ವರದಿ: ಕೆ.ಎಸ್. ಮೂರ್ತಿ

ಕಣಿವೆ, ಆ. ೪: ಕೊಡಗು ಜಿಲ್ಲಾ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ನಾಪಂಡ ಮುತ್ತಪ್ಪ ಅವರಿಗೆ ಸ್ಥಾನ ನೀಡದ್ದಕ್ಕೆ ಬೇಸತ್ತು ನಾಪಂಡ ಮುತ್ತಪ್ಪ ಜೆಡಿಎಸ್ ಸೇರ್ಪಡೆಗೊಳ್ಳುತ್ತಿದ್ದಾರೆ.

ಕೂಡಿಗೆ ಭಾಗದ ಜೆಡಿಎಸ್ ಯುವ ನಾಯಕರೊಬ್ಬರು ದೊಡ್ಡ ಗೌಡರ ಕುಟುಂಬ ಹಾಗೂ ನಾಪಂಡ ಸೋದರರ ನಡುವೆ ಸೇತುವೆಯಾಗಿ ಕಾರ್ಯ ನಿರ್ವಹಿಸಿದ್ದಾರೆ ಎನ್ನಲಾಗಿದ್ದು, ಮುಂಬರುವ ತಾ.ಪಂ. ಹಾಗೂ ಜಿ.ಪಂ. ಚುನಾವಣೆ ಒಳಗೆಯೇ ಮುತ್ತಪ್ಪ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಲು ನಿರ್ಧರಿಸಿದ್ದಾರೆ.

ಜೆಡಿಎಸ್ ಪಕ್ಷದ ವರಿಷ್ಠರಾದ ಎಚ್.ಡಿ. ಕುಮಾರಸ್ವಾಮಿ ಹಾಗೂ ಎಚ್.ಡಿ. ರೇವಣ್ಣ ಅವರು ಮುತ್ತಪ್ಪ ಅವರ ಬಗ್ಗೆ ಮಾಹಿತಿ ಕಲೆ ಹಾಕಿದ್ದು, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಚುನಾಯಿತರಾಗುವ ರೀತಿ ತಮ್ಮ ಸಾಮರ್ಥ್ಯ ಪ್ರಯೋಗಿಸಿ ಯಶಸ್ವಿಯಾದಲ್ಲಿ ಮುತ್ತಪ್ಪ ಅವರಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಡಿಕೇರಿ ಕ್ಷೇತ್ರದಿಂದ ಪಕ್ಷದಿಂದ ಟಿಕೇಟ್ ನೀಡುವ ಕುರಿತಾಗಿಯೂ ಮಾತುಕತೆ ನಡೆದಿರುವ ಬಗ್ಗೆ ಮಾಹಿತಿ ಕೇಳಿ ಬಂದಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಡಿಕೇರಿ ಕ್ಷೇತ್ರದಿಂದ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿಯಾಗಿದ್ದ ಮುತ್ತಪ್ಪ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಕೊನೆ ಕ್ಷಣದಲ್ಲಿ ಕೈಕೊಟ್ಟು ಕೆ.ಪಿ. ಚಂದ್ರಕಲಾ ಅವರ ಹೆಸರು ಘೋಷಿಸಿದ್ದರಿಂದ ಅಂದಿನ ಪಕ್ಷದ ಅಧ್ಯಕ್ಷರಾಗಿದ್ದ ದಿನೇಶ್ ಗುಂಡೂರಾವ್ ವಿರುದ್ಧ ಬಹಿರಂಗವಾಗಿಯೇ ಮುತ್ತಪ್ಪ ಟೀಕೆ ಮಾಡಿದ್ದರು.

ನಂತರ ಕೆ.ಕೆ. ಮಂಜುನಾಥಕುಮಾರ್ ಅವಧಿಯ ಬಳಿಕ ಜಿಲ್ಲಾಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಮುತ್ತಪ್ಪ ಅವರ ಹೆಸರನ್ನು ಮತ್ತೆ ಕಾಂಗ್ರೆಸ್ ಕೈಬಿಟ್ಟಿತು.

ಈ ಬೆಳವಣಿಗೆಗಳಿಂದ ಬೇಸತ್ತ ಮುತ್ತಪ್ಪ ಕಾಂಗೈ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ. ಇದೀಗ ಮುತ್ತಪ್ಪ ಜೆಡಿಎಸ್ ಸೇರ್ಪಡೆ ವಿಚಾರ ಜೆಡಿಎಸ್ ಕೊಡಗು ಘಟಕದಲ್ಲೂ ಒಂದಿಷ್ಟು ಗೊಂದಲಗಳಿಗೆ ವೇದಿಕೆಯಾದರೂ ಅಚ್ಚರಿ ಯಿಲ್ಲ. ಜೆಡಿಎಸ್ ಸೇರ್ಪಡೆಯನ್ನು ಸ್ವತಃ ನಾಪಂಡ ಮುತ್ತಪ್ಪ ಖಚಿತಪಡಿಸಿದ್ದಾರೆ.