*ಗೋಣಿಕೊಪ್ಪ, ಜು. ೨೬ ರಾಜ್ಯದ ಮುಖ್ಯಮಂತ್ರಿ ಬದಲಾವಣೆಯಾದರೂ ಬಿಜೆಪಿ ಸರ್ಕಾರದ ಆಡಳಿತ ಮೂರು ವರ್ಷಗಳು ನಡೆಯಲಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಅವರು ಹೇಳಿದರು.

ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ೬೬ ಲಕ್ಷದಲ್ಲಿ ಅಭಿವೃದ್ಧಿಗೊಂಡ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು.

ಪಕ್ಷದ ವರಿಷ್ಠರ ತೀರ್ಮಾನಕ್ಕೆ ಬದ್ದರಾಗಿ ಮುಖ್ಯಮಂತ್ರಿ ಯಡಿಯೂರಪ್ಪನವರು ಸ್ವಯಂ ರಾಜೀನಾಮೆ ನೀಡಿದ್ದಾರೆ. ಹೈಕಮಾಂಡ್ ನಿರ್ಧಾರದಂತೆ ಮುಂದಿನ ಮುಖ್ಯಮಂತ್ರಿಯ ಸೂಕ್ತ ಆಯ್ಕೆ ಮತ್ತು ಘೋಷಣೆಯಾಗಲಿದೆ. ಜನರ ನಿರೀಕ್ಷೆಯಂತೆ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಭಿವೃದ್ಧಿಯ ಆಡಳಿತ ನಡೆಸಲಿದೆ ಎಂದು ತಿಳಿಸಿದ್ದಾರೆ.

ಕೊರೊನಾ ಸಂಕಷ್ಟ ಕಾಲದಲ್ಲಿ ಬಿಜೆಪಿ ಸರ್ಕಾರ ಅಭಿವೃದ್ಧಿ ಕಾರ್ಯಗಳತ್ತ ತೊಡಗಿಸಿಕೊಂಡಿದೆ. ಈ ನಿಟ್ಟಿನಲ್ಲಿ ನಿಟ್ಟೂರು ಪಂಚಾಯಿತಿ ವ್ಯಾಪ್ತಿಯ ಬುಡಕಟ್ಟು ಸಮುದಾಯದವರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಕುಡಿಯುವ ನೀರು, ರಸ್ತೆ, ವಿದ್ಯುತ್ ಸಂಪರ್ಕ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಿಕೊಡುವಲ್ಲಿ ಮುಂಚೂಣಿ ಪಾತ್ರವಹಿಸಿದೆ. ಮೊದಲ ಬಾರಿಗೆ ಬಿಜೆಪಿ ಆಡಳಿತ ಕಂಡ ನಿಟ್ಟೂರು ಪಂಚಾಯಿತಿಯಲ್ಲಿ ರೂ. ೨ ಕೋಟಿ ೩೦ ಲಕ್ಷ ಅನುದಾನವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಂಡಿದೆ ಎಂದು ಹೇಳಿದರು.

ನಿಟ್ಟೂರು ಗ್ರಾ.ಪಂ. ಅಧ್ಯಕ್ಷ ಚಕ್ಕೇರ ಸೂರ್ಯ ಅಯ್ಯಪ್ಪ ಮಾತನಾಡಿ ಶಾಸಕ ಕೆ.ಜಿ. ಬೋಪಯ್ಯ ಅವರ ಸಹಕಾರದೊಂದಿಗೆ ಗ್ರಾಮದ ಅಭಿವೃದ್ಧಿಯಲ್ಲಿ ತೊಡಗಿಸಿ ಕೊಂಡಿದ್ದೇವೆ. ಹಂತಹAತವಾಗಿ ಪಂಚಾಯಿತಿ ವ್ಯಾಪ್ತಿಯ ಸಮಸ್ಯೆಗಳನ್ನು ನಿಭಾಯಿಸುವ ಕನಸು ಹೊತ್ತಿದ್ದು, ಪರಿಶಿಷ್ಟ ಪಂಗಡ ಮತ್ತು ಜಾತಿಯವರ ಏಳಿಗೆಗಾಗಿ ಪಂಚಾಯಿತಿ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗುತ್ತಿದೆ. ಕುಡಿಯುವ ನೀರು, ರಸ್ತೆ, ವಿದ್ಯುತ್, ಸೋಲಾರ್ ಬೆಳಕಿನಿಂದ ಗ್ರಾಮವನ್ನು ಸ್ವಚ್ಛ ಮತ್ತು ಮಾದರಿ ಗ್ರಾಮವಾಗಿ ಮಾಡುವ ನಿಟ್ಟಿನಲ್ಲಿ ಸರ್ವ ಸದಸ್ಯರ ದಿಟ್ಟ ನಿರ್ಧಾರವನ್ನು ಹೊಂದಿದ್ದೇವೆ ಎಂದು ಹೇಳಿದರು.

