ಗೋಣಿಕೊಪ್ಪಲು, ಜು. ೩೧: ಪೂರ್ವಜರು ನಡೆಸಿಕೊಂಡು ಬಂದಿರುವ ಭತ್ತದ ಕೃಷಿಯನ್ನು ಇಂದಿಗೂ ಮುಂದುವರೆಸಿಕೊAಡು ಬಂದಿರುವ ದಕ್ಷಿಣ ಕೊಡಗಿನ ಅನೇಕ ರೈತರಿಗೆ ಇದೀಗ ಕಾಡಾನೆಗಳದ್ದೇ ಚಿಂತೆಯಾಗಿದೆ. ಮತ್ತಿಗೋಡು ಅರಣ್ಯ ವ್ಯಾಪ್ತಿಯ ಚೇಣಿಹಡ್ಲು, ಸುಳುಗೋಡು ಭಾಗದ ಭತ್ತ ಬೆಳೆಯುವ ರೈತರು ಈ ಭಾಗದಲ್ಲಿ ಇನ್ನೂರಕ್ಕೂ ಅಧಿಕ ಎಕರೆಗಳಲ್ಲಿ ಭತ್ತ ಕೃಷಿ ಮುಂದುವರೆಸಿಕೊAಡು ಬಂದಿದ್ದಾರೆ. ತಿತಿಮತಿ ಪಂಚಾಯಿತಿ ವ್ಯಾಪ್ತಿಯ ಚೇಣಿಹಡ್ಲು ಭಾಗದ ಗಿರಿಜನರು ಕೂಡ ಹೆಚ್ಚಾಗಿ ಭತ್ತದ ಕೃಷಿಯನ್ನು ಅವಲಂಭಿಸಿದ್ದಾರೆ. ಸುಳುಗೋಡು ಗ್ರಾಮದ ಮೀದೇರಿರ, ಚೆಕ್ಕೇರ, ಕಳ್ಳಿಚಂಡ, ಕೊಕ್ಕೆಂಗಡ ಹಾಗೂ ಪುಚ್ಚಿಮಾಡ ಕುಟುಂಬಸ್ಥರು ಈಗಾಗಲೇ ನಾಟಿ ಕಾರ್ಯ ಆರಂಭಿಸಿದ್ದು ಕಾಡಾನೆಗಳ ಉಪಟಳ ನಡುವೆಯೇ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ.

ಚೇಣಿಹಡ್ಲು ಪ್ರದೇಶದಿಂದ ೩ ಪ್ರಮುಖ ಸ್ಥಳಗಳಿಂದ ಹಾಗೂ ಕೇಂಬುಕೊಲ್ಲಿ ನಾಯಡ ಕುಟುಂಬಸ್ಥರು ವಾಸವಿರುವ ಎರಡು ಭಾಗದಿಂದ ನಿರಂತರವಾಗಿ ಕಾಡಾನೆಗಳು ನಾಡಿನತ್ತ ಆಗಮಿಸುತ್ತಿವೆ. ಈ ಕಾಡಾನೆಗಳು ಈ ಭಾಗದ ರೈತರು ಬೆಳೆದಿರುವ ಭತ್ತದ ಫಸಲನ್ನು ಹಾಳು ಮಾಡುವುದಲ್ಲದೆ ಸುಳುಗೋಡು ಮಾರ್ಗವಾಗಿ ಮಾಯಮುಡಿ ಪೊನ್ನಂಪೇಟೆ, ನಲ್ಲೂರು, ಕಿರುಗೂರು, ಬಾಳಾಜಿ ಗ್ರಾಮದತ್ತ ತೆರಳಿ ಆಸುಪಾಸಿನ ನಗರ ಪ್ರದೇಶದತ್ತವು ತೆರಳುತ್ತಿವೆ.

