ಪೊನ್ನಂಪೇಟೆ, ಜು. ೨೭: ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ (ನಿಸರ್ಗ ಜೇಸಿಸ್) ವತಿಯಿಂದ ಆಗಸ್ಟ್ ೧೫ರಂದು ಬಿಟ್ಟಂಗಾಲ ಸಮೀಪದ ಕೊಳತೋಡಿನಲ್ಲಿ ೭ನೇ ವರ್ಷದ ‘ನಿಸರ್ಗ ಜೇಸಿಸ್ ಮುಕ್ತ ಕೆಸರುಗದ್ದೆ ಕ್ರೀಡಾಕೂಟ-೨೦೨೧' ಅನ್ನು ಆಯೋಜಿಸಲಾಗಿದೆ. ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ ಘಟಕದ ಅಧ್ಯಕ್ಷ ಎಂ.ಎನ್. ವನಿತ್ ಕುಮಾರ್ ಅವರು, ವೀರಾಜಪೇಟೆ-ಗೋಣಿಕೊಪ್ಪಲು ಮುಖ್ಯರಸ್ತೆಯ ಬದಿಯಲ್ಲಿರುವ ಕೊಳತೋಡಿನ ಮುರುವಂಡ ಸುಬ್ರಮಣಿ ಅವರ ಭತ್ತದ ಗದ್ದೆಯಲ್ಲಿ ಈ ಕೆಸರುಗದ್ದೆ ಕ್ರೀಡಾಕೂಟ ಜರುಗಲಿದೆ. ಈ ಕ್ರೀಡಾಕೂಟದಲ್ಲಿ ಸರ್ಕಾರದ ಕೋವಿಡ್ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಲಾಗುವುದು. ಕೋವಿಡ್ ಲಸಿಕೆ ಪಡೆದ ಕ್ರೀಡಾಪಟುಗಳಿಗೆ ಮಾತ್ರ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುವುದು. ಸರಕಾರದ ಆದೇಶದಂತೆ ಈ ಬಾರಿ ಕ್ರೀಡಾಕೂಟಕ್ಕೆ ಪ್ರೇಕ್ಷಕರನ್ನು ಅವಲಂಬಿಸದಿರಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ಕ್ರೀಡಾಕೂಟದಲ್ಲಿ ೧೮ ವರ್ಷ ಪೂರ್ತಿಯಾದ ಮಹಿಳೆಯರಿಗೆ ಮತ್ತು ಪುರುಷರಿಗೆ ಮುಕ್ತ ಕೆಸರುಗದ್ದೆ ಓಟದ ಸ್ಪರ್ಧೆ ಸೇರಿದಂತೆ ಪುರುಷರಿಗೆ ಮತ್ತು ಮಹಿಳೆಯರಿಗೆ ಹಗ್ಗಜಗ್ಗಾಟ ಸ್ಪರ್ಧೆ ಹಾಗೂ ಪುರುಷರ ಫುಟ್ಬಾಲ್ ಪಂದ್ಯಾವಳಿಯನ್ನು ಮಾತ್ರ ಆಯೋಜಿಸಲಾಗಿದೆ. ಹಗ್ಗ ಜಗ್ಗಾಟ ತಂಡದಲ್ಲಿ ತಲಾ ೯ ಜನರಿಗೆ ಮತ್ತು ಫುಟ್ಬಾಲ್ ತಂಡದಲ್ಲಿ ತಲಾ ೭ ಜನರಿಗೆ ಮಾತ್ರ ಅವಕಾಶವಿರುತ್ತದೆ.

ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಬಯಸುವ ತಂಡಗಳು ಆಗಸ್ಟ್ ೧೦ರೊಳಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಕ್ರೀಡಾಕೂಟದ ಯೋಜನಾ ನಿರ್ದೇಶಕ ಕುಪ್ಪಂಡ ದಿಲನ್ ಬೋಪಣ್ಣ ೯೪೮೧೮೮೩೭೩೮ ಅಥವಾ ಅಧ್ಯಕ್ಷರನ್ನು ೯೮೮೦೫೦೪೨೦೮ ರಲ್ಲಿ ಸಂಪರ್ಕಿಸಬಹುದಾಗಿದೆ ಎಂದು ವನಿತ್ ಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.