ಮಡಿಕೇರಿ, ಜು. ೨೭: ಸಾಮಾಜಿಕ ಹೊಣೆಗಾರಿಕೆಯೊಂದಿಗೆ ನಾಯಕತ್ವ ಗುಣವನ್ನು ರೋಟರಿ ಸೇವಾ ಸಂಸ್ಥೆ ಕಲಿಸಿಕೊಡುತ್ತದೆ ಎಂದು ವಲಯ ೬ರ ಮಾಜಿ ಉಪರಾಜ್ಯಪಾಲ ಡಾ. ಸಿ.ಆರ್. ಪ್ರಶಾಂತ್ ಹೇಳಿದ್ದಾರೆ.
ವೀರಾಜಪೇಟೆ ರೋಟರಿ ಕ್ಲಬ್ನ ೫೧ನೇ ಅಧ್ಯಕ್ಷರಾಗಿ ಡಾ. ಮಾದಂಡ ಲವಿನ್ ಚಂಗಪ್ಪ ಮತ್ತು ಕಾರ್ಯದರ್ಶಿಯಾಗಿ ಭರತ್ ರಾಮ್ ರೈ ಅವರಿಗೆ ಪದಗ್ರಹಣ ನೆರವೇರಿಸಿ ಮಾತನಾಡಿದ ಡಾ. ಪ್ರಶಾಂತ್, ಕೋವಿಡ್ ಸವಾಲಿನ ದಿನಗಳಲ್ಲಿ ವೀರಾಜಪೇಟೆ ರೋಟರಿ ಹಲವು ಕಾರ್ಯಯೋಜನೆಗಳೊಂದಿಗೆ ಜನಸೇವೆಗೆ ಮುಂದಾಗಿರುವುದು ಶ್ಲಾಘನೀಯ ಎಂದರಲ್ಲದೇ, ಸಾಮಾಜಿಕ ಸೇವೆಗೆ ತನ್ನ ಸದಸ್ಯನನ್ನು ಅತ್ಯಂತ ಅಲ್ಪಕಾಲಾವಧಿಯಲ್ಲಿ ರೋಟರಿ ತರಬೇತಿ ಮೂಲಕ ತಯಾರು ಮಾಡುತ್ತದೆ ಎಂದರು.
ಸಮಯದ ನಿರ್ವಹಣೆ, ಆರ್ಥಿಕ ನಿರ್ವಹಣೆ, ಮಾನವ ಸಂಪನ್ಮೂಲಗಳ ಬಳಕೆಯು ರೋಟರಿಯಲ್ಲಿ ಕಲಿಯುವ ಅತ್ಯುತ್ತಮ ಅಂಶವಾಗಿದೆ ಎಂದು ಹೇಳಿದ ಪ್ರಶಾಂತ್, ಕೋವಿಡ್ ಲಾಕ್ಡೌನ್ನಿಂದಾಗಿ ಸಮಾಜದ ವಿವಿಧ ರಂಗಗಳ ಸಾಕಷ್ಟು ಮಂದಿ ಆರ್ಥಿಕವಾಗಿ ನಲುಗಿದ್ದಾರೆ. ಈ ಸಂದರ್ಭ ರೋಟರಿ ಸಂಸ್ಥೆಗಳು ವಿವಿಧ ಸಮುದಾಯಗಳಿಗಾಗಿ ಪರಿಣಾಮಕಾರಿ ಆರ್ಥಿಕ ನಿರ್ವಹಣೆಯ ತರಬೇತಿ ನೀಡಿದರೆ ಆರ್ಥಿಕ ಜಾಗೃತಿ ಮತ್ತು ಆರ್ಥಿಕವಾಗಿಯೂ ಚೇತರಿಕೆಗೆ ಸಹಾಯವಾಗಲಿದೆ ಎಂದು ಡಾ. ಪ್ರಶಾಂತ್ ರೋಟರಿ ಸಂಸ್ಥೆಯ ನಾಯಕರಿಗೆ ಸಲಹೆ ನೀಡಿದರು.
