ಮಡಿಕೇರಿ, ಆ. ೮: ಮುಕ್ಕೋಡ್ಲು, ಆವಂಡಿ ಮತ್ತಿತರ ಮಳೆ ಹಾನಿ ಪ್ರದೇಶಗಳಿಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಭಾನುವಾರ ಭೇಟಿ ನೀಡಿ ವೀಕ್ಷಿಸಿದರು. ಮುಕ್ಕೋಡ್ಲು ಮತ್ತು ಆವಂಡಿ ಭಾಗದಲ್ಲಿ ಶುಕ್ರವಾರ ಸುರಿದ ಮಳೆಗೆ ಮನೆ ಹಾನಿಯಾಗಿದೆ. ಜೊತೆಗೆ ಗುಡ್ಡ ಕುಸಿದಿದೆ. ಗುಡ್ಡ ಕುಸಿತದಿಂದ ರಸ್ತೆಗೆ ಹಾನಿಯಾಗಿದ್ದು, ವಾಹನ ಓಡಾಟಕ್ಕೆ ತೊಂದರೆಯಾಗಿದೆ ಎಂದು ಶಾಸಕರು ತಿಳಿಸಿದರು.

ರಸ್ತೆಯನ್ನು ತ್ವರಿತವಾಗಿ ಸರಿಪಡಿಸಲಾಗುತ್ತದೆ. ಹಾಗೆಯೇ ಮುಕ್ಕೋಡ್ಲು, ಆವಂಡಿ, ಹಮ್ಮಿಯಾಲ, ಮುಟ್ಲು ಮತ್ತಿತರ ಕಡೆಗಳಲ್ಲಿ ಸುಮಾರು ೧೫೦೦ ಮನೆಗಳಿದ್ದು, ೨೦೧೮ ರಿಂದ ಮಳೆಗಾಲದ ಅವಧಿಯಲ್ಲಿ ಹೆಚ್ಚಿನ ಮಳೆಯಾಗುವುದರಿಂದ ಇಲ್ಲಿನ ಕೃಷಿಕರ ಬದುಕಿಗೆ ತುಂಬಾ ತೊಂದರೆಯಾಗಿದೆ. ಆದ್ದರಿಂದ ಸೂಕ್ತ ಬೆಳೆ ಪರಿಹಾರ ಹಾಗೂ ಮನೆ ಹಾನಿಯಾದ ಕುಟುಂಬಗಳಿಗೆ ಅಗತ್ಯ ಪರಿಹಾರ ನೀಡಬೇಕು ಎಂದು ಶಾಸಕರು ಹೇಳಿದರು. ಗುಡ್ಡ ಕುಸಿತದಿಂದ ೩ ಸೇತುವೆಗಳು ಬಿರುಕು ಬಿಟ್ಟಿದ್ದು ಅದನ್ನು ಸರಿಪಡಿಸಲು ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.