫ ಲಕ್ಷ ಮೊತ್ತದ ಯೋಜನೆಯ ಪ್ರಸ್ತಾವನೆ ಕಳುಹಿಸಲಾಗಿದೆ.

ಹೈಕೋರ್ಟ್ ಆದೇಶದಂತೆ ಒಂದು ಆನೆ ಕ್ಯಾಂಪ್‌ನಲ್ಲಿ ೧೫ ಸಾಕಾನೆಗಳು ಇರಲು ಅನುಮತಿ ಇದೆ. ಆದರೆ ಕುಶಾಲನಗರ ಸಮಿಪದ ದುಬಾರೆ ಆನೆ ಕ್ಯಾಂಪ್‌ನಲ್ಲಿ ಈಗಾಗಲೇ ೩೨ ಆನೆಗಳಿದ್ದು, ಅವುಗಳಿಗೆ ಬೇಕಾಗುವ ವ್ಯವಸ್ಥೆ, ಸಿಬ್ಬಂದಿಗಳು, ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲು ಸ್ವಲ್ಪ ಮಟ್ಟಿಗೆ ಕಷ್ಟಕರವಾದರೂ ಇಲಾಖೆಯ ನಿಯಮನುಸಾರವಾಗಿ ಆನೆ ಕ್ಯಾಂಪ್ ನಡೆಯುತ್ತಿದೆ. ದುಬಾರೆ ಆನೆ ಕ್ಯಾಂಪ್‌ನಲ್ಲಿ ೩೨ಕ್ಕೂ ಹೆಚ್ಚು ಸಾಕಾನೆಗಳು ಇರುವುದರಿಂದ ಅವುಗಳಲ್ಲಿ ಕೆಲ ಆನೆಗಳನ್ನು ಬೇರೆ ಕ್ಯಾಂಪ್ ಮಾಡಿ ಎಲ್ಲಾ ರೀತಿಯ ಸೌಲಭ್ಯಗಳು ಇರುವ ಸ್ಥಳವನ್ನು ಗುರುತಿಸುವಂತೆ ರಾಜ್ಯ ಮಟ್ಟದ ಅರಣ್ಯ ಇಲಾಖೆಯ ಅಧಿಕಾರಿ ವರ್ಗದವರು ಸೂಚಿಸಿದ ಮೇರೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾರಂಗಿಯ ಹಿನ್ನೀರಿನ ಪ್ರದೇಶದ ಸ್ಥಳ ಪರಿಶೀಲನೆ ನಡೆಸಿ ಆನೆ ಕ್ಯಾಂಪ್ ನಡೆಸಲು ಸೂಕ್ತವಾದ ಸ್ಥಳ ಎಂದು ಗುರುತಿಸಿ ಹಿರಿಯ ಅಧಿಕಾರಿಗಳಿಗೆ ಸಲ್ಲಿಸಿದರು.

ಅದರಂತೆ ರಾಜ್ಯ ಮಟ್ಟದ ಅರಣ್ಯ ಇಲಾಖೆಯ ಅಧಿಕಾರಿಗಳ ತಂಡದ ಪ್ರಮುಖರು ಹಾರಂಗಿ ಹಿನ್ನೀರಿನ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಿದ್ದರು. ಹಾರಂಗಿಯಲ್ಲಿ ಆನೆ ಕ್ಯಾಂಪ್ ತೆರೆಯುವ ಸಮಗ್ರವಾದ ಮಾಹಿತಿಯನ್ನು ಜಿಲ್ಲಾ ಅರಣ್ಯ ಇಲಾಖೆಯವರು ನೀಡಿದ ಮೇರೆಗೆ ಉನ್ನತ ಮಟ್ಟದ ಅಧಿಕಾರಿಗಳು ಪ್ರಸ್ತಾವನೆಯನ್ನು ಕಳುಹಿಸಲು ಸೂಚನೆ ನೀಡಿದ್ದರು. ಅದರಂತೆ ಸರ್ಕಾರಕ್ಕೆ ಅರಣ್ಯ ಇಲಾಖೆ ವತಿಯಿಂದ ರೂ. ೭೫ ಲಕ್ಷ ಯೋಜನೆಯ ಪ್ರಸ್ತಾವನೆ ಕಳುಹಿಸಲಾಗಿದೆ.

