ವಿಶೇಷ ವರದಿ: ಕುಡೆಕಲ್ ಸಂತೋಷ್

ಮಡಿಕೇರಿ, ಜು. ೨೭: ಯಾರೂ ಕೂಡ ಊಹಿಸಿರಲಿಲ್ಲ ನಾವು ನಿಂತ ನೆಲ ಅಲುಗಾಡುತ್ತದೆ., ಗಿಡ ಮರಗಳಿಂದ ಸ್ವಚ್ಛಂದವಾಗಿದ್ದ ಭೂಮಿಯೇ ನೀರಿನಂತೆ ಕೊಚ್ಚಿ ಹೋಗಬಹುದು., ಕಟ್ಟಿಕೊಂಡ ಸೂರು ನೆಲಕಚ್ಚಬಹುದು., ಜೊತೆಯಲ್ಲೇ ಜೀವನ ಸಾಗಿಸುತ್ತಿದ್ದವರು ನೋಡ ನೋಡುತ್ತಲೇ ಮಣ್ಣಾಗಬಹುದು., ಕ್ಷಣ ಮಾತ್ರದಲ್ಲಿ ಬದುಕೇ ಅಯೋಮಯವಾಗಬಹುದೆಂದು..! ಅಂತಹ ಒಂದು ದುರ್ಘಟನೆ ೨೦೧೮ರಿಂದ ಸಂಭವಿಸುತ್ತಲೇ ಇದೆ. ಪ್ರಕೃತಿ ವಿಕೋಪದಿಂದಾಗಿ ಹಲವಾರು ಮಂದಿ ಜೀವ ಕಳೆದುಕೊಂಡರು., ಅದೆಷ್ಟೋ ಮಂದಿ ಮನೆ, ಮಠ ಕಳೆದುಕೊಂಡರು., ಇನ್ನಷ್ಟು ಮಂದಿ ಅತಂತ್ರರಾದರು..! ಕಳೆದುಕೊಂಡವರಿಗೆ ಸರಕಾರದಿಂದ ಪರಿಹಾರ, ಮನೆ ಸಿಕ್ಕಿದೆ. ಆದರೆ, ಸಣ್ಣ ಪುಟ್ಟ ಹಾನಿಯೊಂದಿಗೆ ವಿಕೋಪಕ್ಕೆ ತುತ್ತಾದ ಪ್ರದೇಶಗಳಲ್ಲೇ ನೆಲೆ ನಿಂತಿರುವವರÀ ಬದುಕು ಇದೀಗ ಮೂರಾಬಟ್ಟೆಯಾಗಿದೆ. ಅತ್ತ ಸರಕಾರದಿಂದಲೂ ಶಾಶ್ವತ ಪರಿಹಾರ ಸಿಗುತ್ತಿಲ್ಲ., ಇತ್ತ ಮನೆ, ಜಾಗ ಬಿಟ್ಟು ಬೇರೆಲ್ಲೂ ಹೋಗುವಂತಿಲ್ಲ., ವರ್ಷಂಪ್ರತಿ ಮಳೆಗಾಲ ಬಂತೆAದರೆ ಹೆದರಿಕೆ ಹಾಗೂ ಸರಕಾರದ ನೋಟೀಸ್‌ನಿಂದಾಗಿ ಮನೆಬಿಟ್ಟು ಎಲ್ಲೆಲ್ಲೋ ಹೋಗುವ ದುಸ್ಥಿತಿ ಒಂದೆಡೆಯಾದರೆ, ಮರಳಿ ಬರುವಾಗ ಎದುರಾಗುವದು ತಾವುಗಳು ಕಷ್ಟ ಪಟ್ಟು ಕಟ್ಟಿದ ಕನಸಿನರಮನೆಯ ಕುಸಿದು ಬಿದ್ದಿರುವ ಅವಶೇಷಗಳು..!

