ಕುಶಾಲನಗರ, ಆ. ೭: ಸುಗಂಧ ದ್ರವ್ಯ ಹಾಗೂ ಔಷಧಿ ತಯಾರಿಕೆಯಲ್ಲಿ ಬಳಸಲಾಗುವ, ವಿದೇಶಗಳಲ್ಲಿ ಬಹು ಬೇಡಿಕೆಯಿರುವ ಕೋಟಿಗಟ್ಟಲೆ ಬೆಲೆ ಬಾಳುವ ತಿಮಿಂಗಿಲದ ವಾಂತಿ (ಅಂಬರ್ಗ್ರಿಸ್) ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದುದನ್ನು ಪತ್ತೆ ಹಚ್ಚಿರುವ ಮೈಸೂರು ಅರಣ್ಯ ಸಂಚಾರಿ ದಳದವರು ಕಾರ್ಯಾಚರಣೆ ನಡೆಸಿ, ಈ ಸಂಬAಧ ಕೊಡಗಿನ ಮೂವರು ಸೇರಿದಂತೆ ಕೇರಳದ ಓರ್ವ ವ್ಯಕ್ತಿಯನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ, ಕೊಡಗು ಜಿಲ್ಲೆಯ ವ್ಯಕ್ತಿ ತಲೆಮರೆಸಿ ಕೊಂಡಿದ್ದಾನೆ. ಈ ಸಂಬAಧ ವಾಂತಿ ಹಾಗೂ ಸಾಗಾಟಕ್ಕೆ ಬಳಸಲಾಗಿದ್ದ ಕಾರು, ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಿನ್ನೆ ದಿನ ಏಳನೇ ಹೊಸಕೋಟೆ ಬಳಿ ಮಾರುತಿ ವ್ಯಾಗನರ್ ಕಾರಿನಲ್ಲಿ (ಕೆ.ಎ.೦೪ ಎಂ.ಡಿ. ೮೪೬೨) ತಿಮಿಂಗಿಲದ ವಾಂತಿಯನ್ನು ಕೇರಳದ ವ್ಯಕ್ತಿಗಳಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಬಗ್ಗೆ ದೊರೆತ ಸುಳಿವಿನ ಮೇರೆಗೆ ದಾಳಿ ಮಾಡಿ ತಪಾಸಣೆ ನಡೆಸಿದಾಗ ಕಾರಿನಲ್ಲಿ ೮.೨೫೦ ಕೆಜಿಯಷ್ಟು ವಾಂತಿ ಪತ್ತೆಯಾಗಿದೆ. ಕಾರಿನಲ್ಲಿದ್ದ ಹೊದವಾಡ ಗ್ರಾಮ ನಿವಾಸಿ, ಕೆ.ಎ.ಇಬ್ರಾಹಿಂ, ಏಳನೇ ಹೊಸಕೋಟೆಯವರಾದ ಬಿ.ಇ. ರಫೀಕ್, ಎಂ.ಎ. ತಾಹಿರ್ ನಕಾಶ್, ಕೇರಳದ ಕಣ್ಣೂರಿನ ಕುನ್ನುಪರಂಬೈಲ್ ಗ್ರಾಮ ನಿವಾಸಿ ಕೆ.ಎಂ. ಜಾರ್ಜ್ ಎಂಬವರುಗಳನ್ನು ಬಂಧಿಸಲಾಗಿದೆ. ಪ್ರಕರಣÀದ ಪ್ರಮುಖ ಆರೋಪಿ ಕೊಯನಾಡುವಿನ ರಿಯಾಜ್ (ಅಬೂಬಕರ್) ಎಂಬಾತ ತಲೆ ಮರೆಸಿಕೊಂಡಿದ್ದಾನೆ.