ಹೈಕೋರ್ಟ್ನ ಆದೇಶದಂತೆ ಅರಣ್ಯ ಇಲಾಖೆಯು ಮುಂದಾಗಿರುವುದ ರಿಂದ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಸಹ ಹಾರಂಗಿಯಲ್ಲಿ ಆನೆ ಕ್ಯಾಂಪ್ ಪ್ರಾರಂಭಕ್ಕೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲು ಕುಶಾಲನಗರದ ನಿಸರ್ಗಧಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅರಣ್ಯ ಇಲಾಖೆಯವರು ಕಾರ್ಯೋನ್ಮುಖರಾಗಿದ್ದಾರೆ. ಈಗಾಗಲೇ ಹಾರಂಗಿಯಲ್ಲಿ ಅಋಣ್ಯ ಇಲಾಖೆ ವತಿಯಿಂದ ಟ್ರೀಪಾರ್ಕ್ ತೆರೆಯಲು ಉದ್ದೇಶಿಸಿದ್ದು,ಶೇ. ೭೦ ಭಾಗದಷ್ಟು ಕಾಮಗಾರಿಗಳು ಮುಗಿದಿದೆ. ಅರಣ್ಯ ಇಲಾಖೆಯ ಟ್ರೀ ಪಾರ್ಕ್ ಯೋಜನೆ ಜೊತೆಯಲ್ಲಿ ಪ್ರವಾಸಿಗರಿಗೆ ಹೆಚ್ಚು ಅನುಕೂಲವಾಗುವಂತೆ ಮತ್ತು ಹಾರಂಗಿಯಲ್ಲಿ ನೀರಿನ ವ್ಯವಸ್ಥೆ ಮತ್ತು ಸಮೀಪದಲ್ಲಿ ಕಾಡು ಇರುವುದರಿಂದ ಹೊಸ ಆನೆ ಕ್ಯಾಂಪ್ ತೆರೆಯುವ ಎಲ್ಲಾ ಪ್ರಕ್ರಿಯೆ ನಡೆಯುತ್ತಿವೆ ಎಂದು ಕುಶಾಲನಗರ ವಲಯ ಅರಣ್ಯ ಅಧಿಕಾರಿ ಅನನ್ಯಕುಮಾರ್ ಮಾಹಿತಿ ನೀಡಿದ್ದಾರೆ.

ಸರಕಾರಕ್ಕೆ ಕಳುಹಿಸಲಾಗಿರುವ ಪ್ರಸ್ತಾವನೆ ಅನುಗುಣವಾಗಿ ಹಣ ಬಿಡುಗಡೆಯಾಗಿ ಇಲಾಖೆಯ ಅನುಮತಿ ದೊರೆತರೆ ಜಿಲ್ಲೆಗೆ ಬರುವ ಪ್ರವಾಸಿಗರಿಗೆ ಅನುಕೂಲವಾಗುವಂತೆ ಎಲ್ಲಾ ರೀತಿಯ ಯೋಜನೆಯನ್ನು ರೂಪಿಸಲಾಗುವುದು. ಇದರ ಜೊತೆಗೆ ಟ್ರೀ ಪಾರ್ಕ್ ಅಭಿವೃದ್ಧಿಪಡಿಸಲಾಗು ವುದು ಎಂದು ಆಧಿಕಾರಿ ತಿಳಿಸಿದ್ದಾರೆ.

ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಈಗಾಗಲೇ ಕುಶಾಲನಗರ ತಾಲೂಕಿನ ದುಬಾರೆ ಆನೆ ಶಿಬಿರದ ವೀಕ್ಷಣೆ ನಂತರ ಕಾವೇರಿ ನಡಿಯಲ್ಲಿ ಸಾಹಸ ಕ್ರೀಡೆ, ಸಮೀಪ ಕಾವೇರಿ ನಿಸರ್ಗಧಾಮ ನಂತರ ಹಾರಂಗಿಯ ಬೃಂದಾವನ ಉದ್ಯಾನವನ ಸಂಗೀತ ಕಾರಂಜಿ ನೋಡಲು ಲಭ್ಯವಿದೆ. ಮುಂದಿನ ದಿನಗಳಲ್ಲಿ ಟ್ರೀ ಪಾರ್ಕ್ ಜೊತೆಗೆ ಹೊಸದಾಗಿ ಆನೆ ಕ್ಯಾಂಪ್ ವೀಕ್ಷಣೆಗೆ ಲಭ್ಯವಾಗಲಿದೆ.

-ಕೆ. ಕೆ. ನಾಗರಾಜಶೆಟ್ಟಿ