ಕುಶಾಲನಗರ, ಆ. ೪: ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಕುಶಾಲನಗರಕ್ಕೆ ಭೇಟಿ ನೀಡಿ ಒಳಚರಂಡಿ ಕಾಮಗಾರಿ ಅಭಿವೃದ್ಧಿ ಕೆಲಸದ ಬಗ್ಗೆ ಪರಿಶೀಲನೆ ನಡೆಸಿದರು.

ಕುಶಾಲನಗರದ ಪಟ್ಟಣ ವ್ಯಾಪ್ತಿಯ ಮತ್ತು ತ್ಯಾಜ್ಯ ನಿರ್ವಹಣೆ ಘಟಕ ಮತ್ತಿತರ ಕಾಮಗಾರಿ ಬಗ್ಗೆ ಸ್ಥಳೀಯ ಅಧಿಕಾರಿ ಆನಂದ್ ಅವರಿಂದ ಮಾಹಿತಿ ಪಡೆದರು. ಡಿಸೆಂಬರ್ ಅಂತ್ಯದೊಳಗೆ ಕಾಮಗಾರಿ ಪೂರ್ಣ ಗೊಳಿಸುವ ಭರವಸೆಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿದರು. ಪ್ರಥಮ ಹಂತದಲ್ಲಿ ಮಾಡಿದ ಕಾಮಗಾರಿಯ ನಿರ್ವಹಣೆಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು. ಈ ಸಂದರ್ಭ ಜಿಲ್ಲಾಧಿಕಾರಿ ಕುಶಾಲನಗರದ ತಾವರೆಕೆರೆ ಮತ್ತು ಸೋಮೇಶ್ವರ ಕೆರೆ ಪ್ರದೇಶಕ್ಕೆ ಭೇಟಿ ನೀಡಿ ಕೆರೆ ಮತ್ತು ಬಫರ್ ಝೋನ್ ಗಡಿ ಬಗ್ಗೆ ವಿವರ ಪಡೆದರು. ಕುಶಾಲನಗರ ಗಡಿಭಾಗದ ಅಂತರ ರಾಜ್ಯ ವಾಹನಗಳ ಕೋವಿಡ್ ತಪಾಸಣಾ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಕೇಂದ್ರದ ದಾಖಲಾತಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಸ್ಥಳೀಯ ಅಧಿಕಾರಿಗಳು ಇದ್ದರು.