ನಾಪೋಕ್ಲು, ಆ. ೭: ನಾಲ್ಕುನಾಡು ವ್ಯಾಪ್ತಿಯಲ್ಲಿ ಮಳೆ ತುಸು ಇಳಿಮುಖ ಗೊಂಡಿದೆ. ಹೋಬಳಿ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಭತ್ತದ ಕೃಷಿ ಚಟುವಟಿಕೆಗಳು ಬಿರುಸಿನಿಂದ ಸಾಗುತ್ತಿವೆ. ಹಲವೆಡೆ ನಾಟಿ ಕೆಲಸ ಪೂರ್ಣಗೊಂಡಿದೆ. ಸಮೀಪದ ಬೇತು, ಕೊಳಕೇರಿ ಸೇರಿದಂತೆ ಇತರ ಗ್ರಾಮಗಳಲ್ಲಿ ನಾಟಿ ಕೆಲಸ ಬಿರುಸಿನಿಂದ ಸಾಗಿದೆ. ಇದು ಪ್ರಸ್ತುತದ ಚಟುವಟಿಕೆ..

ಕಣ್ಮರೆಯಾಗುತ್ತಿರುವ ಜಾನಪದ ಸೊಗಡು: ಹಿಂದೆ ಕೃಷಿ ಕೆಲಸದಲ್ಲಿ ದಣಿದ ಜನರ ಮನ ಮತ್ತು ಮನಸ್ಸುಗಳಿಗೆ ಉಲ್ಲಾಸ, ಚೈತನ್ಯ ಮೂಡಿಸುವ ಉದ್ದೇಶದಿಂದ ತಮ್ಮ ಮನಸ್ಸಿಗೆ ತೋಚಿದ ಹಾಡುಗಳನ್ನು ಅವರದ್ದೇ ಆದ ಶೈಲಿಯಲ್ಲಿ ಹಾಡುವದರ ಮೂಲಕ ತಮ್ಮ ಕಷ್ಟ, ನೋವುಗಳನ್ನು ಮರೆಯುತ್ತಿದ್ದರು. ಹಾಗೆಯೇ ನಾಟಿ ಸಂದರ್ಭದಲ್ಲಿ ಜನಪದೀಯ ಹಾಡುಗಳನ್ನು ಯಾವದೇ ಭೇದ ಭಾವವಿಲ್ಲದೆ ಒಕ್ಕೊರಲಿನಿಂದ ಹಾಡುವದರ ಮೂಲಕ ಹಬ್ಬದ ವಾತಾವರಣ ಸೃಷ್ಟಿಸಲಾಗುತ್ತಿತ್ತು. ಅದರಂತೆ ಬೇತು ಗ್ರಾಮದ ದಿವಾಕರ ಅವರ ಗದ್ದೆಯಲ್ಲಿ ನಾಟಿ ನೆಡುವ ಸಂದರ್ಭ ಸಾಂಪ್ರದಾಯಿಕ ಜನಪದೀಯ ಹಾಡುಗಳನ್ನು ಹಾಡಿ ರಂಜಿಸಲಾಯಿತು. ನಾಟಿ ಪೂರ್ಣಗೊಳ್ಳುವ ಸಂದರ್ಭದಲ್ಲಿ ಬೆಳೆ ಹುಲುಸಾಗಿ ಬೆಳೆಯಲಿ ಎಂಬ ಕಾರಣದಿಂದ ಗಣಪತಿಗೆ ಪೂಜೆ ಸಲ್ಲಿಸಲಾಯಿತು. ಹಿಂದಿನ ಈ ವೈಭವ ಗಮನ ಸೆಳೆಯಿತು.

