ಮಡಿಕೇರಿ, ಆ. ೭: ಸೌಹಾರ್ದತೆಗೆ ಹೆಸರಾದ ಕೊಡಗು ಜಿಲ್ಲೆಯಲ್ಲಿ ಯಾರೂ ಶಾಂತಿ ಕದಡಲು ಯತ್ನಿಸಬಾರದು ಎಂದು ಮನವಿ ಮಾಡಿರುವ ಎಸ್.ವೈ.ಎಸ್. ಸಂಘಟನೆ, ಅಪಘಾತ ಪ್ರಕರಣವನ್ನು ಮುಂದಿಟ್ಟುಕೊAಡು ಅಶಾಂತಿ ಮೂಡಿಸುವುದು ಖಂಡನೀಯ ವೆಂದು ತಿಳಿಸಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಎಸ್.ವೈ.ಎಸ್.ನ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿ.ಎಂ. ಹಮೀದ್ ಮುಸ್ಲಿಯಾರ್, ಪ್ರಮುಖರಾದ ಕೆ.ಐ. ರಫೀಕ್ ಹಾಜಿ ಹಾಗೂ ಅಣ್ಣ ಷರೀಫ್ ಅಪಘಾತಗಳು ನಿತ್ಯ ನಡೆಯುತ್ತಲೇ ಇರುತ್ತವೆ, ಅದೇ ಪ್ರಕಾರವಾಗಿ ಬೋಯಿಕೇರಿಯಲ್ಲೂ ಎರಡು ಕಾರುಗಳ ನಡುವೆ ಆಕಸ್ಮಿಕವಾಗಿ ಡಿಕ್ಕಿ ಸಂಭವಿಸಿದೆ. ಇದನ್ನೇ ದೊಡ್ಡದು ಮಾಡಿ ಗೊಂದಲ ಸೃಷ್ಟಿಸುವುದು ಸರಿಯಲ್ಲವೆಂದು ಹೇಳಿದ್ದಾರೆ.

ನಿರ್ದಿಷ್ಟ ಸಮುದಾಯದ ವಿರುದ್ಧ ಘೋಷಣೆಗಳನ್ನು ಕೂಗಿ ಗಲಭೆಗಳಿಗೆ ಪ್ರಚೋದನೆ ನೀಡಿರುವುದಲ್ಲದೆ ಹೊರ ಜಿಲ್ಲೆಗಳಿಂದಲೂ ಜನರನ್ನು ಕರೆಯಿಸಿರುವುದನ್ನು ಗಮನಿಸಿದರೆ ಇದರ ಹಿಂದೆ ದೊಡ್ಡ ಷಡ್ಯಂತ್ರವೇ ನಡೆಯುತ್ತಿದೆ ಎನ್ನುವ ಸಂಶಯ ಮೂಡುತ್ತಿದೆ ಎಂದು ಪ್ರಮುಖರು ಆರೋಪಿಸಿದ್ದಾರೆ. ದೇಶವನ್ನು ಕಾಯುವ ಯೋಧರನ್ನು ಪ್ರತಿಯೊಬ್ಬರು ಗೌರವಿಸುತ್ತಾರೆ, ಎಲ್ಲಾ ಜಾತಿ ಧರ್ಮದ ಕುಟುಂಬದಲ್ಲಿಯೂ ಯೋಧರಿದ್ದಾರೆ. ಅಪಘಾತ ನಡೆದ ಎರಡೂ ಕುಟುಂಬದಲ್ಲಿ ಯೋಧರಿದ್ದಾರೆ. ಆದರೆ ಪವಿತ್ರವಾದ ಯೋಧನ ಹೆಸರು ಬಳಸಿ ಸಮಾಜದಲ್ಲಿ ಸಂಘರ್ಷವನ್ನು ಸೃಷ್ಟಿ ಮಾಡುವುದು ಯಾರಿಗೂ ಶೋಭೆ ತರುವಂತಹದ್ದಲ್ಲ. ಯಾರೂ ಯೋಧರ ಹೆಸರಿಗೆ ಕಳಂಕ ತರಬಾರದು ಎಂದು ಅವರುಗಳು ಮನವಿ ಮಾಡಿದ್ದಾರೆ.