ಅರ್ಧ ಶತಮಾನಗಳಿಗಿಂತಲೂ ಅಧಿಕ ವರ್ಷಗಳಿಂದ ತಾವುಗಳು ನೆಲೆ ನಿಂತ ಜಾಗದಲ್ಲೇ ವಾಸಮಾಡಿಕೊಂಡು, ಕೂಲಿ ನಾಲಿ ಮಾಡಿಕೊಂಡು ಬದುಕು ಸಾಗಿಸಿಕೊಂಡು ಬರುತ್ತಿದ್ದ ಜನರೀಗ ಒಂದು ದಿನದ ಬದುಕು ಸಾಗಿಸಲೂ ಕೂಡ ಪರಿತಪಿಸುವಂತಾಗಿದೆ.., ೨೦೧೮ರಲ್ಲಿ ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಪ್ರದೇಶಗಳಲ್ಲಿ ಸರಕಾರದಿಂದ ಯಾವದೇ ಪರಿಹಾರ, ಮನೆ ಸಿಗದೇ ಉಳಿದುಕೊಂಡಿರುವ ಮಂದಿಗೆ ಇದೀಗ ಸಂಕಷ್ಟ ಎದುರಾಗಿದೆ. ಮಳೆಗಾಲದಲ್ಲಿ ಸರಕಾರದ ಆದೇಶದಂತೆ ಮನೆ ಬಿಟ್ಟು ಬೇರೆಡೆಗಳಿಗೆ ತೆರಳಿರುವವರ ಮನೆಗಳು ಇದೀಗ ಕುಸಿದು ಬೀಳುತ್ತಿವೆ., ಭೂಮಿ ಮತ್ತೆ ಬಿರುಕು ಬಿಟ್ಟಿದ್ದು, ಮತ್ತೆ ಇಲ್ಲಿ ಅಪಾಯ ಕಾದಿದೆ.., ‘ನಮಗೊಂದು ಮನೆ ಕೊಡಿ., ನಾವು ಹೇಗಾದರೂ ಬದುಕಿಕೊಳ್ಳುತ್ತೇವೆ.,’ ಎಂದು ಜನಪ್ರತಿನಿಧಿಗಳು, ಸರಕಾರದೊಂದಿಗೆ ಅಮಾಯಕರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ..!

ಇದು ೨೦೧೮ರಲ್ಲಿ ಪ್ರಕೃತಿ ವಿಕೋಪಕ್ಕೆ ತುತ್ತಾದ ಮಡಿಕೇರಿ ತಾಲೂಕಿನ ಮಕ್ಕಂದೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜಹಗೀರ್ ಪೈಸಾರಿ, ಉದಯಗಿರಿ, ಹೆಮ್ಮೆತ್ತಾಳು ಗ್ರಾಮಗಳಲ್ಲಿನ ಪ್ರಸ್ತುತದ ಚಿತ್ರಣ.., ಗ್ರಾ.ಪಂ.ವ್ಯಾಪ್ತಿಯ ಈ ಭಾಗಗಳಲ್ಲಿ ಭಾರೀ ಭೂ ಕುಸಿತದೊಂದಿಗೆ ಸಾಕಷ್ಟು ಸಾವು, ನೋವುಗಳು ಸಂಭವಿಸಿದ್ದವು. ಬಹಳಷ್ಟು ಮಂದಿ ಮನೆಗಳನ್ನು ಕಳೆದುಕೊಂಡು ಸಂತ್ರಸ್ತರಾದರು. ಮನೆ ಕಳೆದುಕೊಂಡವರಿಗೆ ಸರಕಾರದ ಪರಿಹಾರವಾಗಿ ಮನೆಗಳನ್ನು ನೀಡಲಾಗಿದೆ. ಆದರೆ, ಅಲ್ಪ ಸ್ವಲ್ಪ ಹಾನಿಯಾಗಿರುವ ಮನೆಗಳಿಗೆ ಸಣ್ಣ ಪ್ರಮಾಣದ ಪರಿಹಾರ ಮಾತ್ರ ನೀಡಲಾಗಿದೆ. ಕುಸಿತಗೊಂಡ ಪ್ರದೇಶವನ್ನು ವಾಸಕ್ಕೆ ಯೋಗ್ಯವಲ್ಲ ಎಂದು ತಜ್ಞರ ವರದಿಯನುಸಾರ ಸರಕಾರವೇ ಘೋಷಣೆ ಮಾಡಿದೆ. ಆದರೆ ಅಲ್ಲಿರುವ ಮಂದಿಗೆ ಶಾಶ್ವತ ಪರಿಹಾರ ಮಾತ್ರ ಇಂದಿಗೂ ಮಾಡಿಲ್ಲ. ಇದರಿಂದಾಗಿ ಈ ಮಂದಿ ಅತಂತ್ರರಾಗಿದ್ದಾರೆ. ಈ ಸಾಲಿನಲ್ಲಿ ಈಗಾಗಲೇ ಭಾರೀ ಮಳೆಯಾಗಿದ್ದು, ಇಲ್ಲಿ ನೆಲೆಸಿರುವವರ ಮನೆಗಳು ಈಗಾಗಲೇ ಕುಸಿಯಲಾರಂಭಿಸಿವೆ.

