@ ಕುಡೆಕಲ್ ಸಂತೋಷ್

ಮಡಿಕೇರಿ, ಆ. ೫: ಮಂಗಳೂರು ವಿಶ್ವವಿದ್ಯಾನಿಲಯ ಅಧೀನಕ್ಕೊಳಪಡುವ ಪದವಿ ಕಾಲೇಜುಗಳಲ್ಲಿ ಈ ಶೈಕ್ಷಣಿಕ ವರ್ಷದಿಂದಲೇ ಕೊಡವ ಭಾಷೆಯನ್ನು ಐಚ್ಛಿಕ ಭಾಷೆಯನ್ನಾಗಿ ಅಭ್ಯಸಿಸಲು ಅವಕಾಶ ಲಭ್ಯವಾಗಿದೆ. ವಿ.ವಿ.ಯ ಅಕಾಡೆಮಿಕ್ ಕೌನ್ಸಿಲ್ ಸಭೆಯಲ್ಲಿ ಈ ಮಹತ್ವದ ವಿಚಾರಕ್ಕೆ ಅನುಮೋದನೆ ಲಭಿಸಿದೆ. ಸದ್ಯದ ಮಟ್ಟಿಗೆ ಪದವಿ ಕಾಲೇಜುಗಳಲ್ಲಿ ಬೋಧಿಸಲು ಅನುಮತಿ ದೊರೆತಿದ್ದು, ಮುಂದಿನ ದಿನಗಳಲ್ಲಿ ಸ್ನಾತಕೋತ್ತರ ಪದವಿ ಕಾಲೇಜುಗಳಲ್ಲಿಯೂ ಆರಂಭಗೊಳ್ಳಲಿದೆ.

ಪದವಿ ಕಾಲೇಜುಗಳಲ್ಲಿ ಕೊಡವ ಭಾಷೆಯನ್ನು ಐಚ್ಛಿಕ ವಿಷಯವನ್ನಾಗಿ ಸೇರ್ಪಡೆಗೊಳಿಸಬೇಕೆಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಈ ಹಿಂದೆಯೇ ಪ್ರಸ್ತಾವನೆ ಸಲ್ಲಿಸುವದರೊಂದಿಗೆ ಪ್ರಯತ್ನ ಮುಂದುವರಿಸಿತ್ತು. ಈ ಸಂಬAಧ ಪಠ್ಯ ಪುಸ್ತಕಗಳ ರಚನೆ ಬಗೆ ಹಾಗೂ ಬೋಧಕರ ನೇಮಕಾತಿ ವಿಚಾರದ ಬಗ್ಗೆ ವಿ.ವಿ. ಸಭೆಗಳಲ್ಲಿ ಸಾಕಷ್ಟು ಚರ್ಚೆ ನಡೆದು, ಪಠ್ಯ ಪುಸ್ತಕ ರಚನೆಗೆ ವಿಷಯ ತಜ್ಞರ ನೇಮಕಾತಿಯೊಂದಿಗೆ ಪುಸ್ತಕಗಳು ತಯಾರಾಗಿವೆ. ಇದೀಗ ನಿನ್ನೆ ನಡೆದ ಸಭೆಯಲ್ಲಿ ಈ ಪ್ರಯತ್ನಕ್ಕೆ ಅನುಮೋದನೆ ದೊರೆತಿದೆ. ಈ ಬಗ್ಗೆ ವಿ.ವಿ. ಉಪಕುಲಪತಿ ಪಿ.ಎಸ್. ಯಡಪಡಿತ್ತಾಯ ಖಚಿತಪಡಿಸಿದ್ದು, ನೀತಿ, ನಿಯಮಾವಳಿಗಳ ಆಧಾರದಲ್ಲಿ ಪದವಿ ತರಗತಿಗಳಲ್ಲಿ ಕೊಡವ ಭಾಷೆಯನ್ನು ಐಚ್ಛಿಕ ವಿಷಯವನ್ನಾಗಿ ಅಭ್ಯಸಿಸಲು ಅನುಮೋದನೆ ನೀಡಿರುವದಾಗಿ ಹೇಳಿದ್ದಾರೆ.