ರೋಟರಿ ವಲಯ ೬ ರ ಉಪರಾಜ್ಯಪಾಲ ಅನಿಲ್ ಎಚ್.ಟಿ. ರೋಟರಿಯ ವಾರ್ತಾ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿ, ವೀರಾಜಪೇಟೆ ರೋಟರಿ ತನ್ನ ೫೦ ನೇ ವರ್ಷಾಚರಣೆಯನ್ನು ಸಮಾಜದ ಜನರೊಂದಿಗೆ ಸಂಭ್ರಮದೊAದಿಗೆ ಆಚರಿಸಿಕೊಳ್ಳಲು ಕೋವಿಡ್ ದಿನಗಳು ತಡೆಯಾದವು. ಹೀಗಾಗಿ ಮುಂದಿನ ದಿನಗಳಲ್ಲಿ ೫೧ನೇ ವಾರ್ಷಿಕೋತ್ಸವವನ್ನು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ರೋಟರಿ ಸಂಸ್ಥೆ ಆಚರಿಸಿಕೊಳ್ಳು ವಂತಾಗಲಿ ಎಂದು ಸಲಹೆ ನೀಡಿದರು. ರೋಟರಿ ಜಿಲ್ಲೆಗೆ ಮೊದಲ ಗವರ್ನರ್ ಆಗಿ ಬಿ.ಎಂ. ಚಂಗಪ್ಪ ಅವರನ್ನು ನೀಡಿದ ವೀರಾಜಪೇಟೆ ರೋಟರಿ ಈ ಮೂಲಕ ತನ್ನ ಹೆಗ್ಗುರುತನ್ನು ಹೊಂದಿದೆ. ಮಹಿಳಾ ಸದಸ್ಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ರೋಟರಿಗೆ ಸೇರ್ಪಡೆಗೊಳಿಸುವುದೂ ಗುರಿಯಾಗಿರಲಿ ಎಂದು ಅನಿಲ್ ಹೇಳಿದರು. ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಡಾ. ಲವಿನ್ ಚಂಗಪ್ಪ, ರೋಟರಿ ಜಿಲ್ಲೆಯ ಹಿರಿಯ ಕ್ಲಬ್ನ ಸಾರಥ್ಯ ವಹಿಸಿರುವುದು ಹೆಮ್ಮೆ ತಂದಿದೆ. ಸಾಕಷ್ಟು ಹೊಣೆಗಾರಿಕೆ ಯಿಂದ ಈ ಹುದ್ದೆ ನಿಭಾಯಿಸುವೆ ಎಂದರಲ್ಲದೇ, ಸಂಸ್ಕಾರ್ ಎಂಬ ರೋಟರಿ ಜಿಲ್ಲಾ ಯೋಜನೆ ಮೂಲಕ ವೀರಾಜಪೇಟೆ ವ್ಯಾಪ್ತಿಯಲ್ಲಿ ರುದ್ರಭೂಮಿ ಅಭಿವೃದ್ಧಿ ಯೋಜನೆ, ಲಸಿಕಾ ಅಭಿಯಾನಕ್ಕೆ ಕೈಜೋಡಣೆ ಯಂತ ಅನೇಕ ಜನಪರ ಯೋಜನೆಗಳನ್ನು ಈ ರೋಟರಿ ವರ್ಷದಲ್ಲಿ ಜಾರಿಗೊಳಿಸಲಾಗುತ್ತದೆ ಎಂದರು.
ವಲಯ ಕಾರ್ಯದರ್ಶಿ ಹೆಚ್.ಎಸ್. ವಸಂತ್ಕುಮಾರ್, ವಲಯ ಸೇನಾನಿ ಆದಿತ್ಯ, ನಿರ್ಗಮಿತ ಅಧ್ಯಕ್ಷ ಮುಕ್ಕಾಟೀರ ಬನ್ಸಿ ಪೂವಣ್ಣ ಮಾತನಾಡಿದರು. ವೀರಾಜಪೇಟೆ ರೋಟರಿ ಸಂಸ್ಥೆಯ ನೂತನ ಕಾರ್ಯದರ್ಶಿ ಭರತ್ ರಾಮ್ ರೈ ವಂದಿಸಿದರು. ಇದೇ ಸಂದರ್ಭ ರೋಟರಿ ವಲಯ ೬ರ ಪರವಾಗಿ ಚಿಟ್ಟೆಗಳ ವಿಶಿಷ್ಟ ಛಾಯಾಗ್ರಾಹಣಕ್ಕಾಗಿ ಮುಕ್ಕಾಟೀರ ಡೀನಾ ಪೂವಣ್ಣ ಮತ್ತು ಕೋವಿಡ್ ಆಸ್ಪತ್ರೆಯಲ್ಲಿ ಕಳಕಳಿಯ ಕರ್ತವ್ಯ ನಿರ್ವಹಣೆಗಾಗಿ ಡಾ. ಮಾದಂಡ ಪ್ರಿಯದರ್ಶಿನಿ ಅವರನ್ನು ಗೌರವಿಸಲಾಯಿತು.