ಮಡಿಕೇರಿ, ಜು. ೨೯: ಹುಣಸೂರಿನಿಂದ ಕೇರಳದ ಕಾಂಞಗಾಡ್ ಕಡೆಗೆ ತರಕಾರಿ ಲಾರಿಯಲ್ಲಿ ಅಕ್ರಮವಾಗಿ ಬೀಟೆ ಮರದ ನಾಟಗಳನ್ನು ಸಾಗಿಸುತ್ತಿದ್ದ ಈರ್ವರನ್ನು ಸಂಪಾಜೆ ತನಿಖಾ ಠಾಣಾ ಸಿಬ್ಬಂದಿಗಳು ಮಾಲುಸಹಿತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳಾದ ಕೇರಳದ ತಲಚೇರಿ ಜಿಲ್ಲೆಯ ದನೇಶ್ (೨೮), ಕಣ್ಣೂರಿನ ರಾಹುಲ್ (೨೬) ಎಂಬವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಮುಖ ಆರೋಪಿ ಅಚ್ಚು (ಅಶ್ರಫ್) ತಲೆಮರೆಸಿ ಕೊಂಡಿದ್ದು, ಈತನ ಬಂಧನಕ್ಕೆ ಅರಣ್ಯ ಇಲಾಖೆ ಬಲೆಬೀಸಿದೆ. ಒಟ್ಟು ೨೩ ನಾಟಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ. ಪೂವಯ್ಯ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ದಯಾನಂದ್, ವಲಯ ಅರಣ್ಯಾಧಿಕಾರಿ ಮಧುಸೂದನ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ವಿನಯಕೃಷ್ಣ, ಉಪ ವಲಯ ಅರಣ್ಯಾಧಿಕಾರಿ ವಿನಯಕೃಷ್ಣ, ಬಸವರಾಜಪ್ಪ, ಅರಣ್ಯ ವೀಕ್ಷಕ ನಾಗರಾಜ್, ವಾಹನ ಚಾಲಕರಾದ ಶಿವಪ್ರಸಾದ್, ಭರತ್, ಇತರ ಸಿಬ್ಬಂದಿಗಳು ಪಾಲ್ಗೊಂಡಿದ್ದರು.