ಸಿದ್ದಾಪುರ, ಆ. ೩: ಅಭ್ಯತ್ಮಂಗಲ ಹಾಗೂ ನೆಲ್ಲಿಹುದಿಕೇರಿ ಗ್ರಾಮದಲ್ಲಿ ಕೊರೊನಾ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಕರಣಗಳು ಪತ್ತೆಯಾದ ಗ್ರಾಮಗಳಿಗೆ ಕುಶಾಲನಗರ ತಾಲೂಕು ತಹಶೀಲ್ದಾರ್ ಪ್ರಕಾಶ್ ಟಿ.ಎಂ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸಿಬ್ಬಂದಿಗಳಿಗೆ ಹಾಗೂ ಟಾಸ್ಕ್ ಫೋರ್ಸ್ ಸಮಿತಿಯವರಿಗೆ ಸೂಕ್ತ ನಿರ್ದೇಶನ ನೀಡಿದರು.
ನಂತರ ನೆಲ್ಲಿಹುದಿಕೇರಿಯ ಗ್ರಾ.ಪಂ ಸಭಾಂಗಣದಲ್ಲಿ ಟಾಸ್ಕ್ಫೋರ್ಸ್ ಸಮಿತಿಯ ಸಭೆ ನಡೆಸಿದರು. ಈ ಸಂದರ್ಭ ಮಾತನಾಡಿದ ಅವರು ಕೇರಳ ರಾಜ್ಯದಲ್ಲಿ ಇದೀಗ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಎಚ್ಚರವಹಿಸಬೇಕೆಂದು ತಿಳಿಸಿದರು.
ಪ್ರಕರಣಗಳು ಪತ್ತೆಯಾದ ಕುಟುಂಬದವರ ಗಂಟಲ ದ್ರವ ಪರೀಕ್ಷೆಯನ್ನು ಮಾಡುವಂತೆ ತಿಳಿಸಿದರು. ಗ್ರಾಮಸ್ಥರು ಕೊರೊನಾ ಸೋಂಕು ಹರಡದಂತೆ ಎಚ್ಚರವಹಿಸಿ ಟಾಸ್ಕ್ ಫೋರ್ಸ್ ಸಮಿತಿಯವರಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿಕೊಂಡರು. ಸಭೆಯಲ್ಲಿ ನೆಲ್ಲಿಹುದಿಕೇರಿ ಗ್ರಾ.ಪಂ. ಅಧ್ಯಕ್ಷ ಸಾಬೂ ವರ್ಗೀಸ್, ಕುಶಾಲನಗರ ಉಪ ತಹಶೀಲ್ದಾರ್ ಮಧುಸೂದನ್, ಗ್ರಾಮ ಲೆಕ್ಕಿಗ ಸಚಿನ್, ಪಿಡಿಓ ಅನಿಲ್ ಕುಮಾರ್ ಹಾಗೂ ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯರುಗಳು ಹಾಜರಿದ್ದರು. - ವಾಸು ಎ.ಎನ್.