ಪ್ರಧಾನಿಯನ್ನು ಭೇಟಿ ಮಾಡಿದ ಕರ್ನಾಟಕ ನೂತನ ಮುಖ್ಯಮಂತ್ರಿ
ನವದೆಹಲಿ, ಜು. ೩೦: ರಾಜ್ಯದ ನೂತನ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿರುವ ಬಸವರಾಜ ಬೊಮ್ಮಾಯಿ ಅವರು ತಾ.೩೦ ರಂದು ನವದೆಹಲಿಗೆ ಭೇಟಿ ನೀಡಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಸಿಎಂ ಆದ ಬಳಿಕ ಬೊಮ್ಮಾಯಿ ಅವರದ್ದು ಇದೇ ಮೊದಲ ದೆಹಲಿ ಭೇಟಿಯಾಗಿದೆ. ಬಿಜೆಪಿ ವರಿಷ್ಠರ ಜೊತೆಗೆ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಜಲಸಂಪನ್ಮೂಲ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನೂ ಭೇಟಿ ಮಾಡಿದ್ದು ರಾಜ್ಯದ ಸಂಸದರಿಗೆ ಔತಣ ಕೂಟ ಆಯೋಜಿಸಿದ್ದರು. ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರು ಇಂದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವಿವಿಧ ವಿಷಯಗಳ ಕುರಿತು ಚರ್ಚಿಸಿದರು. ಈ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡಕ್ಕೆ ಏಮ್ಸ್ ಮಂಜೂರು ಮಾಡುವಂತೆ ಹಾಗೂ ರಾಯಚೂರಿಗೆ ಏಮ್ಸ್ ಮಾದರಿಯ ವೈದ್ಯಕೀಯ ಸಂಸ್ಥೆ ಮಂಜೂರು ಮಾಡುವಂತೆ ಮನವಿ ಮಾಡಿದರು. ಜೊತೆಗೆ ಕಲಬುರಗಿಯ ಇಎಸ್ಐ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯನ್ನು ಪ್ರಾದೇಶಿಕ ಏಮ್ಸ್ ಮಾದರಿಯ ಸಂಸ್ಥೆಯನ್ನಾಗಿ ಉನ್ನತೀಕರಿಸುವಂತೆ ಕೋರಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರಿಗೆ ಶುಭಕೋರಿದ ಪ್ರಧಾನಿಯವರು, ಕರ್ನಾಟಕದ ಅಭಿವೃದ್ಧಿಗೆ ಎಲ್ಲ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು.
ಕೊಡಗು ಸೇರಿದಂತೆ ೫ ಜಿಲ್ಲೆಗಳ ಡಿಸಿ ಜೊತೆ ವೀಡಿಯೋ ಸಂವಾದ
ಬೆAಗಳೂರು, ಜು. ೩೦: ಕೊಡಗು ಸೇರಿದಂತೆ ರಾಜ್ಯದ ೫ ಜಿಲ್ಲೆಗಳಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಾರದಿರುವ ಹಿನ್ನೆಲೆಯಲ್ಲಿ ಇಂದು ೫ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸುವುದಾಗಿ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ದಿಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ಕೊರೊನಾ ಸೋಂಕಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯದ ಗಡಿ ರಾಜ್ಯಗಳಿಂದ ಕರ್ನಾಟಕಕ್ಕೆ ಆಗಮಿಸುವವರು ಕೋವಿಡ್ ನೆಗೆಟಿವ್ ವರದಿ ಕಡ್ಡಾಯವಾಗಿ ತರಬೇಕೆಂದು ಸೂಚಿಸಲಾಗಿದೆ. ಕೇರಳದಲ್ಲಿ ಕೊರೊನಾ ಸೋಂಕು ಹೆಚ್ಚಳದಿಂದಾಗಿ ಕೇರಳ-ಕರ್ನಾಟಕದ ಗಡಿಭಾಗದಲ್ಲಿ ಮತ್ತಷ್ಟು ಕಟ್ಟೆಚ್ಚರಕ್ಕೆ ಸೂಚಿಸಲಾಗಿದೆ. ತಾ. ೩೧ ರಂದು (ಇಂದು) ಕೊಡಗು ಸೇರಿದಂತೆ ಮೈಸೂರು, ಚಾಮರಾಜನಗರ, ಉಡುಪಿ ಜಿಲ್ಲೆಗಳ ಡಿಸಿ ಜೊತೆ ಮಾತನಾಡಿ ಲಸಿಕೆ ಪ್ರಮಾಣ, ಕೋವಿಡ್ ಹೆಚ್ಚಳಕ್ಕೆ ಕಾರಣವಾಗುತ್ತಿರುವ ಅಂಶಗಳ ಬಗ್ಗೆ ಮಾಹಿತಿ ಪಡೆದು ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.
