ಮಡಿಕೇರಿ, ಆ.೮: ಪ್ರತಿಯೊಬ್ಬರಿಗೂ ‘ಆಹಾರ’ ಎಷ್ಟು ಮುಖ್ಯವೋ, ಅದೇ ರೀತಿ ‘ಬಟ್ಟೆ’ಯೂ ಸಹ ಅಷ್ಟೇ ಮುಖ್ಯ. ಆ ನಿಟ್ಟಿನಲ್ಲಿ ಕೃಷಿ ಕ್ಷೇತ್ರ ಹೊರತುಪಡಿಸಿದರೆ ಜವಳಿ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗ ಅವಕಾಶಗಳು ಸೃಷ್ಟಿಯಾಗಿದೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಎಸ್. ಗುರುಸ್ವಾಮಿ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯಿತಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಶಿರಂಗಾಲ ಕಾವೇರಿ ಹ್ಯಾಂಡ್ಲೂಮ್ ಶಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಜಿಲ್ಲಾ ಕೈಗಾರಿಕಾ ಕೇಂದ್ರ ಸಭಾಂಗಣದಲ್ಲಿ ನಡೆದ ೭ನೇ ರಾಷ್ಟಿçÃಯ ಕೈಮಗ್ಗ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಿಲ್ಲೆಯ ಶಿರಂಗಾಲ ಮತ್ತು ಕೂಡುಮಂಗಳೂರಿನಲ್ಲಿ ಕೈಮಗ್ಗ ಹಾಗೂ ಪೊನ್ನಂಪೇಟೆಯಲ್ಲಿ ವಿದ್ಯುತ್ ಮಗ್ಗ ತರಬೇತಿ ಕೇಂದ್ರಗಳಿವೆ. ಹಾಗೆಯೇ ಮಡಿಕೇರಿ, ಕುಶಾಲನಗರ, ಸೋಮವಾರಪೇಟೆ, ಶನಿವಾರಸಂತೆ, ಮೂರ್ನಾಡು, ವೀರಾಜಪೇಟೆ ಮತ್ತು ಗೋಣಿಕೊಪ್ಪದಲ್ಲಿ ಯಾಂತ್ರೀಕೃತ ಹೊಲಿಗೆ ತರಬೇತಿ (ಎಸ್ಎಂಒ) ಕೇಂದ್ರಗಳಿದ್ದು, ಇವುಗಳ ಮೂಲಕ ಜಿಲ್ಲೆಯಲ್ಲಿ ಕೈಮಗ್ಗ ಉತ್ಪನ್ನಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಲಾಗಿದೆ ಎಂದು ಗುರುಸ್ವಾಮಿ ಹೇಳಿದರು.
ಲಾಕ್ಡೌನ್ ಸಂದರ್ಭದಲ್ಲಿ ೬೦ ನೇಕಾರ ಕುಟುಂಬಗಳಿಗೆ ತಲಾ ೨ ಸಾವಿರ ರೂ. ಸಹಾಯಧನ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.
ಕಾವೇರಿ ಹ್ಯಾಂಡ್ಲೂಮ್ ತಯಾರಿಕಾ ಘಟಕದ ಮೇಲ್ವಿಚಾರಕ ಮೋಹನ್, ಖಾದಿ ಮತ್ತು ಗ್ರಾಮೋದ್ಯೋಗ ಅಭಿವೃದ್ಧಿ ಅಧಿಕಾರಿ ರಾಮಕೃಷ್ಣ ಅವರು ಮಾತನಾಡಿದರು. ನೇಕಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಮಂಜುಳಾ ಮತ್ತು ರುಕ್ಮಿಣಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಪ್ರಕಾಶ್, ಕೃಷ್ಣೋಜಿ, ರೋಷನ್, ಚಂದ್ರಕಲಾ, ಸುಂದರ್, ಶೃತಿ ಇತರರು ಇದ್ದರು.