ವಿದೇಶದಲ್ಲಿ ಬೇಡಿಕೆ
ತಿಮಿಂಗಿಲ ಸಮುದ್ರದಲ್ಲಿ ಸೇವಿಸಿದ ಆಹಾರದಲ್ಲಿ ಜೀರ್ಣವಾಗದೇ ಇರುವ ವಸ್ತುಗಳನ್ನು ಸುದೀರ್ಘ ಕಾಲಗಳ ನಂತರ ವಾಂತಿ ಮಾಡುವ ಮೂಲಕ ಹೊರ ಹಾಕುತ್ತದೆ. ಕೆಲವು ದಿನಗಳ ನಂತರ ವಾಂತಿಯು ಮೇಣದಂತೆ ಗಟ್ಟಿಯಾಗಿ ತೇಲುತ್ತಾ ಸಮುದ್ರ ದಡ ಸೇರುತ್ತದೆ. ಇದನ್ನು ಪತ್ತೆ ಹಚ್ಚಿ ಅಕ್ರಮವಾಗಿ ಮಾರಾಟ ಮಾಡಲಾಗುತ್ತದೆ. ಈ ವಸ್ತು ಕೋಟ್ಯಂತರ ರೂಪಾಯಿ ಬೆಲೆ ಬಾಳಲಿದ್ದು, ಸುಗಂಧ ದ್ರವ್ಯ ಹಾಗೂ ಔಷಧಿ ತಯಾರಿಕೆಗೆ ಪ್ರಮುಖವಾಗಿ ಬಳಸಲಾಗುತ್ತದೆ. ಹಾಗಾಗಿ ವಿದೇಶಗಳಲ್ಲಿ ಇವುಗಳಿಗೆ ಭಾರೀ ಬೇಡಿಕೆ ಇದ್ದು, ಅಕ್ರಮವಾಗಿ ಸಾಗಾಟ ಮಾಡಲಾಗುತ್ತದೆ.
ತಂಡ ರಚನೆ: ಅಪರೂಪವಾದ, ಬೆಲೆಬಾಳುವ ಈ ವಸ್ತು ಆರೋಪಿಗಳಿಗೆ ಎಲ್ಲಿಂದ ಸಿಕ್ಕಿದೆ, ಎಲ್ಲಿಗೆ ಮಾರಾಟ ಮಾಡಲಾಗುತ್ತಿತ್ತು ಎಂಬ ಬಗ್ಗೆ ಪತ್ತೆ ಹಚ್ಚುವ ಸಲುವಾಗಿ ಅರಣ್ಯ ಸಂಚಾರಿ ದಳದ ವತಿಯಿಂದ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿದೆ.
ಮೈಸೂರು ಅರಣ್ಯ ಉಪ ಸಂರಕ್ಷಣಾಧಿಕಾರಿ ರಾಮಕೃಷ್ಣಪ್ಪ ಮಾರ್ಗದರ್ಶನದಲ್ಲಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮನೋಹರ ಸುವರ್ಣ ಅವರ ನಿರ್ದೇಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ವಿವೇಕ್, ಉಪ ವಲಯ ಅರಣ್ಯಾಧಿಕಾರಿಗಳಾದ ಲಕ್ಷಿö್ಮÃಶ, ಬಿ.ಎನ್. ಸುಂದರ್, ಡಿ.ಎಂ. ವಿನೋದ್ಕುಮಾರ್, ಪ್ರಮೋದ್, ನಾಗರಾಜು, ಟಿ.ಸಿ.ಸ್ನೇಹ, ಕೆ.ಜೆ. ಮೇಘನಾ, ಅರಣ್ಯ ರಕ್ಷಕರುಗಳಾದ ರವಿಕುಮಾರ್, ರವಿನಂದನ, ಗೋವಿಂದ, ಕೋಟ್ರೇಶ ಪೂಜಾರ, ಮಹಾಂತೇಶ, ಚೆನ್ನ ಬಸವಯ್ಯ, ವಿರೂಪಾಕ್ಷ, ಶರಣಪ್ಪ, ಚಾಲಕರುಗಳಾದ ಮಧು, ಪುಟ್ಟಸ್ವಾಮಿ ಪಾಲ್ಗೊಂಡಿದ್ದರು.
-ಚAದ್ರಮೋಹನ್