ಸೋಮವಾರಪೇಟೆ, ಜು. ೨೯: ತಾಲೂಕು ಸೇರಿದಂತೆ ಜಿಲ್ಲೆಯಲ್ಲಿ ನೆಲೆಸಿರುವ ಅಕ್ರಮ ವಲಸಿಗರ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹಿಸಿ ವಿವಿಧ ಹಿಂದೂಪರ ಸಂಘಟನೆಗಳಿAದ ತಾಲೂಕು ತಹಶೀಲ್ದಾರ್ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಪಶ್ಚಿಮಬಂಗಾಳ, ಅಸ್ಸಾಂ, ಬಿಹಾರದವರೆಂದು ಹೇಳಿಕೊಂಡು ನಕಲಿ ದಾಖಲಾತಿಗಳನ್ನು ಸೃಷ್ಟಿಸಿಕೊಂಡು ಬಾಂಗ್ಲಾದೇಶಿಯರು ಅಕ್ರಮವಾಗಿ ಜಿಲ್ಲೆಯ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದು, ಇವರುಗಳ ಸಮಗ್ರ ಮಾಹಿತಿ ಕಲೆಹಾಕಿ ದಾಖಲಾತಿಗಳನ್ನು ಪರಿಶೀಲಿಸಬೇಕು. ಇಂತವರಿಗೆ ಆಶ್ರಯ ಕಲ್ಪಿಸಿರುವ ತೋಟ ಮಾಲೀಕರಿಂದಲೂ ಮಾಹಿತಿ ಸಂಗ್ರಹಿಸಬೇಕೆAದು ಪದಾಧಿಕಾರಿಗಳು ಆಗ್ರಹಿಸಿದರು.

ಅಕ್ರಮ ವಲಸಿಗರಿಂದ ಸಮಾಜದಲ್ಲಿ ಸಾಮರಸ್ಯ ಹಾಳಾಗುತ್ತಿದೆ. ಸ್ಥಳೀಯ ಕಾರ್ಮಿಕರ ಬದುಕಿಗೂ ತೊಂದರೆಯಾಗುತ್ತಿದೆ. ಕಾಫಿ ತೋಟದ ಲೈನ್‌ಮನೆಗಳಲ್ಲಿ ಮಕ್ಕಳು, ವಯೋವೃದ್ದರಾದಿಯಾಗಿ ನೂರಾರು ಮಂದಿ ಅಕ್ರಮ ವಲಸಿಗರು ನೆಲೆಸುತ್ತಿದ್ದಾರೆ. ಇದು ಜಿಲ್ಲೆಯ ಭದ್ರತೆಗೂ ಸವಾಲಾಗಿದೆ. ಈ ಹಿನ್ನೆಲೆ ತಾಲೂಕು ಆಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು. ಅಕ್ರಮ ವಲಸಿಗರ ಪತ್ತೆಗೆ ಎನ್‌ಐಎ ತನಿಖೆ ನಡೆಸಬೇಕೆಂದು ಪದಾಧಿಕಾರಿಗಳು ಒತ್ತಾಯಿಸಿದರು.

ಈ ಸಂಬAಧಿತ ಮನವಿಯನ್ನು ತಹಶೀಲ್ದಾರ್ ಗೋವಿಂದರಾಜು ಅವರ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು. ಈ ಸಂದರ್ಭ ಹಿಂದೂ ಜಾಗರಣಾ ವೇದಿಕೆ ಅಧ್ಯಕ್ಷ ಉಮೇಶ್, ಪದಾಧಿಕಾರಿಗಳಾದ ಬಿ.ಜಿ. ಪ್ರಶಾಂತ್, ಹೇಮಂತ್ ಪೂಜಾರಿ, ಚೇತನ್, ದಿನೇಶ್, ಬೇಳೂರು ಗ್ರಾ.ಪಂ. ಅಧ್ಯಕ್ಷ ಬಿ.ಎಂ. ಪ್ರಶಾಂತ್, ಕರವೇ ತಾಲೂಕು ಅಧ್ಯಕ್ಷ ಕೆ.ಎನ್. ದೀಪಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.