ಜಹಗೀರಿನಲ್ಲಿ ಜವರಾಯನ ದರ್ಶನ.!

ಪಂಚಾಯ್ತಿ ವ್ಯಾಪ್ತಿಯ ಜಹಗೀರು ಪೈಸಾರಿಯಲ್ಲಿ ಐವತ್ತು ವರ್ಷಗಳಿಗಿಂತ ಹಿಂದಿನಿAದಲೂ ಬಡ ಜನರು ಮನೆಗಳನ್ನು ಕಟ್ಟಿಕೊಂಡು, ಒಂದಿಷ್ಟು ಜಾಗದಲ್ಲಿ ತೋಟ, ಕೃಷಿ ಮಾಡಿಕೊಂಡು ವಾಸವಿದ್ದರು.

(ಮೊದಲ ಪುಟದಿಂದ) ೨೧ ಮನೆಗಳ ಪೈಕಿ ಭೂಕುಸಿತದ ನಂತರ ಸಂತ್ರಸ್ತರಾದವರು ಸ್ಥಳಾಂತರಗೊAಡಿದ್ದು, ಇದೀಗ ೮ ಕುಟುಂಬಗಳು ಇಲ್ಲಿಯೇ ನೆಲೆ ನಿಂತಿವೆ. ೨೦೧೮ರಲ್ಲಿಯೇ ಇಲ್ಲಿನ ಬಹುತೇಕ ಕಡೆಗಳಲ್ಲಿ ಭೂಮಿ ಬಿರುಕು ಬಿಟ್ಟಿದ್ದು, ಈ ವರ್ಷದ ಮಳೆಗೆ ಮತ್ತೆ ಬಿರುಕು ಕಾಣಿಸಿಕೊಂಡಿದೆ. ೧೮ರ ಭೂಕುಸಿತದಲ್ಲಿ ಈ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳೆಲ್ಲವೂ ಕುಸಿದು ಹೋಗಿರುವದರಿಂದ ಇಲ್ಲಿಗೆ ಸಂಪರ್ಕವೇ ಇಲ್ಲದಂತಾಗಿದೆ. ಅಳಿದುಳಿದ ಮನೆಗಳು ದೂರ ದೂರದಲ್ಲಿದ್ದು, ಎಲ್ಲಿಗೂ ತೆರಳಲು ರಸ್ತೆಯಿಲ್ಲದೆ, ಕಾಡು, ತೋಟದೊಳಗೆ ಬೆಟ್ಟ, ಗುಡ್ಡಗಳನ್ನು ಏರಿಳಿದು ಸಂಚರಿಸಬೇಕಾದ ದುಸ್ಥಿತಿಯಿದೆ. ಹೆಜ್ಜೆ ತಪ್ಪಿದರೆ ಮಾರು ದೂರ ಜಾರಿಕೊಂಡೇ ಹೋಗಬೇಕಷ್ಟೇ..!

ಎಂಟು ಕಿ.ಮೀ. ಸುತ್ತಿ ಬರಬೇಕು..!