ಈ ಸಾಲಿನಿಂದಲೇ ಆರಂಭ

ವಿ.ವಿ. ಅಕಾಡೆಮಿಕ್ ಸಭೆಯಲ್ಲಿ ಅನುಮೋದನೆ ದೊರೆತಿರುವದರಿಂದ ಈ ಶೈಕ್ಷಣಿಕ ಸಾಲಿನಿಂದಲೇ ವಿ.ವಿ. ಅಧೀನಕ್ಕೊಳಪಡುವ ಪದವಿ ಕಾಲೇಜುಗಳಲ್ಲಿ ಆರಂಭಗೊಳ್ಳಲಿದೆ. ಕೊಡವ ಭಾಷೆಯನ್ನು ಅಭ್ಯಸಿಸಲು ಆಸಕ್ತಿ ಇರುವ ವಿದ್ಯಾರ್ಥಿಗಳಿರುವ ಕಾಲೇಜುಗಳಲ್ಲಿ ಈ ಕೋರ್ಸನ್ನು ಪ್ರಾರಂಭಿಸಬಹುದಾಗಿದೆ. ಕನ್ನಡ, ಹಿಂದಿ, ಸಂಸ್ಕೃತಿ, ಅರೆಬಿಕ್, ಜರ್ಮನ್, ತುಳು, ಕೊಂಕಣಿ ಭಾಷೆಗಳು ಸೇರಿದಂತೆ ಇತರ ಭಾಷೆಗಳು ಈಗಾಗಲೇ ಐಚ್ಛಿಕ ವಿಷಯಗಳ ಪಟ್ಟಿಯಲ್ಲಿವೆ. ಇದೀಗ ಕೊಡವ ಭಾಷೆ ಸೇರ್ಪಡೆಗೊಂಡಿದ್ದು, ಆಸಕ್ತರು ಪ್ರಸ್ತುತ ಇರುವ ಭಾಷೆಗಳ ಬದಲಿಗೆ ಕೊಡವ ಭಾಷೆಯಲ್ಲಿ ಅಭ್ಯಸಿಸಬಹುದಾಗಿದೆ.

ಅನುಮತಿಗೆ ರೂ. ೫ ಸಾವಿರ

ವಿಶ್ವವಿದ್ಯಾನಿಲಯಗಳಲ್ಲದೆ, ಇತರ ಅಂಗ ಸಂಸ್ಥೆಯಾಗಿ ಅಧೀನದಲ್ಲಿರುವ ಕಾಲೇಜುಗಳಲ್ಲಿ ಹೊಸ ಭಾಷಾ ವಿಷಯ ಸೇರ್ಪಡೆಗೊಳಿಸಬೇಕಾದರೆ ರೂ. ೩೦ ಸಾವಿರ ಪ್ರತಿವರ್ಷ ಶುಲ್ಕ ಪಾವತಿಸಬೇಕಾಗುತ್ತದೆ. ಆದರೆ ಇದೀಗ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು, ಮಂಗಳೂರು ವಿ.ವಿ. ಸಿಂಡಿಕೇಟ್ ಸದಸ್ಯರೂ ಆಗಿರುವ ಡಾ. ಪಾರ್ವತಿ ಅಪ್ಪಯ್ಯ ಹಾಗೂ ಇತರ ಸದಸ್ಯರ ಕೋರಿಕೆ ಮೇರೆಗೆ ಶುಲ್ಕದಲ್ಲಿ ವಿನಾಯ್ತಿ ನೀಡಲಾಗಿದ್ದು, ರೂ. ೫ ಸಾವಿರ ಪಾವತಿ ಮಾಡಬೇಕಿದೆ. ಹಲವರ ಆಸಕ್ತಿ ಹಾಗೂ ಸತತ ಪ್ರಯತ್ನಗಳಿಂದಾಗಿ ಕೊಡವ ಭಾಷೆಗೆ ವಿ.ವಿ. ಮಟ್ಟದಲ್ಲಿ ಪ್ರಾತಿನಿಧ್ಯ ದೊರೆತಂತಾಗಿದೆ.