ವೀರಾಜಪೇಟೆ, ಜು. ೨೮: ಒಬ್ಬ ವ್ಯಕ್ತಿಯ ಮರಣದ ನಂತರವೂ ಜೀವಂತಿಕೆಯ ಭಾವನೆ ಹುಟ್ಟಿಸುವುದು ಆ ವ್ಯಕ್ತಿಯ ಸಾಧನೆ ಹಾಗೂ ಅವರ ಮೇಲಿರುವ ಅಭಿಮಾನ, ಗೌರವ. ಅಂತಹವರ ಸಾಲಿಗೆ ಸೇರಿದ ಗಾನ ಕೋಗಿಲೆ ತೋಲಂಡ ಪ್ರಭಾ ಚಂಗಪ್ಪ ಅವರು ತಮ್ಮ ಹಾಡಿನ ಮೂಲಕ ನಮ್ಮೊಂದಿಗೆ ಜೀವಂತವಾಗಿದ್ದಾರೆ ಎಂದು ಕೊಡವ ತಕ್ಕ್ ಎಳ್ತ್'ಕಾರಡ ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

‘ಕೊಡವ ತಕ್ಕ್ ಎಳ್ತ್ಕಾರಡ ಕೂಟ’ ಹಾಗೂ ‘ತೂಕ್ ಬೊಳಕ್ ಕಲೆ ಕ್ರೀಡೆ ಸಾಹಿತ್ಯ ಅಕಾಡೆಮಿ’ಯ ಜಂಟಿ ಆಶ್ರಯದಲ್ಲಿ ವೀರಾಜಪೇಟೆ ಪುರಭವನದಲ್ಲಿ ಖ್ಯಾತ ಗಾಯಕಿ ತೋಲಂಡ ಪ್ರಭಾ ಚಂಗಪ್ಪ ಅವರಿಗೆ ಇಂದು ನಡೆದ ಗಾನ ನಮನ ಶ್ರದ್ಧಾಂಜಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೊಡವ ಸಂಗೀತ ಲೋಕಕ್ಕೆ ತಮ್ಮ ಸುಶ್ರಾವ್ಯ ಗೀತೆಗಳೊಂದಿಗೆ ಇನ್ನಷ್ಟು ಕೊಡುಗೆ ನೀಡಬೇಕಿದ್ದ ಪ್ರಭಾ ಚಂಗಪ್ಪ ಅವರ ಅಕಾಲಿಕ ಮರಣ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ ಉಂಟುಮಾಡಿದೆ. ಆದರೆ ಅವರ ಸಂಗೀತ ಸೇವೆಗೆ ಗೌರವ ಸಲ್ಲಿಸಲು ಇಂದು ಅವರು ಹಾಡಿದ ಹಾಡನ್ನೇ ಕಲಾವಿದರಿಂದ ಹಾಡಿಸುತ್ತಿರುವ ಈ ಕಾರ್ಯಕ್ರಮ ಅವರ ಜೀವಂತಿಕೆಗೆ ಸಾಕ್ಷಿಯಾಗಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ಕಾರ್ಯಕ್ರಮವನ್ನು ಅವರು ನಿಧನರಾಗಿ ಇವತ್ತಿಗೆ ೧೧೧ ದಿನವಾಗಿರುವ ಈ ವಿಶೇಷ ಸಂದರ್ಭದಲ್ಲಿ ಆಚರಿಸುತ್ತಿದ್ದು, ಅವರ ಸಾಹಿತ್ಯ ಸೇವೆಗೆ ನ್ಯಾಯ ದೊರಕಿದಂತಾಗಿದೆ ಎಂದರು.