ಇಲ್ಲಿನ ಪರಿಸ್ಥಿತಿ ಹೇಗಿದೆಯೆಂದರೆ ಬಿಪಿಎಲ್ ಕಾರ್ಡುದಾರರಾಗಿರುವ ಇವರುಗಳು ಸರಕಾರ ಕೊಡಮಾಡುವ ಉಚಿತ ಪಡಿತರ ಪಡೆದುಕೊಳ್ಳಲು ಕೂಡ ಎಂಟು ಕಿ.ಮೀ. ಸುತ್ತಿ ಬಳಸಿ ಬಸ್ ಅಥವಾ ಇನ್ನಿತರ ವಾಹನಗಳಿಗೆ ನೂರಾರು ರೂಪಾಯಿ ಬಾಡಿಗೆ ಕೊಟ್ಟು ಬರಬೇಕು. ಕೇವಲ ಮೂರು ಕಿ.ಮೀ. ಕಾಲ್ನಡಿಗೆಯಲ್ಲಿ ಮಕ್ಕಂದೂರಿಗೆ ತಲಪುತ್ತಿದ್ದ ಈ ಗ್ರಾಮಕ್ಕಿದ್ದ ರಸ್ತೆ ಮಳೆಯಲ್ಲಿ ಕೊಚ್ಚಿ ಹೋಗಿದೆ. ಇಲ್ಲಿಗೆ ಹೊಸ ರಸ್ತೆ ಮಾಡಲು ಕೂಡ ಸಾಧ್ಯವಿಲ್ಲ. ಒಂದು ವೇಳೆ ಮಾಡಿದರೂ ಕೋಟಿಗಟ್ಟಲೆ ಹಣ ಬೇಕಾಗುತ್ತದೆ. ಅಷ್ಟೊಂದು ಹಣ ಪಂಚಾಯ್ತಿಯಲ್ಲೂ ಇಲ್ಲ. ಹಾಗಾಗಿ ರಸ್ತೆ ಸಂಪರ್ಕವನ್ನೇ ಕಳೆದುಕೊಂಡಿರುವ ಇವರುಗಳು ಇತ್ತ ಕೆ.ನಿಡುಗಣೆ ಗ್ರಾ.ಪಂ.ವ್ಯಾಪ್ತಿಯ ಹೆಬ್ಬೆಟ್ಟಗೇರಿಗಾಗಿ ಮಡಿಕೇರಿಗೆ ಬಂದು ಅಲ್ಲಿಂದ ಮಕ್ಕಂದೂರಿಗೆ ಬರಬೇಕಾದ ದುಸ್ಥಿತಿಯಿದೆ. ದಿನಸಿಯಿಂದ ಹಿಡಿದು, ಅಡುಗೆ ಅನಿಲ ಸೇರಿದಂತೆ ಪ್ರತಿಯೊಂದು ಸಾಮಗ್ರಿಗಳನ್ನು ತಲೆಯ ಮೇಲೆ ಹೊತ್ತುಕೊಂಡೇ ಸಾಗಬೇಕಾದ ಅನಿವಾರ್ಯತೆಯಿದೆ. ಹೆಬ್ಬೆಟ್ಟಗೇರಿ ರಸ್ತೆ ಕೂಡ ಕುಸಿದು ಸಂಪರ್ಕ ಕಡಿತಗೊಂಡಿತ್ತು. ಇದನ್ನು ಇಲ್ಲಿನ ನಿವಾಸಿಗಳೇ ಸರಿಪಡಿಸಿಕೊಂಡಿದ್ದಾರೆ. ಸದ್ಯಕ್ಕೆ ಗ್ರಾಮದ ಅರ್ಧದವರೆಗೆ ಮಾತ್ರ ಪ್ರಯಾಸದಲ್ಲಿ ಫೋರ್ ವ್ಹೀಲ್ ಲಘು ವಾಹನಗಳು ಮಾತ್ರ ಸಂಚರಿಸಬಹುದಾಗಿದೆ.

ಮಕ್ಕಳು-ವೃದ್ಧರಿಗೆ ಹೆಗಲು..!