ನಿಟ್ಟೂರು ಶಕ್ತಿ ಕೇಂದ್ರದ ಪ್ರಮುಖ್ ಕಾಟಿಮಾಡ ಶರೀನ್ ಮುತ್ತಣ್ಣ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ, ಆನೆ ಹಾವಳಿ ನಿಯಂತ್ರಣಕ್ಕೆ ಸೋಲಾರ್ ತಂತಿ ಬೇಲಿ, ಸಿಮೆಂಟ್ ರಸ್ತೆ, ವಿದ್ಯುತ್ ಸಂಪರ್ಕಕ್ಕಾಗಿ ಬುಡಕಟ್ಟು ಸಮುದಾಯ ನಿವಾಸಿಗಳ ಮತ್ತು ಗ್ರಾಮ ವ್ಯಾಪ್ತಿಯಲ್ಲಿ ೧೫೦ಕ್ಕೂ ಹೆಚ್ಚು ಕಂಬಗಳ ಅಳವಡಿಕೆ ಸೇರಿದಂತೆ ಹಲವು ಅಭಿವೃದ್ಧಿಗಳನ್ನು ಕಾರ್ಯಗತ ಗೊಳಿಸಲಾಗಿದೆ ಎಂದು ವಿವರಿಸಿದರು.

ರೂ. ೬೦ ಲಕ್ಷ ಅನುದಾನದಲ್ಲಿ ನಿರ್ಮಾಣವಾದ ೨ ಕಿ.ಮೀ. ವ್ಯಾಪ್ತಿಯ ಕಾರ್ಮಾಡು, ಬೆಂಡೆಗುತ್ತಿ, ತಟ್ಟೆಕೆರೆ, ಕುಂಬಾರಕಟ್ಟೆ, ಪಾಲದಳ, ಮಲ್ಲೂರು ಸಂಪರ್ಕ ರಸ್ತೆಗೆ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಕೊಣಿಯಂಡ ಅಪ್ಪಣ್ಣ, ಜಿ.ಪಂ. ಇಂಜಿನಿಯರ್ ಮಹಾದೇವ್, ನಾಗರಹೊಳೆ ವಲಯ ಅರಣ್ಯಾಧಿಕಾರಿ ಗೋಪಾಲ್, ಪರಿಶಿಷ್ಟ ವರ್ಗದ ಕಲ್ಯಾಣಾಧಿಕಾರಿ ಗುರುಶಾಂತಪ್ಪ, ನಿಟ್ಟೂರು ಗ್ರಾ.ಪಂ. ಅಧ್ಯಕ್ಷ ಚಕ್ಕೇರ ಸೂರ್ಯ, ಗ್ರಾಮದ ಪ್ರಮುಖರ ಸಮ್ಮುಖದಲ್ಲಿ ಶಾಸಕರು ಚಾಲನೆ ನೀಡಿದರು.

ರೂ. ೬,೮೪,೮೭೮ ರೂಪಾಯಿ ಅನುದಾನದಲ್ಲಿ ನಿಟ್ಟೂರು ಗ್ರಾ.ಪಂ. ನೂತನ ಸಭಾಂಗಣವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.

