ಸೋಮವಾರಪೇಟೆ, ಆ. ೯: ‘ಸಣ್ಣಪುಟ್ಟ ಗೊಂದಲಗಳನ್ನು ಬಗೆಹರಿಸಿಕೊಂಡು ಪಕ್ಷ ಸಂಘಟನೆ ಮಾಡಬೇಕು. ಕಾರ್ಯಕರ್ತರು ಅನಗತ್ಯ ಗೊಂದಲಗಳಿಗೆ ಒಳಗಾಗಬಾರದು’ ಎಂದು ಪಕ್ಷದ ಹಿರಿಯ ಮುಖಂಡರು ಭಾಷಣ ಮಾಡಿದ್ದನ್ನು ಶಿಸ್ತುಬದ್ಧವಾಗಿ ಆಲಿಸಿದ ಕಾರ್ಯಕರ್ತರು, ಕೊನೆ ಕ್ಷಣದಲ್ಲಿ ನೂತನ ಪದಾಧಿಕಾರಿಗಳಿಗೆ ನೇಮಕಾತಿ ಆದೇಶ ಪ್ರತಿ ನೀಡುವ ಸಂದರ್ಭ ಅಸಮಾಧಾನ ಹೊರಹಾಕಿ ಗದ್ದಲ ಎಬ್ಬಿಸಿದ ಘಟನೆ ಜೆಡಿಎಸ್ ಸಭೆಯಲ್ಲಿ ನಡೆಯಿತು.

ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ ಅವರ ಉಪಸ್ಥಿತಿಯಲ್ಲಿ ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕಾರ್ಯಕಾರಿಣಿ ಸಭೆಯಲ್ಲಿ ಕಾರ್ಯಕರ್ತರ ಅಸಮಾಧಾನ ಸ್ಫೋಟಗೊಂಡ ಹಿನ್ನೆಲೆ ವೇದಿಕೆಯಲ್ಲಿದ್ದ ರಾಜ್ಯಮಟ್ಟದ ನಾಯಕರು ಗಲಿಬಿಲಿಗೊಂಡರು.

ಪಕ್ಷದ ಉಸ್ತುವಾರಿ, ಮಾಜೀ ಸಚಿವ ಬಿ.ಬಿ. ಲಿಂಗಯ್ಯ, ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಬಿ. ಗಣೇಶ್ ಅವರ ಉಸ್ತುವಾರಿಯಲ್ಲಿ ಕೊಡಗಿನಲ್ಲಿ ಪಕ್ಷದ ಸಂಘಟನೆಗೆ ನೆರವಾಗುವ ದೃಷ್ಟಿಯಿಂದ ೧೦೨ ಮಂದಿಯ ಕಾರ್ಯಕಾರಿಣಿ ರಚಿಸಲಾಗಿದ್ದು, ಇದಕ್ಕೆ ಖುದ್ದು ರಾಜ್ಯಾಧ್ಯಕ್ಷರೇ ಒಪ್ಪಿಗೆಯನ್ನೂ ನೀಡಿದ್ದರು.

ಅದರಂತೆ ಇಂದು ಒಕ್ಕಲಿಗರ ಸಮುದಾಯ ಭವನದಲ್ಲಿ ಸಭೆ ನಡೆಸಿ, ಮುಂದಿನ ತಾ.ಪಂ. ಹಾಗೂ ಜಿ.ಪಂ. ಚುನಾವಣೆಗೆ ಸಂಬAಧಿಸಿದAತೆ ಪಕ್ಷ ಸಂಘಟನೆಯ ಬಗ್ಗೆ ಚರ್ಚಿಸಿ ರೂಪುರೇಷೆ ಸಿದ್ಧಪಡಿಸಲು ನಿರ್ಧರಿಸಲಾಗಿತ್ತು. ಇದರ ನಡುವೆಯೇ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಮಾಡುವ ಕಾರ್ಯಕ್ರಮವೂ ಆಯೋಜಿತಗೊಂಡಿತ್ತು.

ವಿವಿಧ ಭಾಗಗಳಿಂದ ಪಕ್ಷದ ಕಾರ್ಯಕರ್ತರು ಸಭೆಗೆ ಆಗಮಿಸಿದ್ದರು. ಕೆಲವರು ಕಾರ್ಯಕರ್ತರ ಸಭೆ ಎಂದುಕೊAಡು ಬಂದಿದ್ದರು. ಆದರೆ ವೇದಿಕೆಯಲ್ಲಿದ್ದವರು ಇದು ಕಾರ್ಯಕರ್ತರ ಸಭೆಯಲ್ಲ; ಕಾರ್ಯಕಾರಿಣಿ ಸಭೆ ಎನ್ನುವ ಮೂಲಕ ಆರಂಭದಲ್ಲಿ ಒಂದಿಷ್ಟು ಗೊಂದಲಕ್ಕೆ ವೇದಿಕೆ ಒದಗಿಸಿದರು.