ಗ್ರಾಮದೊಳಗಡೆ ವಾಹನಗಳು ಬರುವದಿಲ್ಲ, ಹತ್ತಿರದ ರಸ್ತೆಯೂ ಇಲ್ಲ., ಆದರೆ, ಇಲ್ಲಿ ಶಾಲೆಗೆ ಹೋಗುವ ಮಕ್ಕಳಿದ್ದಾರೆ. ಮಕ್ಕಳನ್ನು ಕಳುಹಿಸಲು ಯಾವದೇ ವ್ಯವಸ್ಥೆ ಇಲ್ಲ. ಹಾಗಾಗಿ ಶಾಲಾ ತರಗತಿಗಳು ಇರುವ ಸಂದರ್ಭದಲ್ಲಿ ತಮ್ಮ ಮಕ್ಕಳನ್ನು ಅಪ್ಪ, ಅಮ್ಮಂದಿರು ಹೆಗಲ ಮೇಲೆ ಹೊತ್ತುಕೊಂಡು ಎಂಟು ಕಿ.ಮೀ. ಬೆಟ್ಟ,ಗುಡ್ಡಗಳನ್ನು ಏರಿಳಿದು ಶಾಲೆಗೆ ಕಳುಹಿಸುವ ಪರಿಸ್ಥಿತಿಯಿಲ್ಲಿದೆ. ವೃದ್ಧರು, ಅನಾರೋಗ್ಯಕ್ಕೀಡಾದವರನ್ನಂತೂ ಹೊತ್ತುಕೊಂಡೇ ಸಾಗಬೇಕಿದೆ. ಕಳೆದ ಮೂರು ತಿಂಗಳ ಹಿಂದೆಯಷ್ಟೇ ಬಿ.ಬಿ.ಸರಸ್ವತಿ ಎಂಬವರ ಪತಿ ಬಾಬು ಎಂಬವರು ಅನಾರೋಗ್ಯಕ್ಕೀಡಾದ ಸಂದರ್ಭದಲ್ಲಿ ಅವರನ್ನು ಅಕ್ಕ ಪಕ್ಕದವರು ಸೇರಿ ಕಂಬಳಿಯಲ್ಲಿ ಸುತ್ತಿ ಆಸ್ಪತ್ರೆಗೆ ಸಾಗಿಸಿದ್ದು, ಆದರೂ ಅವರು ಚಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ನಡೆದಿದೆ.

ಬಂದು ಹೋದಾಗ ಮನೆಯಿಲ್ಲ..!

೨೦೧೮ರಿಂದೀಚೆಗೆ ಇಲ್ಲಿನ ನಿವಾಸಿಗಳಿಗೆ ವಲಸೆ ಹೋಗುವದೊಂದೇ ಕೆಲಸ. ಮಳೆಗಾಲ ಬಂತೆAದರೆ ಸಾಕು ಸರಕಾರದ ವತಿಯಿಂದ ಕಂದಾಯ ಇಲಾಖೆ ಮೂಲಕ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ನೋಟೀಸ್ ಬರುತ್ತದೆ. ವಿಧಿಯಿಲ್ಲದೆ ಭಯದೊಂದಿಗೆ ಬಂಧುಗಳ ಮನೆಗೋ, ಕಾಳಜಿ ಕೇಂದ್ರಕ್ಕೋ, ಅಥವಾ ಬಾಡಿಗೆ ಮನೆಗಳನ್ನು ಆಶ್ರಯಿಸಬೇಕಾಗುತ್ತದೆ. ಮೂರು ತಿಂಗಳ ಕಾಲ ಕಳೆದು ವಾಪಸ್ ಬರುವಷ್ಟರಲ್ಲಿ ಇಲ್ಲಿನ ಪರಿಸ್ಥಿತಿಯೇ ಬೇರೆಯಾಗಿರುತ್ತದೆ. ಕಳೆದೆರಡು ವರ್ಷ ಸಣ್ಣ ಪುಟ್ಟ ಹಾನಿಯೊಂದಿಗೆ ಶಿಥಿಲಗೊಂಡಿದ್ದ ಮನೆಗಳನ್ನು ಮತ್ತೆ ಸರಿಪಡಿಸಿಕೊಂಡು ವಾಸವಿದ್ದರು. ಆದರೆ, ಈ ಬಾರಿ ಮಳೆ ಜಾಸ್ತಿ ಇದ್ದುದರಿಂದ ವಾಪಸ್ ಬಂದು ನೋಡುವಾಗ ಎರಡು ಮನೆಗಳು ಕುಸಿದು ಬಿದ್ದಿರುವದು ಗೋಚರಿಸಿದೆ.

