ಮಡಿಕೇರಿ, ಆ. ೪: ರಾಜ್ಯದ ನೂತನ ಸಚಿವ ಸಂಪುಟದಲ್ಲಿ ಕೊಡಗು ಜಿಲ್ಲೆಗೆ ಈ ಬಾರಿಯೂ ಸಚಿವ ಸ್ಥಾನ ನೀಡಿಲ್ಲ. ಇದರಿಂದಾಗಿ ಕೊಡಗು ಜಿಲ್ಲೆಗೆ ಅಪಮಾನವಾಗಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಮಂಡೇಪAಡ ಅಪ್ಪಚ್ಚು ರಂಜನ್ ನೊಂದು ನುಡಿದರು. ನೂತನ ಸಚಿವ ಸಂಪುಟ ರಚನೆ ಕುರಿತು ‘ಶಕ್ತಿ’ಯೊಂದಿಗೆ ಅವರು ಮುಕ್ತ ನುಡಿಯಾಡಿದರು. ‘ನಾನು ಪ್ರಹ್ಲಾದ್ ಜೋಶಿ, ಮುಖ್ಯಮಂತ್ರಿ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷರನ್ನು ಈ ಹಿಂದೆ ಭೇಟಿಯಾಗಿದ್ದೆ. ಸಚಿವ ಸ್ಥಾನ ನೀಡುವುದಾಗಿ ನನಗೆ ಭರವಸೆಯಿತ್ತಿದ್ದರು. ಆದರೆ, ಅದನ್ನು ಈಡೇರಿಸಿಲ್ಲ. ಕನಿಷ್ಟ ಪಕ್ಷ ಕೊಡಗು ಜಿಲ್ಲೆಗೆ ಯಾರಿಗಾದರೂ ಒಂದು ಸಚಿವ ಸ್ಥಾನ ನೀಡದಿರುವುದು ಖೇದಕರ. ಮಂಗಳೂರು ಹಾಗೂ ಬೆಂಗಳೂರು ಜಿಲ್ಲೆಗಳಿಗೆ ತಲಾ ಮೂರು ಸಚಿವ ಸ್ಥಾನಗಳನ್ನು ನೀಡಲಾಗಿದೆ. ಆದರೆ, ಕೊಡಗು, ಮೈಸೂರು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ಯಾವುದೇ ಪ್ರಾತಿನಿಧ್ಯ ಕಲ್ಪಿಸದೆ ನಿರ್ಲಕ್ಷö್ಯ ಮಾಡಲಾಗಿದೆ. ಬಿಜೆಪಿ ಪಕ್ಷದ ಪರವಾಗಿ ನಮ್ಮ ಕ್ಷೇತ್ರಗಳಲ್ಲಿ ಜನರಿಂದಾಗಿ ಗೆದ್ದ ನಮ್ಮನ್ನು ನಿರ್ಲಕ್ಷö್ಯ ಮಾಡಿರುವುದರಿಂದಾಗಿ ಜನತೆಗೆ ಅಪಮಾನ ಮಾಡಿದಂತಾಗಿದೆ. ಕೊಡಗು ಜಿಲ್ಲೆ ಹಲವಾರು ವರ್ಷಗಳಿಂದ ಕಾಂಗ್ರೆಸ್ ಮುಕ್ತವಾಗಿದೆ. ಇತ್ತೀಚೆಗೆ ರಾಜ್ಯದ ೭ ನಗರಸಭಾ ಚುನಾವಣೆಗಳ ಪೈಕಿ ಮಡಿಕೇರಿಯಲ್ಲಿ ಮಾತ್ರ ಬಿಜೆಪಿ ಬಹುಮತ ಸಾಧಿಸಿದೆ. ಆದರೂ, ರಾಜ್ಯದ, ಕೇಂದ್ರದ ವರಿಷ್ಠರಿಗೆ ಕೊಡಗಿನ ಬಗ್ಗೆ ಆಸಕ್ತಿ ಉಂಟಾಗದಿರುವುದು ಆಶ್ಚರ್ಯಕರ. ಆದರೂ ಮತ್ತೆ ನಾನು ಮುಖ್ಯಮಂತ್ರಿ ಮತ್ತು ಪಕ್ಷ ವರಿಷ್ಠರನ್ನು ಭೇಟಿಯಾಗಿ ಅವಕಾಶ ಕಲ್ಪಿಸುವಂತೆ ಕೋರುತ್ತೇನೆ.