ನಾಯಕರ ಭಾಷಣದ ಮಧ್ಯದಲ್ಲಿಯೇ ಕೆಲ ಕಾರ್ಯಕರ್ತರು ಪಕ್ಷ ಸಂಘಟನೆಯ ಬಗ್ಗೆ ತಮ್ಮ ಅಭಿಪ್ರಾಯ/ನಾಯಕರ ಮೇಲಿನ ಅಸಮಾಧಾನ ಹೊರಹಾಕುತ್ತಿದ್ದರು. ಜಿಲ್ಲೆಯ ಜೆಡಿಎಸ್‌ನಲ್ಲಿ ೨ ಬಣ ಇದೆ. ಪಕ್ಷದ ನಾಯಕ ಪ್ರಜ್ವಲ್ ರೇವಣ್ಣ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭ ಜಿಲ್ಲಾಧ್ಯಕ್ಷರು ಬರಲಿಲ್ಲ. ಇಂದು ಇಲ್ಲಿ ಸಭೆ ನಡೆಸುತ್ತಿದ್ದರೆ ಮತ್ತೊಂದು ಗುಂಪು ಬೆಂಗಳೂರಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡುತ್ತಿದೆ. ಮೊದಲು ಈ ಗೊಂದಲ ಬಗೆಹರಿಸಿ. ಅದು ಬಿಟ್ಟು ಎಷ್ಟೇ ಸಭೆ ನಡೆಸಿದರೂ ಪ್ರಯೋಜನವಿಲ್ಲ. ಮುಂದಿನ ಉಸ್ತುವಾರಿಯನ್ನು ಪ್ರಜ್ವಲ್ ರೇವಣ್ಣ ಅವರಿಗೆ ನೀಡಿ ಎಂದು ಒತ್ತಾಯಿಸಿದರು.

ನಾಯಕರ ಜಗಳದಿಂದಾಗಿ ಕಾರ್ಯಕರ್ತರು ಗೊಂದಲದಲ್ಲಿ ಮುಳುಗಿದ್ದಾರೆ. ರಾಜ್ಯಮಟ್ಟದ ನಾಯಕರು ಈ ಬಗ್ಗೆ ಗಮನ ಹರಿಸಬೇಕು. ಜಿಲ್ಲೆಯ ನಾಯಕತ್ವ ಬದಲಾವಣೆ ಮಾಡುವುದಾದರೆ ಈಗಲೇ ಮಾಡಿ. ಒಟ್ಟಾರೆ ಎಲ್ಲಾ ಗೊಂದಲಗಳನ್ನು ಮುಂದಿನ ೧೦ ದಿನದಲ್ಲಿ ಬಗೆಹರಿಸಿ ಎಂದು ಕಾರ್ಯಕರ್ತರು ಆಗ್ರಹಿಸಿದರು.

ಈ ಸಂದರ್ಭ ಮೈಕ್ ಹಿಡಿದ ಜಿಲ್ಲಾಧ್ಯಕ್ಷ ಗಣೇಶ್ ಅವರು, ಪ್ರಜ್ವಲ್ ಅವರ ಭೇಟಿಯ ಬಗ್ಗೆ ನನಗೆ ಮಾಹಿತಿಯೇ ಇರಲಿಲ್ಲ. ನಂತರ ಅವರೊಂದಿಗೆ ಮಾತುಕತೆ ನಡೆಸಲಾಗಿದೆ. ಜೆಡಿಎಸ್‌ನಲ್ಲಿ ಯಾವುದೇ ಬಣಗಳಿಲ್ಲ. ಪಕ್ಷದ ಕಾರ್ಯಕ್ರಮಗಳ ಬಗ್ಗೆ ಎಲ್ಲರಿಗೂ ಮಾಹಿತಿ ನೀಡಲಾಗುತ್ತಿದೆ. ಎಲ್ಲರನ್ನೂ ಒಟ್ಟಾಗಿಸಿ ಪಕ್ಷ ಸಂಘಟನೆ ಮಾಡಲು ಬದ್ಧರಿದ್ದೇವೆ. ನಾಯಕತ್ವ ಬದಲಾವಣೆ ಅಗತ್ಯವಾಗಿದ್ದರೆ ಮಾಡಲಿ; ಯಾರನ್ನು ಬೇಕಾದರೂ ಜಿಲ್ಲಾಧ್ಯಕ್ಷರನ್ನಾಗಿ ಮಾಡಲಿ, ನಾನು ಸಾಮಾನ್ಯ ಕಾರ್ಯಕರ್ತನಂತೆ ಜೆಡಿಎಸ್‌ಗೆ ದುಡಿಯುತ್ತೇನೆ. ಗೊಂದಲ ಸೃಷ್ಟಿಸುವುದಿಲ್ಲ ಎಂದರು.