ಕೆ.ವಿ. ಕಾಮತ್ಗೆ ಪತ್ನಿ ವಿಯೋಗ
ಮುಂಬೈ, ಜು. ೩೦: ಬ್ರಿಕ್ಸ್ ಅಂರ್ರಾಷ್ಟಿçÃಯ ಬ್ಯಾಂಕ್ ಹಾಗೂ ಐಸಿಸಿಐ ಬ್ಯಾಂಕಿನ ಮಾಜಿ ಅಧ್ಯಕ್ಷ ಕೆ.ವಿ. ಕಾಮತ್ ಅವರ ಪತ್ನಿ ರಾಜಲಕ್ಷಿö್ಮ ಕಾಮತ್ (೬೯) ಗುರುವಾರ ತಡರಾತ್ರಿ ಮುಂಬೈಯ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರ ಅಂತ್ಯಕ್ರಿಯೆ ಶುಕ್ರವಾರ ಮುಂಬೈಯಲ್ಲಿ ನಡೆದಿದ್ದು, ರಾಜಲಕ್ಷಿö್ಮ ಕಾಮತ್ ಅವರು ಪತಿ ಸೇರಿದಂತೆ ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಮೃತರು ಸುಂಟಿಕೊಪ್ಪ ಸಮೀಪದ ಕೊಡಗರಹಳ್ಳಿ ಚೌಡಿಕಾಡು ತೋಟದ ದಿವಂಗತ ಚಂದ್ರಶೇಖರ ಪೈ ಮತ್ತು ದಿವಂಗತ ವಿಜಯಲಕ್ಷಿö್ಮ ಪೈ ದಂಪತಿ ಪುತ್ರಿಯಾಗಿದ್ದಾರೆ.
ಸಿಂಧುಗೆ ರೋಚಕ ಜಯ
ಟೋಕಿಯೊ, ಜು. ೩೦: ಟೋಕಿಯೊ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಗೆಲುವಿನ ನಾಗಾಲೋಟ ಮುಂದುವರೆದಿದ್ದು, ಇಂದು ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸಿಂಧು ರೋಚಕ ಜಯ ಸಾಧಿಸಿದ್ದಾರೆ. ಒಲಂಪಿಕ್ಸ್ ಕ್ರೀಡಾಕೂಟದ ಬ್ಯಾಡ್ಮಿಂಟನ್ ಸ್ಪರ್ಧೆಯ ಮಹಿಳೆಯರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಪೈನಲ್ ಪಂದ್ಯದಲ್ಲಿ ಭಾರತದ ಪಿ.ವಿ. ಸಿಂಧು ಭರ್ಜರಿ ಜಯ ದಾಖಲಿಸಿ ಸೆಮಿಫೈನಲ್ಗೆ ಲಗ್ಗೆ ಇಟ್ಟಿದ್ದಾರೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಪಾನ್ನ ನಾಲ್ಕನೇ ಶ್ರೇಯಾಂಕದ ಅಕನೆ ಯಮಗುಚಿ ಅವರ ವಿರುದ್ಧ ೨೧-೧೩, ೨೨-೨೦ ಅಂತರದಲ್ಲಿ ಜಯ ದಾಖಲಿಸಿ ಸೆಮಿಫೈನಲ್ಗೆ ಲಗ್ಗೆ ಇಟ್ಟಿದ್ದಾರೆ. ನಿನ್ನೆಯಷ್ಟೇ ಸಿಂಧು ಡೆನ್ಮಾರ್ಕ್ನ ಮಿಯಾ ಬ್ಲಿಚ್ಫೆಲ್ಡ್ರನ್ನು ಮಣಿಸಿ ಕ್ವಾರ್ಟರ್ ಫೈನಲ್ಗೇರಿದ್ದರು.
