ಮಡಿಕೇರಿ, ಜು. ೨೭: ಮಡಿಕೇರಿ ಸನಿಹದ ಬೋಯಿಕೇರಿ ಬಳಿಯಲ್ಲಿ ತಾ. ೨೫ ರಂದು ದೇಶಸೇವೆ ಮಾಡಿರುವ ಕುಟುಂಬ ಸದಸ್ಯರ ಮೇಲೆ ಅಮಾನವೀಯವಾಗಿ ಕೆಲವರು ನಡೆಸಿರುವ ಹಲ್ಲೆಯನ್ನು ಕೊಡಗು ಮಾಜಿ ಸೈನಿಕರ ಕಲ್ಯಾಣಾಭಿವೃದ್ಧಿಯ ಸಂಘ ಖಂಡಿಸಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಸಂಘದ ಅಧ್ಯಕ್ಷ ನಿವೃತ್ತ ಮೇ| ಜ| ಬಿ.ಎ. ಕಾರ್ಯಪ್ಪ ಅವರು ಹಲ್ಲೆ ಪ್ರಕರಣ ಒಂದು ರೀತಿಯಲ್ಲಿ ಗೂಂಡಾ ಪ್ರವೃತ್ತಿಯನ್ನು ತೋರಿರುವಂತಾಗಿದೆ. ಇದನ್ನು ಸಂಘ ತೀವ್ರವಾಗಿ ಖಂಡಿಸುತ್ತದೆ. ಇಂತಹ ಘಟನೆ ಮರುಕಳಿಸಬಾರದು ಎಂದು ಆಗ್ರಹಿಸಿದ್ದಾರೆ. ಈ ಬಗ್ಗೆ ಸಂಘದ ಪ್ರಮುಖರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ಮನವಿ ಸಲ್ಲಿಸಿದ್ದು, ಸೂಕ್ತ ಕ್ರಮ ಹಾಗೂ ಮುಂದಿನ ದಿನಗಳಲ್ಲಿ ಈ ಬಗ್ಗೆ ಜಾಗ್ರತೆ ವಹಿಸುವಂತೆ ಆಗ್ರಹಿಸಿದ್ದಾರೆ.

ಎಸ್‌ಪಿ ಕ್ಷಮಾಮಿಶ್ರ ಅವರಿಗೆ ಸಂಘದ ಕಾರ್ಯದರ್ಶಿ ನಿವೃತ್ತ ಮೇಜರ್ ಓ.ಎಸ್. ಚಿಂಗಪ್ಪ, ಸದಸ್ಯರಾದ ಸುಬೇದಾರ್ ಮೇಜರ್‌ಗಳಾದ ವಾಸಪ್ಪ, ನಾಚಪ್ಪ, ಸಂಜು ಅಚ್ಚಯ್ಯ ಅವರುಗಳು ಮನವಿ ಸಲ್ಲಿಸಿದರು.