ಈ ಬಗ್ಗೆ ಕೆಲ ನಿಮಿಷ ಚರ್ಚೆ ನಡೆದು ನಂತರ ಸಭೆ ಮುಂದುವರೆಯಿತು. ಸಭೆಯ ಕೊನೆಯಲ್ಲಿ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಮಾಡಲು ವೇದಿಕೆ ಸಿದ್ಧಗೊಳ್ಳುತ್ತಿದ್ದಂತೆ ಎದ್ದು ನಿಂತ ಕೆಲ ಕಾರ್ಯಕರ್ತರು, ಯಾರನ್ನು ಕೇಳಿ ನೂತನ ಸಮಿತಿ ಮಾಡಿದ್ದೀರಿ. ಕಾರ್ಯಕರ್ತರ ಸಭೆ ಕರೆಯದೇ ಸಮಿತಿ ರಚನೆ ಮಾಡಿರುವುದು ಸರಿಯಲ್ಲ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಭೆ ನಡೆಸಿ ನಂತರ ಸಮಿತಿಗಳನ್ನು ರಚಿಸಿ. ಇಲ್ಲಿ ಯಾವುದೇ ಅಧಿಕಾರ ನೀಡುವುದು ಬೇಡ ಎಂದರು.

ಇದು ತಾತ್ಕಾಲಿಕ ಸಮಿತಿ, ಮುಂದೆ ಸಭೆ ನಡೆಸಿ ಪದಾಧಿಕಾರಿಗಳನ್ನು ನೇಮಕಗೊಳಿಸುವ. ಖುದ್ದು ಹೆಚ್.ಡಿ. ಕುಮಾರಸ್ವಾಮಿ ಅವರನ್ನೇ ಕರೆದು ಸಭೆ ನಡೆಸಲಾಗುವುದು ಎಂದು ಪ್ರಮುಖರು ಹೇಳಿದರು. ಇದಕ್ಕೆ ಸೊಪ್ಪು ಹಾಕದ ಕಾರ್ಯಕರ್ತರು ಆಕ್ಷೇಪ ಮುಂದುವರೆಸಿದರು. ವೇದಿಕೆ ಮುಂಭಾಗ ಬಂದು ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಸಭಾತ್ಯಾಗ ಮಾಡಿದರು. ಈ ಸಂದರ್ಭ ಸಭೆಯಲ್ಲಿ ಗೊಂದಲ ಏರ್ಪಟ್ಟಿತು. ಕಾರ್ಯಕರ್ತ ರನ್ನು ಸಮಾಧಾನ ಪಡಿಸಲು ಎಷ್ಟೇ ಪ್ರಯತ್ನಿಸಿದರೂ ಫಲ ಕಾಣಲಿಲ್ಲ.

ಜೆಡಿಎಸ್‌ನ ನೂತನ ಸಮಿತಿಯ ನೇಮಕಕ್ಕೆ ಕಾರ್ಯಕರ್ತರಾದ ಬಗ್ಗನ ಅನಿಲ್, ಶಿವಪ್ಪ, ರವಿ, ಸಂತೊಷ್, ಶರತ್, ನಾಗರಾಜು, ರಕ್ಷಿತ್, ರತೀಶ್, ನಾರಾಯಣ ಸೇರಿದಂತೆ ಇತರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಆಕ್ಷೇಪ ವ್ಯಕ್ತಪಡಿಸಿದ ಕಾರ್ಯ ಕರ್ತರು ಸಭೆಯಿಂದ ಹೊರಬಂದ ನಂತರ ನೂತನ ಪದಾಧಿಕಾರಿಗಳಿಗೆ ನೇಮಕಾತಿ ಆದೇಶ ನೀಡಲಾಯಿತು. ಈ ಹಿಂದೆ ರಾಜ್ಯಾದ್ಯಂತ ಇದ್ದ ಸಮಿತಿಗಳನ್ನು ವಿಸರ್ಜಿಸಲಾಗಿದ್ದು, ಪಕ್ಷ ಸಂಘಟನೆಯ ಉದ್ದೇಶದಿಂದ ನೂತನವಾಗಿ ತಾತ್ಕಾಲಿಕ ಸಮಿತಿಗಳನ್ನು ರಚಿಸಲಾಗಿದೆ. ಇದರಲ್ಲೂ ಬದಲಾವಣೆಗೆ ಅವಕಾಶವಿದೆ ಎಂದು ರಾಜ್ಯಾಧ್ಯಕ್ಷರು ತಿಳಿಸಿದರು. ಅಷ್ಟರಲ್ಲಿ ಸಭಾಂಗಣದ ಬಹುತೇಕ ಖುರ್ಚಿಗಳು ಖಾಲಿಯಾಗಿದ್ದವು.

- ವಿಜಯ್ ಹಾನಗಲ್