ಕುಶಾಲನಗರ, ಜು.೩೧: ದುಬಾರೆ ಸಾಕಾನೆ ಶಿಬಿರಕ್ಕೆ ಸಾರ್ವಜನಿಕರ ಭೇಟಿಗೆ ಅವಕಾಶ ನೀಡಿದ ಬೆನ್ನಲ್ಲೇ ಪ್ರವಾಸಿಗರು ಬೆಳಗಿನಿಂದಲೇ ಶಿಬಿರಕ್ಕೆ ಆಗಮಿಸುತ್ತಿರುವ ದೃಶ್ಯ ಕಂಡುಬAತು. ವಾರಾಂತ್ಯ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಗೆ ಪ್ರವಾಸಿಗರ ದಂಡು ನಿರಂತರವಾಗಿ ಹರಿದು ಬರುತ್ತಿದ್ದು, ಸ್ಥಳೀಯ ಕಾವೇರಿ ನಿಸರ್ಗಧಾಮ, ಹಾರಂಗಿ ಉದ್ಯಾನವನ ದುಬಾರೆ ಕೇಂದ್ರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ್ದಾರೆ. ಸಾಕಾನೆ ಶಿಬಿರದಲ್ಲಿ ಯಾವುದೇ ರೀತಿಯ ಆನೆ ಚಟುವಟಿಕೆಗಳಿಗೆ ಅವಕಾಶವಿಲ್ಲದಿರುವ ಕಾರಣದಿಂದ ಪ್ರವಾಸಿಗರು ದೂರದಿಂದ ಸಾಕಾನೆಗಳನ್ನು ವೀಕ್ಷಿಸಿ ಹಿಂತಿರುಗಬೇಕಾಯಿತು.ಕಾವೇರಿ ನದಿ ದಾಟಿ ದುಬಾರೆ ಶಿಬಿರಕ್ಕೆ ತೆರಳಲು ಅರಣ್ಯ ಇಲಾಖೆಯ ಮೂರು ಬೋಟ್ ಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಜಲಕ್ರೀಡೆಗೆ ಅವಕಾಶವಿಲ್ಲದಿರುವ ಹಿನ್ನೆಲೆಯಲ್ಲಿ ರಾಫ್ಟಿಂಗ್ ಸಾಹಸಕ್ರೀಡೆ ಕೂಡ ರದ್ದುಗೊಂಡಿದೆ.