ಮೃತ ಅಭಿಮಾನಿ ಕುಟುಂಬಕ್ಕೆ ಯಡಿಯೂರಪ್ಪ ಆರ್ಥಿಕ ನೆರವು
ಚಾಮರಾಜನಗರ, ಜು. ೩೦: ಬಿ.ಎಸ್. ಯಡಿಯೂರಪ್ಪನವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಸುದ್ದಿ ಕೇಳಿ ನೊಂದು ಆತ್ಮಹತ್ಯೆ ಮಾಡಿಕೊಂಡ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ಬೊಮ್ಮಲಾಪುರದ ಯುವಕ ಅಭಿಮಾನಿ ರವಿ ನಿವಾಸಕ್ಕೆ ಶುಕ್ರವಾರ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಸಾಂತ್ವನ ಹೇಳಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ರವಿಯವರ ತಾಯಿಯನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ಯಡಿಯೂರಪ್ಪನವರು ಸ್ಥಳದಲ್ಲಿ ೫ ಲಕ್ಷ ರೂಪಾಯಿ ಪರಿಹಾರ ಪ್ರಕಟಿಸಿ ಇನ್ನೂ ೫ ಲಕ್ಷ ರೂಪಾಯಿ ನೆರವು ನೀಡುವುದಾಗಿ ಘೋಷಿಸಿದ್ದಾರೆ. ನನ್ನ ಅಭಿಮಾನಿಯಾಗಿದ್ದ ರವಿ ನಾನು ರಾಜೀನಾಮೆ ನೀಡಿದ್ದೇನೆಂದು ಆತ್ಮಹತ್ಯೆ ಮಾಡಿಕೊಂಡಿರುವುದು ಕೇಳಿ ಮನಸ್ಸಿಗೆ ತುಂಬಾ ಬೇಸರವಾಗಿದೆ. ಈಗ ನಾವು ರವಿ ಕುಟುಂಬಕ್ಕೆ ಆಸರೆಯಾಗಬೇಕು. ಮೃತ ರವಿ ಕುಟುಂಬಕ್ಕೆ ೫ ಲಕ್ಷ ರೂಪಾಯಿ ನೀಡಿದ್ದೇನೆ. ಇನ್ನೂ ೫ ಲಕ್ಷ ರೂಪಾಯಿ ಬ್ಯಾಂಕ್ ಖಾತೆಗೆ ಹಾಕುತ್ತೇವೆ ಎಂದರು.
ರಾಜ್ಯಸಭೆ ಕಲಾಪ ಮುಂದೂಡಿಕೆ
ನವದೆಹಲಿ, ಜು. ೩೦: ಪ್ರತಿಪಕ್ಷಗಳ ಪ್ರತಿಭಟನೆಯ ಪರಿಣಾಮ ರಾಜ್ಯಸಭೆ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಗಿದೆ. ಪೆಗಾಸಸ್ ವಿವಾದ, ಕೃಷಿ ಮಸೂದೆಗಳ ವಿಷಯ ಹಾಗೂ ಬೆಲೆ ಏರಿಕೆಯ ವಿಷಯಗಳಲ್ಲಿ ಪ್ರತಿಪಕ್ಷಗಳು ರಾಜ್ಯಸಭೆಯಲ್ಲಿ ನಿರಂತರ ಪ್ರತಿಭಟನೆ ನಡೆಸಿದವು. ಮಧ್ಯಾಹ್ನದ ಭೋಜನ ವಿರಾಮದ ನಂತರ ೨.೩೦ಕ್ಕೆ ಪ್ರಾರಂಭವಾದ ಕಲಾಪದಲ್ಲಿ ಸಭಾಧ್ಯಕ್ಷ ಹರಿವಂಶ್ ನಾರಾಯಣ್ ಸಿಂಗ್ ರಾಜ್ಯಸಭಾ ಸದಸ್ಯರುಗಳಿಗೆ ಸಮಯ ನೀಡಲು ಮುಂದಾದರು. ಇದಕ್ಕೂ ಮುನ್ನ ಸರ್ಕಾರ ಸೀಮಿತ ಹೊಣೆಗಾರಿಕೆ ಸಹಭಾಗಿತ್ವ (ತಿದ್ದುಪಡಿ) ಮಸೂದೆ, ೨೦೨೧ ಮತ್ತು ಠೇವಣಿ ವಿಮೆ ಮತ್ತು ಸಾಲ ಖಾತರಿ ನಿಗಮ (ತಿದ್ದುಪಡಿ) ಮಸೂದೆ, ೨೦೨೧ಯನ್ನು ಮಂಡಿಸಿ ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು. ಈ ನಡುವೆ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ತೆಂಗು ಅಭಿವೃದ್ಧಿ ಮಂಡಳಿ (ತಿದ್ದುಪಡಿ) ಮಸೂದೆ ಪರಿಗಣಿಸುವ ನಿರ್ಣಯವನ್ನು ಮಂಡಿಸಿದರು. ಮಸೂದೆ ಅಂಗೀಕಾರ ಹಾಗೂ ಕೃಷಿ ಸಚಿವರ ಭಾಷಣದ ನಡುವೆ ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿದ್ದರ ಪರಿಣಾಮ ಸಭೆಯನ್ನು ಸೋಮವಾರದ ಬೆಳಿಗ್ಗೆ ೧೧ ಗಂಟೆಗೆ ಮುಂದೂಡಲಾಗಿದೆ.
ಕೇರಳದಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಕೊಲೆ
ಕೊಚ್ಚಿ, ಜು. ೩೦: ಕೇರಳದಲ್ಲಿ ಹಾಡಹಗಲೇ ಭೀಕರ ಕೊಲೆ ನಡೆದಿದ್ದು, ದಂತ ವೈದ್ಯಕೀಯ ವಿದ್ಯಾರ್ಥಿನಿಗೆ ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಕೇರಳದ ಕೊಚ್ಚಿಯಿಂದ ೩೫ ಕಿ.ಮೀ. ದೂರದಲ್ಲಿರುವ ಕೋತಮಂಗಲA ಸಮೀಪದ ನೆಲ್ಲಿಕುಳಿಯಲ್ಲಿ ಈ ಘಟನೆ ನಡೆದಿದೆ. ದಂತ ವೈದ್ಯಕೀಯ ವಿದ್ಯಾರ್ಥಿನಿ ಪಿ.ವಿ. ಮಾನಸ ಎಂಬವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಪೊಲೀಸರ ಪ್ರಕಾರ, ಕೊಲೆಗಾರನನ್ನು ರಾಖಿಲ್ (೨೪) ಎಂದು ಗುರುತಿಸಲಾಗಿದ್ದು, ಮಾನಸ ಪಿ.ವಿ. (೨೪) ನಾಲ್ಕನೇ ವರ್ಷದ ವಿದ್ಯಾರ್ಥಿ ಯಾಗಿದ್ದರು. ಕೋತಮಂಗಲAನ ಇಂದಿರಾಗಾAಧಿ ಕಾಲೇಜಿನಲ್ಲಿ ದಂತ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದರು. ಇಬ್ಬರ ನಡುವಿನ ವೈಯಕ್ತಿಕ ದ್ವೇಷವೇ ಕೊಲೆಗೆ ಕಾರಣ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಕೊತಮಂಗ ಲಂನ ಇಂದಿರಾ ಗಾಂಧಿ ಇನ್ಸಿ÷್ಟಟ್ಯೂಟ್ ಆಫ್ ಡೆಂಟಲ್ ಸೈನ್ಸಸ್ ಬಳಿ ಮಧ್ಯಾಹ್ನ ೩.೩೦ ರ ಸುಮಾರಿಗೆ ಈ ಘಟನೆ ನಡೆದಿದ್ದು, ಮಾನಸ ಪೇಯಿಂಗ್ಗೆಸ್ಟ್ ಆಗಿ ವಾಸಿಸುತ್ತಿದ್ದ ಸ್ಥಳದ ಸಮೀಪದಲ್ಲೇ ಈ ಘಟನೆ ನಡೆದಿದೆ. ಮಾನಸ ಪಿ.ಜಿ. ಯಲ್ಲಿರುವಾಗಲೇ ಕಾರಿನಲ್ಲಿ ಬಂದ ದುಷ್ಕರ್ಮಿ ರಾಖಿಲ್ ನೇರವಾಗಿ ಪಿಜಿಯೊಳಗೆ ನುಗ್ಗಿ ಮಾನಸ ಮೇಲೆ ಗುಂಡು ಹಾರಿಸಿದ್ದಾನೆ. ಈ ಬಗ್ಗೆ ಹೆಚ್ಚಿನ ವಿವರ ಕಲೆಹಾಕುತ್ತಿದ್ದೇವೆ ಎಂದು ಕೋತಮಂಗಲA ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.