ಮಡಿಕೇರಿ, ಆ. ೩: ರಾಜಕೀಯ ಪಕ್ಷವೊಂದು ಭದ್ರ ಬುನಾದಿಯ ಮೇಲೆ ಗಟ್ಟಿಯಾಗಿ ನೆಲೆಯೂರಿದ್ದರೆ ಅದರ ಹಿಂದೆ ಅಸಂಖ್ಯಾತ ಕಾರ್ಯಕರ್ತರ ಶ್ರಮ ಅಡಗಿರುತ್ತದೆ ಎಂದು ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಗರಿಕರ ಪ್ರಕೋಷ್ಟದ ರಾಜ್ಯ ಸಂಚಾಲಕ ಹಾಗೂ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಪಕ್ಷದ ಹಿರಿಯ ನಾಗರಿಕರ ಪ್ರಕೋಷ್ಟದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಮಾತನಾಡಿ, ಜಿಲ್ಲೆಯಲ್ಲಿ ಬಿಜೆಪಿ ಭದ್ರವಾಗಿ ನೆಲೆಯೂರಲು ಹಿರಿಯರ ಕೊಡುಗೆ ಮತ್ತು ಕಾರ್ಯಕರ್ತರ ಪರಿಶ್ರಮ ಕಾರಣವೆಂದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಲಾಲ್ಕೃಷ್ಣ ಅಡ್ವಾಣಿ, ಮುರಳಿ ಮನೋಹರ ಜೋಷಿ ಹಾಗೂ ಪ್ರಸ್ತುತ ಪ್ರಧಾನಿಯಾಗಿರುವ ನರೇಂದ್ರಮೋದಿ ಅವರÀ ಜನಪರ ಕಾಳಜಿಯಿಂದ ಪಕ್ಷಕ್ಕೆ ಹೆಚ್ಚು ಬಲ ಬಂದಿದೆ ಎಂದರು.
ಹಿರಿಯರ ಪ್ರಕೋಷ್ಟದ ಕೊಡಗು ಜಿಲ್ಲಾ ಸಂಚಾಲಕ ಕೋಡಿ ಪೊನ್ನಪ್ಪ ಮಾತನಾಡಿ, ತುರ್ತು ಪರಿಸ್ಥಿತಿಯ ಸಂದರ್ಭದ ಹೋರಾಟಗಳನ್ನು ಸ್ಮರಿಸಿಕೊಂಡರು. ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಬಿ. ಭಾರತೀಶ್ ಸ್ವಾಗತಿಸಿ, ಪ್ರಕೋಷ್ಟದ ಜಿಲ್ಲಾ ಸದಸ್ಯ ಎ.ಕೆ.ಪಾಲಾಕ್ಷ ವಂದಿಸಿದರು.