ಹೆಚ್.ಆರ್.ಆನಂದ ಹಾಗೂ ಕವಿತ ಮತ್ತು ಬಿ.ಬಿ.ಸರಸ್ವತಿ ಅವರಿಗೆ ಸೇರಿದ ಮನೆಯ ಒಂದು ಭಾಗ ಸಂಪೂರ್ಣ ಕುಸಿದು ಬಿದ್ದಿದೆ. ಈ ಇಬ್ಬರ ಮನೆಗಳು ೧೮ರಲ್ಲೇ ಬಿರುಕು ಬಿಟ್ಟಿದ್ದು, ಸಂತ್ರಸ್ತರ ಮೊದಲ ಪಟ್ಟಿಯಲ್ಲಿ(೨೮,೨೧೯) ಹೆಸರುಗಳಿದ್ದವು. ನಂತರದಲ್ಲಿ ಹೆಸರನ್ನು ಕೈಬಿಡಲಾಗಿದೆ. ಇದೀಗ ಮನೆ ಕುಸಿದಿದ್ದು, ಮತ್ತೆ ಸಂಕಷ್ಟ ಎದುರಾಗಿದೆ.

ಸಂಪೂರ್ಣ ಕುಸಿದರೂ ಮನೆಯಿಲ್ಲ..!

ಇಲ್ಲಿನ ನಿವಾಸಿ, ವೃದ್ಧೆ ಮೇರಿ ಜೇಮ್ಸ್ ಅವರಿಗೆ ಸೇರಿದ ಮನೆ ೧೮ರಲ್ಲಿ ಸಂಪೂರ್ಣ ನೆಲಕಚ್ಚಿದೆ. ಪರಿಹಾರ ಹಾಗೂ ಮನೆಗಾಗಿ ಎಲ್ಲ ದಾಖಲೆಗಳನ್ನು ಸಲ್ಲಿಸಿದ್ದರೂ ಇದುವರೆಗೂ ಮನೆ ಸಿಕ್ಕಿಲ್ಲ. ೧೮ರವರೆಗೆ ಮನೆ ಕಂದಾಯ ಕಟ್ಟಿಕೊಂಡು ಬರಲಾಗುತ್ತಿದ್ದು, ಇದೀಗ ಪಂಚಾಯ್ತಿಯಿAದ ಮನೆ ಇಲ್ಲದ ಕಾರಣ ಕಂದಾಯ ಕೂಡ ಕಟ್ಟಿಸಿಕೊಳ್ಳುತ್ತಿಲ್ಲ. ಇದು ಸರಕಾರದ ಸೌಲಭ್ಯ ಪಡೆದುಕೊಳ್ಳಲೂ ಕೂಡ ಕಷ್ಟವಾಗುತ್ತಿದೆ. ವಯಸ್ಸಾದ ಕಾಲದಲ್ಲಿ ಮನೆಗಾಗಿ ಅಲೆದಾಡಿ ಸಾಕಾಗಿ ಇದೀಗ ಮಗನ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.

ಇನ್ನೂ ಬಿ.ಎಸ್. ಶಾಂತಪ್ಪ, ಬಾಲಕೃಷ್ಣ, ಚಂದ್ರಶೇಖರ, ಫ್ರಾನ್ಸಿಸ್ ಸೇರಿದಂತೆ ಎಲ್ಲರ ಮನೆಗಳೂ ಅಪಾಯದ ಸ್ಥಿತಿಯಲ್ಲಿವೆ. ಮನೆಗಳ ಹಿಂದೆ, ಮುಂದೆ ಎಲ್ಲ ಬಿರುಕುಗಳು ಕಾಣಿಸಿಕೊಂಡಿದ್ದು, ಹೆದರಿಕೆಯಲ್ಲಿಯೇ ಜೀವನ ಸಾಗಿಸುವಂತಾಗಿದೆ.

ಮತ್ತೆ ಮನೆ ಮೇಲೆ ಕುಸಿತ..!