ಕಾಡಾನೆಯ ಉಪಟಳವಿದ್ದರೂ ಈ ಭಾಗದ ರೈತರು ತಮ್ಮ ಭೂಮಿಯನ್ನು ಹದಗೊಳಿಸಿ ಭತ್ತ ಕೃಷಿ ನಡೆಸುತ್ತಾ, ರಾತ್ರಿ ವೇಳೆಯಲ್ಲಿ ತಮ್ಮ ಭತ್ತದ ಗದ್ದೆಯಲ್ಲಿ ಕಾಡಾನೆ ಹಾವಳಿ ನುಸಳದಂತೆ ಎಚ್ಚರಿಕೆಯಿಂದ ನಿದ್ರೆ ಬಿಟ್ಟು ಬೆಳೆಯನ್ನು ಕಾಯುವ ಪರಿಸ್ಥಿತಿ ಮಾಮೂಲಿಯಾಗಿದೆ.

ಮತ್ತಿಗೋಡು ಅರಣ್ಯ ವ್ಯಾಪ್ತಿಯಿಂದ ಬರುವ ಕಾಡಾನೆಗಳನ್ನು ತಡೆಗಟ್ಟಲು ಅರಣ್ಯ ಸಿಬ್ಬಂದಿಗಳು ರಾತ್ರಿ ವೇಳೆಯಲ್ಲಿ ಪ್ರಮುಖ ಸ್ಥಳಗಳಲ್ಲಿ ಕಾದು ಕುಳಿತರೂ ಕಾಡಾನೆಗಳು ಇದನ್ನು ಗಮನಿಸಿ ಮತ್ತೊಂದು ದಾರಿಯಿಂದ ನಾಡಿನತ್ತ ರಾತ್ರಿಯ ವೇಳೆ ಸಂಚಾರ ಆರಂಭಿಸುತ್ತವೆ. ಇದರಿಂದಾಗಿ ಕಾಡಾನೆಗಳ ಉಪಟಳ ನಿರಂತರವಾಗಿದೆ. ನೊಖ್ಯ ಗ್ರಾಮದ ಮರಪಾಲದ ಬಳಿ ಇರುವ ಎರಡೂವರೆ ಕಿ.ಮೀ. ಉದ್ದದ ಸಣ್ಣ ಪ್ರಮಾಣದಲ್ಲಿ ಹರಿಯುವ ನೀರಿನ ತೋಡಿನಲ್ಲಿ ಈ ಕಾಡಾನೆಗಳು ಸಂಚರಿಸಿ ವಿವಿಧ ಪ್ರದೇಶಗಳ ರೈತರ ಕಾಫಿ ತೋಟಗಳಿಗೆ ತೆರಳುತ್ತಿವೆ. ಈ ಭಾಗದ ಬಹುತೇಕ ರೈತರು ತಮ್ಮ ಕಾಫಿ, ತೋಟಗಳಿಗೆ ಸೋಲಾರ್ ಬೇಲಿಗಳನ್ನು ಅಳವಡಿಸಿದ್ದರು. ಇವುಗಳನ್ನು ಮುರಿದು ಕಾಡಾನೆಗಳು ತೋಟಕ್ಕೆ ಲಗ್ಗೆ ಇಡುತ್ತಿವೆ.

ಭತ್ತ ಬೆಳೆಯುವ ಕೃಷಿಕರು ಬೀಜ ಬಿತ್ತನೆಯಿಂದ ಹಿಡಿದು ಭತ್ತದ ಕೊಯ್ಲುವರೆಗೂ ಕಾಡಾನೆಗಳಿಂದ ಎಚ್ಚರ ವಹಿಸಬೇಕಾದ ಪರಿಸ್ಥಿತಿ ಅನೇಕ ವರ್ಷಗಳಿಂದ ನಡೆಯುತ್ತ ಬಂದಿದೆ. ಭೂಮಿಯನ್ನು ಪಾಳು ಬಿಡಬಾರದು ಎಂಬ ಉದ್ದೇಶದಿಂದ ಭತ್ತದ ಕೃಷಿಯನ್ನು ಇಂದಿಗೂ ಕೂಡ ಮುಂದುವರೆಸಿಕೊAಡೇ ಬಂದಿದ್ದಾರೆ.

- ಹೆಚ್.ಕೆ. ಜಗದೀಶ್