ಕಣಿವೆ, ಆ. ೨: ಕೂಡು ಮಂಗಳೂರು ಗ್ರಾ.ಪಂ. ವ್ಯಾಪ್ತಿಯ ನವಗ್ರಾಮ ಹಾಗೂ ಬಸವೇಶ್ವರ ಬಡಾವಣೆಯಲ್ಲಿ ಮಳೆಯಿಂದಾಗಿ ಗುಡ್ಡಕುಸಿದಿದ್ದ ಸ್ಥಳಕ್ಕೆ ಕುಶಾಲನಗರ ತಾಲೂಕು ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಳೆಯಿಂದಾಗಿ ನವಗ್ರಾಮದಲ್ಲಿ ಬಸಪ್ಪ ಮಂಜುಳಾರವರ ಮನೆ ಮೇಲ್ಭಾಗದಲ್ಲಿ ಬೃಹತ್ ಬಂಡೆ ಬಿದ್ದು, ಮನೆಗೆ ಹಾನಿಯುಂಟಾಗಿದ್ದ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಟಿ.ಎಂ. ಪ್ರಕಾಶ್ ಪರಿಶೀಲನೆ ನಡೆಸಿ ದರು. ಗುಡ್ಡದಿಂದ ಮತ್ತೇ ಬಂಡೆ ಜರುಗುವ ಸ್ಥಿತಿಯಲ್ಲಿದ್ದು, ಆದಷ್ಟು ಬೇಗನೇ ಮನೆಯವರನ್ನು ಸ್ಥಳಾಂತರ ಗೊಳಿಸುವಂತೆ ಅಧಿಕಾರಿಗಳಿಗೆ ತಹಶೀಲ್ದಾರ್ ಸೂಚನೆ ನೀಡಿದರು. ನಂತರ ನವಗ್ರಾಮದಲ್ಲಿ ಅಪಾಯದಂಚಿ ನಲ್ಲಿರುವ ಮನೆಗಳ ಬಗ್ಗೆ ಸ್ಥಳೀಯ ವಾರ್ಡ್ ಸದಸ್ಯ ಕೆ.ಬಿ. ಷಂಶುದ್ಧೀನ್ ಅವರು ತಹಶೀಲ್ದಾರರ ಗಮನಕ್ಕೆ ತಂದರು.
ನಂತರ ವಾರ್ಡ್ ಸದಸ್ಯರ ಮನವಿ ಮೇರೆಗೆ, ಬಸವೇಶ್ವರ ಬಡಾವಣೆಯ ಕುಬೇರ ಮಣಿಮಾಲಾರವರ ಮನೆಯ ಪಕ್ಕದಲ್ಲಿ ಗುಡ್ಡ ಜರಿದು ಬಂಡೆ ಬಿದ್ದಿದ್ದ ಸ್ಥಳಕ್ಕೆ ತಹಶೀಲ್ದಾರ್ ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭ ಕುಶಾಲನಗರ ಕಂದಾಯ ಪರಿವೀಕ್ಷಕ ಸಂತೋಷ್, ಸಿಬ್ಬಂದಿ ಲೋಕೇಶ್ ಇದ್ದರು.