ಸಿದ್ದಾಪುರ, ಜು. ೩೧: ಕಾಡಾನೆಗಳು ಅಂಗನವಾಡಿ ಕೇಂದ್ರದೊಳಗೆ ನುಗ್ಗಿ ದಾಂಧಲೆ ನಡೆಸಿ ಹಾನಿಗೊಳಿಸಿ ಆಹಾರ ಪದಾರ್ಥಗಳನ್ನು ತಿಂದು ಹಾಕಿರುವ ಘಟನೆ ಮಾಲ್ದಾರೆ ಸಮೀಪದ ತಟ್ಟಳ್ಳಿ ಹಾಡಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ತಟ್ಟಳ್ಳಿ ಹಾಡಿಯಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಶುಕ್ರವಾರ ರಾತ್ರಿ ಕಾಡಾನೆಗಳು ದಾಳಿ ನಡೆಸಿ ಅಂಗನವಾಡಿ ಕೇಂದ್ರದೊಳಗೆ ನುಗ್ಗಿ ಅಲ್ಲಿದ್ದ ಅಕ್ಕಿ, ಸೇರಿದಂತೆ ಆಹಾರ ಪದಾರ್ಥಗಳನ್ನು ಹಾಗೂ ೫೦ಕ್ಕೂ ಅಧಿಕ ಮೂಟೆಗಳನ್ನು ಎಳೆದು ಹಾಕಿ ಹಾನಿಮಾಡಿ ಹೋಗಿವೆ ಎಂದು ಹಾಡಿಯ ನಿವಾಸಿಗಳು ತಿಳಿಸಿದ್ದಾರೆ.

ಈ ಅಂಗನವಾಡಿ ಕೇಂದ್ರದಲ್ಲಿ ೨೦ಕ್ಕೂ ಅಧಿಕ ಆದಿವಾಸಿ ಮಕ್ಕಳು ಕಲಿಯುತ್ತಿದ್ದು, ಈ ಮಕ್ಕಳಿಗೆ ಹಾಗೂ ಆದಿವಾಸಿ ಕುಟುಂಬಗಳಿಗೆ ನೀಡುವ ಪೌಷ್ಠಿಕ ಆಹಾರವನ್ನು ಅಂಗನವಾಡಿ ಕೇಂದ್ರದಲ್ಲಿ ಇರಿಸಲಾಗಿತ್ತು. ಇವುಗಳನ್ನು ತಿಂದ ಬಳಿಕ ಕಾಡಾನೆ ತಟ್ಟಳ್ಳಿ ಹಾಡಿಯ ನಿವಾಸಿಯೊಬ್ಬರ ಮನೆಯ ಶೀಟ್ ಒಂದನ್ನು ಎಳೆದು ಹಾಕಿದೆ. ಇದರಿಂದಾಗಿ ಹಾಡಿಯ ನಿವಾಸಿಗಳು ಭಯಭೀತರಾಗಿದ್ದಾರೆ. ಕಾಡಾನೆಗಳು ಅಂಗನವಾಡಿ ಕೇಂದ್ರದ ಬಾಗಿಲು ಮುರಿದು ಒಳಕ್ಕೆ ನುಗ್ಗಿ ದಾಂಧಲೆ ನಡೆಸಿರುತ್ತವೆ.

ಈ ಹಿಂದೆ ಕೂಡ ಕಾಡಾನೆಗಳು ಅಂಗನವಾಡಿ ಕೇಂದ್ರ ಹಾಗೂ ಮನೆಗಳ ಮೇಲೆ ದಾಳಿ ನಡೆಸಿ ಹಾನಿಗೊಳಿಸಿದ್ದು, ಕಳೆದ ೩ ತಿಂಗಳ ಹಿಂದೆ ಹಾಡಿಯ ನಿವಾಸಿಗಳು ಅಂಗನವಾಡಿ ಕೇಂದ್ರವನ್ನು ಸ್ಥಳಾಂತರ ಮಾಡುವಂತೆ ಪೊನ್ನಂಪೇಟೆ ಮಹಿಳಾ ಮಕ್ಕಳ ಕಲ್ಯಾಣ ಇಲಾಖಾಧಿಕಾರಿಗಳಿಗೆ ತಿಳಿಸಿದ್ದರೂ ಕೂಡ ಸ್ಥಳಾಂತರ ಮಾಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಮಾಲ್ದಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಮೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಪೊನ್ನಂಪೇಟೆಯ ಶಿಶುಕಲ್ಯಾಣ ಇಲಾಖಾಧಿಕಾರಿ ಬಳಿ ದೂರವಾಣಿ ಮುಖಾಂತರ ಮಾತನಾಡಿ, ಅಂಗನವಾಡಿ ಕೇಂದ್ರವನ್ನು ಸಿ.ಬಿ. ಹಳ್ಳಿ ಶಾಲೆಗೆ ಸ್ಥಳಾಂತರ ಮಾಡುವಂತೆ ತಿಳಿಸಿದರು. ಇದಕ್ಕೆ ಸ್ಪಂದಿಸಿದ ಅಧಿಕಾರಿ ಕೂಡಲೇ ಸ್ಥಳಾಂತರ ಮಾಡುವುದಾಗಿ ಭರವಸೆಯನ್ನು ನೀಡಿರುತ್ತಾರೆ. ಪಂಚಾಯಿತಿಯಿAದ ಅಂಗನವಾಡಿ ಕೇಂದ್ರಕ್ಕೆ ಸಹಕಾರ ನೀಡುವುದಾಗಿ ಸಮೀರ್ ತಿಳಿಸಿದರು. -ವರದಿ ವಾಸು.