ತೂಕ್ ಬೊಳಕ್ ಕಲೆ ಕ್ರೀಡೆ ಸಾಹಿತ್ಯ ಅಕಾಡೆಮಿಯ ಸಂಚಾಲಕ ಮುಲ್ಲೇಂಗಡ ಮಧೋಶ್ ಪೂವಯ್ಯ ಮಾತನಾಡಿ, ಕಲೆಗೆ ಹೆಚ್ಚಿನ ಪ್ರೋತ್ಸಾಹ ಇಲ್ಲದಿದ್ದ ಕಾಲಘಟ್ಟದಲ್ಲೇ ಕೊಡವ ಸಂಗೀತಸಾಹಿತ್ಯ ಸೃಷ್ಟಿಸಿದ ಸಾಧನೆ ತೋಲಂಡ ನಾಣಯ್ಯ ಚಂಗಪ್ಪರವರ ದಾದರೆ, ಆ ಅರ್ಥಪೂರ್ಣ ಸಾಹಿತ್ಯಕ್ಕೆ ತಮ್ಮ ಅತ್ಯುತ್ತಮ ಕಂಠದಿAದ ಹಾಡಿ ಜನ ಮಾನಸದಲ್ಲಿ ಕೊಡವ ಸಂಗೀತ ನೆಲೆನಿಲ್ಲುವಂತೆ ಮಾಡಿದ ಕೀರ್ತಿ ಪ್ರಭಾ ಚಂಗಪ್ಪರಿಗೆ ಸಲ್ಲುತ್ತದೆ. ಇವರಿಬ್ಬರ ಅಪರೂಪದ ಜೋಡಿ ಕೊಡವ ಸಾಹಿತ್ಯ ಹಾಗೂ ಸಂಗೀತ ಲೋಕಕ್ಕೆ ನೀಡಿದ ನೂರಾರು ಅರ್ಥಪೂರ್ಣ ಹಾಡು ಹಾಗೂ ಹಲವು ಧ್ವನಿ ಸುರುಳಿಗಳು ಇಂದಿಗೂ ಮನೆಮಾತಾಗಿದೆ. ಇದರೊಂದಿಗೆ ಹಲವಾರು ಹಾಡುಗಾರರನ್ನು ಬೆಳೆಸಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ. ಕೊಡವ ಸಂಗೀತ ಲೋಕವನ್ನು ಶ್ರೀಮಂತಗೊಳಿಸಿದ ತೋಲಂಡ ಪ್ರಭಾ ಚಂಗಪ್ಪ ಕೊಡವ ಸಂಗೀತ ಲೋಕದ ಧ್ರುವ ತಾರೆ ಎಂದರು.

