ಗೋಣಿಕೊಪ್ಪಲು, ಆ. ೨: ಇನ್ನು ಮುಂದೆ ಶೂನ್ಯ ಬಡ್ಡಿ ದರದ ಸಾಲವಿತರಣೆ ಕುಟುಂಬದ ಒಬ್ಬರಿಗೆ ಎಂಬ ಹಾಗೂ ಪಿಂಚಣಿದಾರರಿಗೆ ಶೂನ್ಯ ಬಡ್ಡಿದರದ ಸಾಲ ಸೌಲಭ್ಯಗಳು ಇಲ್ಲವೆಂಬ ಮಹತ್ವದ ಆದೇಶವನ್ನು ಮಾರ್ಪಡಿಸಿ ಸರ್ಕಾರ ಆದೇಶ ಹೊರಡಿಸಿದ್ದು ಇದರಿಂದಾಗಿ ರೈತರು ನಿಟ್ಟುಸಿರು ಬಿಡುವಂತಾಗಿದೆ.
ರಾಜ್ಯ ಸರಕಾರವು ಇತ್ತೀಚೆಗೆ ಸರಕಾರದ ಶೂನ್ಯ ಬಡ್ಡಿ ದರದ ಸಾಲಗಳನ್ನು ಪಡೆಯಲು ಹಾಗೂ ಮಧ್ಯಮಾವಧಿಯ ಸಾಲ ಸೌಲಭ್ಯಗಳನ್ನು,ಹಾಗೂ ಪಿಂಚಣಿದಾರರಿಗೆ ಶೂನ್ಯ ಬಡ್ಡಿ ದರದ ಸಾಲವನ್ನು ಪಡೆಯಲು ಹಲವು ಷರತ್ತುಗಳನ್ನು ವಿಧಿಸಿ ಕೃಷಿ ಸಾಲ ಪಡೆಯಲು ಪ್ರತಿ ಕುಟುಂಬಕ್ಕೆ ಒಬ್ಬರಿಗೆ ಎಂಬ ಮಾನದಂಡ ನಿಗದಿಪಡಿಸಿತ್ತು.
ಈ ಆದೇಶದಿಂದ ರೈತ ಸಮೂಹ ನೆಮ್ಮದಿ ಕಳೆದುಕೊಂಡಿದ್ದರು. ಸರ್ಕಾರದ ಆದೇಶವನ್ನು ವಿರೋಧಿಸಿದ್ದರು.
ಈ ಬಗ್ಗೆ ಪಿಂಚಣಿದಾರರು ಕೃಷಿ ಮಾಡುತ್ತಿದ್ದರೆ ಅವರಿಗೂ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯಗಳನ್ನು ನೀಡಬೇಕು ಎಂದು ಮುಖ್ಯಮಂತ್ರಿಗಳಿಗೆ, ಸಹಕಾರ ಸಚಿವರಿಗೆ, ಉಸ್ತುವಾರಿ ಸಚಿವರಿಗೆ, ಡಿಸಿಸಿ ಬ್ಯಾಂಕ್ ಅಧ್ಯಕ್ಷರಿಗೆ, ಡಿಸಿಸಿ ಬ್ಯಾಂಕ್ ಉಪನಿಬಂಧಕರಿಗೆ ಹಾಗೂ ಶಾಸಕರಿಗೆ ಮನವಿ ಸಲ್ಲಿಸಿ ರೈತರಿಗೆ ನ್ಯಾಯ ಒದಗಿಸಲು ಮನವಿ ಮಾಡಲಾಗಿತ್ತು.
ಈ ಕಡತವು ಸರಕಾರದ ಮುಖ್ಯ ಕಾರ್ಯದರ್ಶಿಯವರಲ್ಲಿ ಪರಿಶೀಲನೆಯಲ್ಲಿದ್ದು ಇದೀಗ ಆದೇಶ ಮಾರ್ಪಡಿಸಿ ರೈತರ ಪಹಣಿಯ ಆಧಾರದ ಮೇಲೆ ಸಾಲ ನೀಡುವಂತೆಯೂ ಹಾಗೂ ಪಿಂಚಣಿದಾರರು ಸಹ ಶೂನ್ಯ ಬಡ್ಡಿಯ ಸಾಲಗಳನ್ನು ಪಡೆಯಬಹುದು ಎಂಬ ಆದೇಶವನ್ನು ಸರ್ಕಾರ ಹೊರಡಿಸಿದೆ.
ಹಲವಾರು ರೈತರು ಈ ವರ್ಷದ ಸಾಲ ಮರುಪಾವತಿ ಮಾಡುವ ಸಂದರ್ಭದಲ್ಲಿ ಕುಟುಂಬ ಒಂದಕ್ಕೆ ಎಂಬ ನಿಯಮದಡಿ ಶೇ. ೭ರ ಬಡ್ಡಿ ಸಹ ಪಾವತಿ ಮಾಡಿದ್ದರು.
ಸರ್ಕಾರದ ಆದೇಶದಂತೆ ಈ ಹಿಂದೆ ರೈತರು ಶೇ.೭ ರ ಬಡ್ಡಿ ದರದಲ್ಲಿ ಪಡೆದ ರೈತರ ಬಡ್ಡಿ ಹಣವನ್ನು ಮರು ಪಾವತಿಸುವಂತೆ ಆದೇಶದಲ್ಲಿ ತಿಳಿಸಿದೆ. ರೈತರ ಪರ ಆದೇಶ ಹೊರಬಿದ್ದಿದ್ದು ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ ಸರಕಾರದ ಕ್ರಮವನ್ನು ಶ್ಲಾಘಿಸಿದ್ದಾರೆ.
- ಹೆಚ್.ಕೆ.ಜಗದೀಶ್