(ಮೊದಲ ಪುಟದಿಂದ) ಬೆಳವಣಿಗೆ ನೋಡಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳು ತ್ತೇನೆ’ ಎಂದು ರಂಜನ್ ಖಚಿತ ನುಡಿಯಾಡಿದರು.
ರಾಜ್ಯ ಸಚಿವ ಸಂಪುಟದಲ್ಲಿ ಕೊಡಗಿಗೆ ಸ್ಥಾನ ಲಭ್ಯವಾಗದ ಕುರಿತು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರ ಅಭಿಪ್ರಾಯ ಬಯಸಿದಾಗ, ಅವರು ಹೇಳಿದ್ದು ಹೀಗೆ: ‘ಸಚಿವ ಸ್ಥಾನ ಕಲ್ಪಿಸುವ ಕುರಿತು ಪಕ್ಷದ ವರಿಷ್ಠರಿಗೆ ತೀರ್ಮಾನ ಕೈಗೊಳ್ಳುವ ಪರಮೋಚ್ಛ ಅಧಿಕಾರ ಇದೆ. ಆದರೆ, ನಾನು ಕೇಳುವುದಿಷ್ಟೆ; ಈಗಿನ ಸಚಿವ ಸಂಪುಟ ಪ್ರಮುಖರು ರಾಜ್ಯಕ್ಕೆ ಒಳ್ಳೆಯ ಆಡಳಿತ ನೀಡಲಿ. ಅದರಲ್ಲೂ ಕೊಡಗಿನಲ್ಲಿ ಅನೇಕ ಗಂಭೀರ ಸಮಸ್ಯೆಗಳಿದ್ದು, ಇವುಗಳನ್ನು ಪರಿಹರಿಸುವ ದಿಸೆಯಲ್ಲಿ ವಿಶೇಷ ಗಮನ ಹರಿಸಲಿ’ ಎಂದು ಬೋಪಯ್ಯ ಅಭಿಪ್ರಾಯಪಟ್ಟರು.
ವಿಧಾನಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅವರು ನಾವು ಬೇಡಿಕೆ ಇಡುವುದಷ್ಟೇ ನಮ್ಮ ಕಾರ್ಯವಾಗುತ್ತದೆ. ಆದರೆ, ಪಕ್ಷ ಕೈಗೊಳ್ಳುವ ತೀರ್ಮಾನಕ್ಕೆ ನಾವು ಬದ್ಧರಾಗಿರ ಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಪರವಾಗಿ ವಿಧಾನ ಪರಿಷತ್ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ ಅವರನ್ನು ‘ಶಕ್ತಿ’ ಪ್ರಶ್ನಿಸಿದಾಗ, ಕೊಡಗಿನಲ್ಲಿ ಶಾಸಕರುಗಳು ಧರ್ಮದ ಆಧಾರದಲ್ಲಿ ಗೆಲ್ಲುತ್ತಿದ್ದಾರೆ. ಆದರೆ, ಆ ಪಕ್ಷದ ವರಿಷ್ಠರಿಗೆ ಕೊಡಗು ಜಿಲ್ಲೆ ಲೆಕ್ಕಕ್ಕೇ ಇಲ್ಲವಾಗಿದೆ. ಇದು ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎನ್ನುವ ಪರಿಸ್ಥಿತಿ ಉಂಟು ಮಾಡಿದೆ ಎಂದು ವಿಮರ್ಶಿಸಿದರು.