ಮುಖ್ಯ ಅತಿಥಿ ಸ್ಕೌಟ್ ಗೈಡ್ಸ್ನ ಕಮಿಷನರ್ ಪುಟ್ಟಿಚಂಡ ಅಯ್ಯಣ್ಣ ಮಾತನಾಡಿ ಕೊಡವ ಸಂಸ್ಕೃತಿಯು ವಿಶೇಷ ಹಾಗೂ ವಿಶ್ವ ಖ್ಯಾತಿ ಹೊಂದಿರುವುದಾಗಿದೆ. ಸಂಗೀತ ಸೇರಿದಂತೆ ವಿವಿಧ ರೂಪದಲ್ಲಿ ಸಂಸ್ಕೃತಿಯ ಬೆಳೆವಣಿಗೆಗೆ ಹಲವು ಕಲಾವಿದರು ಹಾಗೂ ಇಂತಹ ಸಂಘಟನೆಗಳು ದುಡಿಯುತ್ತಿರುವುದ ರಿಂದ ಸಂಸ್ಕೃತಿ ಉಳಿಯುತ್ತದೆ. ‘ಕೊಡವ ತಕ್ಕ್ ಎಳ್ತ್ಕಾರಡ ಕೂಟ' ಹಾಗೂ ‘ತೂಕ್ ಬೊಳಕ್ ಕಲೆ ಕ್ರೀಡೆ ಸಾಹಿತ್ಯ ಅಕಾಡೆಮಿ' ಒಬ್ಬ ಉತ್ತಮ ಹಾಡುಗಾರ್ತಿಗೆ ಮರಣದ ನಂತರವೂ ಇಷ್ಟೊಂದು ಗೌರವ ಕೊಡುತ್ತಿರುವುದು ಅವರ ಸಂಗೀತ ಸೇವೆಗೆ ನೀಡುತ್ತಿರುವ ಅತ್ಯುತ್ತಮ ಮಾನ್ಯತೆ ಹಾಗೂ ಕೊಡವ ಸಂಸ್ಕೃತಿಯ ಹಿರಿಮೆಯನ್ನು ಸಾರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ತೂಕ್ ಬೊಳಕ್ ಕಲೆ ಕ್ರೀಡೆ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಮುಲ್ಲೇಂಗಡ ಶಂಕರಿ ಪೊನ್ನಪ್ಪ, ಹಿರಿಯ ನಾಗರಿಕರ ವೇದಿಕೆಯ ಕಾರ್ಯದರ್ಶಿ ಪುಲಿಯಂಡ ಪೊನ್ನಪ್ಪ, ಕೊಡವ ತಕ್ಕ್ ಎಳ್ತ್ಕಾರಡ ಕೂಟದ ಸಲಹೆಗಾರ ಚೇಂದ್ರಿಮಾಡ ಪ್ರಿನ್ಸ್ ಸೋಮಯ್ಯ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ನೆರೆದಿದ್ದವರು ಪ್ರಭಾ ಚಂಗಪ್ಪರವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಮಾಡಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ವಿಜೇತರು: ಪ್ರಭಾ ಚಂಗಪ್ಪರವರೇ ಹಾಡಿದ ಹಾಡುಗಳನ್ನು ಹಾಡುವ ಸ್ಪರ್ಧೆಯ ಹಿರಿಯರ ವಿಭಾಗದಲ್ಲಿ ಚೊಟ್ಟಂಡ ತಶ್ವಿ ಸೋಮಯ್ಯ ಪ್ರಥಮ, ನೆಲ್ಲಮಕ್ಕಡ ಸಾಗರ್ ಮಾಚಯ್ಯ ದ್ವಿತೀಯ, ನಾಳಿಯಮ್ಮಂಡ ವೀಣ ಮನುಕುಮಾರ್ ತೃತೀಯ, ಸೋಮೆಯಂಡ ಬೋಸ್ ಬೆಳ್ಯಪ್ಪ ನಾಲ್ಕನೇ ಬಹುಮಾನ ಪಡೆದುಕೊಂಡರು.

ಕಿರಿಯರ ವಿಭಾಗದಲ್ಲಿ: ತಾಪಂಡ ಹರ್ಷಿತ್ ಪೊನ್ನಪ್ಪ ಪ್ರಥಮ, ಚೆಟ್ಟಂಗಡ ಲೇಖನ ಅಕ್ಕಮ್ಮ ದ್ವಿತೀಯ, ಚೇಂದ್ರಿಮಾಡ ದ್ರವ್ಯ ಶಕುಂತಲಾ ತೃತೀಯ, ನೂರೇರ ಕಿರಣ್ ನಾಚಪ್ಪ ನಾಲ್ಕನೇ ಬಹುಮಾನ ಪಡೆದುಕೊಂಡರು.

ಪೈಪೋಟಿಯನ್ನು ಹೊರತು ಪಡಿಸಿ ಗಾಯಕಿಯರಾದ ಬಟ್ಟಿಯಂಡ ಲಿಖಿತ ಪಳಂಗಪ್ಪ, ಚೊಟ್ಟಂಡ ರೇಣ ಸೋಮಯ್ಯ ಮತ್ತಿತರರು ಪ್ರಭಾ ಚಂಗಪ್ಪ ಅವರು ಹಾಡಿದ ಗೀತೆಯನ್ನು ಹಾಡಿದರು.