ನಾಟಿ ಓಟದ ಸಂಭ್ರಮ: ಮೊದಲೆಲ್ಲ ಗ್ರಾಮದ ಎಲ್ಲಾ ಕುಟುಂಬಸ್ಥರು ತಮ್ಮಲ್ಲಿರುವ ದೊಡ್ಡ ಗದ್ದೆಯನ್ನು ನಾಟಿ ಓಟದ ಗದ್ದೆಗೆ ಮೀಸಲಾಗಿಡುತ್ತಿದ್ದರು. ಈ ನಾಟಿ ಓಟದ ದಿನ ಮನೆಯವರಿಗೆಲ್ಲಾ ಸಡಗರ ಸಂಭ್ರಮ, ಇದಕ್ಕೆ ಹಲವು ದಿನಗಳಿಂದಲೇ ಸಿದ್ಧತೆಗಳು ನಡೆಯುತ್ತಿದ್ದವು. ಊರವರ ಸಹಾಯ ಸಹಕಾರಗಳಿಂದ ಇಂತಹ ನಾಟಿ ಓಟಗಳು ಯಶಸ್ವಿಯಾಗಿ ನಡೆಯುತ್ತಿತ್ತು. ನಾಟಿಗೆ ನೆರೆದಿದ್ದ ಜನರಿಗೆ ಊಟ ಉಪಚಾರಗಳ ವ್ಯವಸ್ಥೆ ಮಾಡಲಾಗುತ್ತಿತ್ತು. ಆಧುನಿಕತೆಯ ನಂಟು ಕಡಿಮೆ ಇದ್ದ ಕಾಲವಾದುದರಿಂದ ಹಾಗೂ ಹಣಕಾಸಿನ ತೊಂದರೆ ಇದ್ದುದರಿಂದ ಓಟದಲ್ಲಿ ವಿಜೇತರಾದವರಿಗೆ ಬಾಳೆ ಹಣ್ಣಿನ ಗೊನೆ, ತಂಗಿನಕಾಯಿ, ಹಲಸಿನ ಹಣ್ಣು, ಮೊದಲಾದ ಫಲಗಳನ್ನು ಬಹುಮಾನವಾಗಿ ನೀಡುತ್ತಿದ್ದರು.

ದೂರದ ನಿಗದಿ ಇಲ್ಲ: ಈ ಓಟಕ್ಕೆ ನಿಗದಿಪಡಿಸಿದ ದೂರದ ಲೆಕ್ಕಚಾರಗಳಿಲ್ಲ. ಆ ಗದ್ದೆಯ ವಿಸ್ತೀರ್ಣದ ಒಂದು ಬದಿಯಿಂದ ಇನ್ನೊಂದು ಬದಿಗೆ ಓಡಿದರೆ ಮುಗಿಯಿತು. ಆದರೆ ಗದ್ದೆಗಳ ವಿಸ್ತೀರ್ಣ ದೊಡ್ಡದಾದಂತೆ ದೂರವು ಹೆಚ್ಚಾಗುವದು. ಮೊದಲಿನ ಕಾಲದ ಓಟದ ಗದ್ದೆಗಳು ೪ ಏಕರೆಯಿಂದ ೧೦ ಏಕರೆಯ ವಿಸ್ತೀರ್ಣದವರೆಗೂ ಇರುತ್ತಿದ್ದವು. ಈ ನಾಟಿ ಮುಕ್ತಾಯದ ಕೊನೆ ಹಂತದಲ್ಲಿ ಗ್ರಾಮೀಣ ಭಾಷೆಯಲ್ಲಿ ಇದಕ್ಕೆಂದೆ ತಯಾರಿಸಲಾದ ವಿಶೇಷ ಹಾಡು ಮಾತ್ರ ಬಹಳ ಪ್ರಸಿದ್ಧಿ ಪಡೆದಿತ್ತು. ಹೋ ಹೊಯ್ಯ ಎಂಬ (ಕೊಡವ ಭಾಷೆಯಲ್ಲಿ ಒಯ್ಯ ಪಾಟ್) ಹಾಡು ಉದ್ಗರಿಸುತ್ತಾ ಸಂಭ್ರಮದಿAದ ಕೆಲಸದಲ್ಲಿ ತೊಡಗುತ್ತಿದ್ದರು. ಈ ಹಾಡನ್ನು ಮುಂದಿನ ಪೀಳಿಗೆಯವರು ಇತಿಹಾಸದಲ್ಲಿ ಹುಡುಕಬೇಕಾದಿತು ಎಂಬುದು ನಾಡಿನ ಹಿರಿಯರ ಆತಂಕವಾಗಿದೆ.

- ಪಿ.ವಿ. ಪ್ರಭಾಕರ್