ಸ್ವಚ್ಛ ಭಾರತ್ ಅಭಿಯಾನದಲ್ಲಿ ಗ್ರಾಮವನ್ನು ಸ್ವಚ್ಛವಾಗಿರಿಸಲು ಪಂಚಾಯಿತಿ ವ್ಯಾಪ್ತಿಯ ೩ ಗ್ರಾಮಗಳಲ್ಲಿ ಸುಮಾರು ೩೨ಕ್ಕೂ ಹೆಚ್ಚು ಕಸದ ಬುಟ್ಟಿಗಳ ಅಳವಡಿಕೆ ಮತ್ತು ಕಸ ಸಂಗ್ರಹ ಘಟಕಕ್ಕೆ ಶಾಸಕರು ಚಾಲನೆ ನೀಡಿದರು.

ಪರಿಶಿಷ್ಟ ಪಂಗಡ ವರ್ಗದವರ ಸುಮಾರು ೪೩ ಕುಟುಂಬಗಳಿಗೆ ತಾಲೂಕು ಪರಿಶಿಷ್ಟ ಕಲ್ಯಾಣ ಇಲಾಖೆ ಅಧಿಕಾರಿ ಗುರುಶಾಂತಪ್ಪ ಅವರ ಮುಂದಾಳತ್ವದಲ್ಲಿ ಜಾತಿ ಹಾಗೂ ಆದಾಯ ದೃಢೀಕರಣ ಪತ್ರವನ್ನು ವಿತರಿಸಲಾಯಿತು.

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಬುಡಕಟ್ಟು ಜನರಿಗೆ ಬಾಲ್ಯವಿವಾಹ ಪದ್ಧತಿ, ದೂಮಪಾನ, ಮದ್ಯಪಾನ ಹಾಗೂ ಇತರ ದುಶ್ಚಟಗಳಿಗೆ ಬಲಿಯಾಗದಂತೆ ಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ಮತ್ತು ಈ ಸಂದರ್ಭ ಆಶಾ ಕಾರ್ಯಕರ್ತರಿಗೆ ವೈದ್ಯಕೀಯ ಕಿಟ್‌ಗಳನ್ನು ವಿತರಿಸಲಾಯಿತು.

ಗ್ರಾ.ಪಂ. ಉಪಾಧ್ಯಕ್ಷ ಪಡಿಞರಂಡ ಕವಿತಪ್ರಭು, ಸದಸ್ಯರುಗಳಾದ ಕಾಟಿಮಾಡ ಶರೀನ್ ಮುತ್ತಣ್ಣ, ಅಳಮೇಂಗಡ ಆರ್. ಪವಿತಾ, ಟಿ.ಆರ್. ಅಮ್ಮುಣ್ಣಿ, ಎ. ಅಮ್ಮಯ್ಯ, ಪಣಿಯರ ರಾಜು, ಜೆ.ಕೆ. ವಾಸು, ಜೆ.ಎ. ಸುಮತಿ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಮನ್‌ಮೋಹನ್, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಗುರುಶಾಂತಪ್ಪ, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಕೊಣಿಯಂಡ ಅಪ್ಪಣ್ಣ, ನಾಗರಹೊಳೆ ವನ್ಯಜೀವಿ ವಲಯ ಅರಣ್ಯಾಧಿಕಾರಿ ಗೋಪಾಲ್, ಆರ್.ಎಂ.ಸಿ. ಸದಸ್ಯ ಮಾಚಂಗಡ ಸುಜಾಪೂಣಚ್ಚ, ಆದೇಂಗಡ ವಿನು, ರಾಜ್ಯ ಕೃಷಿ ಮಹಿಳಾ ಮೋರ್ಚ ಕಾರ್ಯಕಾರಿಣಿ ಸದಸ್ಯೆ ಮಾಪಂಗಡ ಯಮುನಾ ಚಂಗಪ್ಪ, ಬಾಳೆಲೆ ವಿಜಯಲಕ್ಷಿ÷್ಮ ಪದವಿಪೂರ್ವ ಕಾಲೇಜಿನ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ಉಪಸ್ಥಿತರಿದ್ದರು.