ಜಹಗೀರ್ ಪೈಸಾರಿಯ ಸ್ಥಿತಿ ಆ ರೀತಿಯದ್ದಾದರೆ, ಇತ್ತ ಹೆಮ್ಮೆತ್ತಾಳು ಗ್ರಾಮದ ಬೋರ್‌ವೆಲ್ ಪೈಸಾರಿಯ ಸ್ಥಿತಿ ಮತ್ತೊಂದು ರೀತಿಯದ್ದು. ಇಲ್ಲಿನ ನಿವಾಸಿ ಭಾಸ್ಕರ್ ಎಂಬವರ ಮನೆ ಮೇಲೆ ೧೮ರಲ್ಲಿ ಬರೆ ಜರಿದು ಮನೆ ಕುಸಿದು ಬಿದ್ದಿತ್ತು. ಸರಕಾರದ ಸಂತ್ರಸ್ತರ ಎರಡನೇ ಪಟ್ಟಿಯಲ್ಲಿ ಅವರ ಹೆಸರು ಕೂಡ ಇತ್ತು. ಆದರೆ ನಂತರದಲ್ಲಿ ಮಾಯವಾಗಿದೆ. ಹಾಗಾಗಿ ಅವರು ಮೈಸೂರಿನ ದಾನಿಗಳ ನೆರವಿನಿಂದ ಮನೆ ದುರಸ್ತಿಪಡಿಸಿಕೊಂಡು ಹೇಗೋ ವಾಸ ಮಾಡಿಕೊಂಡಿದ್ದರು. ಇದೀಗ ಈ ಬಾರಿಯ ಮಳೆಗೆ ಮತ್ತೆ ಬರೆ ಜರಿದಿದ್ದು, ಮನೆಯ ಗೋಡೆಗೆ ಹಾನಿಯಾಗುವದರೊಂದಿಗೆ ಮನೆಯೊಳಗಡೆ ನೀರು ತುಂಬಿಕೊAಡಿದೆ. ಬರೆ ಮತ್ತೆ ಮತ್ತೆ ಕುಸಿಯುತ್ತಿರುವದರಿಂದ ಆತಂಕಗೊAಡಿರುವ ಇವರು ಪುನರ್ವಸತಿಗಾಗಿ ಅಂಗಲಾಚುತ್ತಿದ್ದಾರೆ.

ಹೆಮ್ಮೆತ್ತಾಳುವಿನ ಉಷಾ ಜೀವನ್, ಗಂಗಾಧರ, ಬಿ.ಎಸ್.ಸುಂದರ, ರುಕ್ಮಯ್ಯ, ನಾಗೇಶ್, ಪ್ರಕಾಶ್, ಕೆ.ಎಸ್. ರಾಜು, ಇವರುಗಳು ಕೂಡ ಅಪಾಯದ ಭೀತಿಯಲ್ಲೇ ಜೀವನ ಸಾಗಿಸುತ್ತಿದ್ದು, ಪುನರ್ವಸತಿಗಾಗಿ ಕಾಯುತ್ತಿದ್ದಾರೆ.

ಉದಯಗಿರಿಯಲ್ಲೂ ಅಪಾಯ

ಉದಯಗಿರಿ ಗ್ರಾಮದಲ್ಲೂ ಕೂಡ ಇರುವ ಮನೆಗಳು ಅಪಾಯವನ್ನು ಎದುರಿಸುತ್ತಿವೆ. ಅಲ್ಲಿನ ನಿವಾಸಿಗಳಾದ ಗೀತಾ, ಈರಪ್ಪ, ಸೌಮ್ಯ ಗೋಪಾಲ ಅವರುಗಳ ಮನೆಗಳು ಅಪಾಯದ ಸ್ಥಿತಿಯಲ್ಲಿವೆ.

ಕಾಳಜಿ ಕೇಂದ್ರದಲ್ಲಿ ಆಸರೆ

ಸದ್ಯದ ಪರಿಸ್ಥಿತಿಯಲ್ಲಿ ಜಹಗೀರ್ ಪೈಸಾರಿ, ಹೆಮ್ಮೆತ್ತಾಳು ಹಾಗೂ ಉದಯಗಿರಿಯ ಅಪಾಯದಲ್ಲಿರುವ ಮಂದಿ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಗ್ರಾಮ ಪಂಚಾಯಿತಿ ಕಂದಾಯ ಇಲಾಖೆ ಮೂಲಕ ಇಲ್ಲಿನ ಪ್ರಾಥಮಿಕ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆದಿದ್ದು, ಅಲ್ಲಿ ಈ ಸಂತ್ರಸ್ತರು ಆಶ್ರಯ ಪಡೆದಿದ್ದಾರೆ.