ವೀರಾಜಪೇಟೆ, ಜು. ೨೬: ವೀರಾಜಪೇಟೆ ತಾಲೂಕು ಕೆದಮುಳ್ಳೂರು ಗ್ರಾಮ ಪಂಚಾಯಿತಿ ವತಿಯಿಂದ ಕೆದಮುಳ್ಳೂರು ವ್ಯಾಪ್ತಿಯ ಬಾರಿಕಾಡು ನಿರಾಶ್ರಿತರ ಕಾಲೋನಿಯಲ್ಲಿ ಶೆಡ್‌ಗಳಲ್ಲಿ ವಾಸ ಮಾಡುವ ಪರಿಶಿಷ್ಟ ಪಂಗಡ ಕುಟುಂಬಗಳಿಗೆ ಪರಿಶಿಷ್ಟ ಪಂಗಡ ಅಭಿವೃದ್ಧಿ ಇಲಾಖೆಯಿಂದ ಪ್ಲಾಸ್ಟಿಕ್ ಹೊದಿಕೆಗಳನ್ನು ವಿತರಿಸಲಾಯಿತು. ಈ ಸಂದರ್ಭ ಮಾತನಾಡಿದ ಕೆದಮುಳ್ಳೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪಿ.ಕೆ. ಪ್ರಮೋದ್ ಈ ಸ್ಥಳದಲ್ಲಿ ಒಟ್ಟು ೫೯ ಕುಟುಂಬಗಳಿದ್ದು, ಐ.ಟಿ.ಡಿ.ಪಿ. ಇಲಾಖೆ ವತಿಯಿಂದ ಮಳೆಗಾಲದಲ್ಲಿ ಉಪಯುಕ್ತವಾಗಲೆಂದು ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಾಣ ಮಾಡಿಕೊಂಡು ಜೀವನ ಸಾಗಿಸುವ ಕುಟುಂಬಗಳಿಗೆ ಮೇಲ್ಛಾವಣಿಯಿಂದ ಮಳೆ ನೀರು ಸೋರಿಕೆಯನ್ನು ತಡೆಗಟ್ಟುವ ಸಲುವಾಗಿ ಪ್ಲಾಸ್ಟಿಕ್ ಹೊದಿಕೆಗಳನ್ನು ವಿತರಿಸಲಾಗಿದೆ. ವಾಸ ಮಾಡುವ ಪ್ರತಿಯೊಬ್ಬರೂ ಇದರ ಉಪಯೋಗ ಮಾಡಿಕೊಳ್ಳಬೇಕು ಎಂದರು.

ಈ ಸಂದರ್ಭ ಐ.ಟಿ.ಡಿ.ಪಿ. ಇಲಾಖೆಯ ಸಿಬ್ಬಂದಿಗಳಾದ ವೆಂಕಟಮೂರ್ತಿ, ಪೂರ್ಣಿಮ ಬಿ.ಎಸ್., ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಡಿಕೇರಿಯಂಡ ಶೀಲಾ ಮೇದಪ್ಪ, ಉಪಾಧ್ಯಕ್ಷೆ ಎಂ.ಬಿ. ಮೀನಾಕ್ಷಿ, ಸದಸ್ಯರಾದ ವಿಮಲ, ಎಂ. ಸಾಬಾ ಮುತ್ತಪ್ಪ, ಎಂ. ಪ್ರಶಾಂತ್ ಉತ್ತಪ್ಪ, ಎಂ.ಎ. ಪರಮೇಶ್ವರ, ತಾಯಮ್ಮ ಕೆ. ಹಾಗೂ ಗ್ರಾಮಸ್ಥರು ಹಾಜರಿದ್ದರು.

ಕೆದಮಳ್ಳೂರು ಗ್ರಾಮ ಪಂಚಾಯಿತಿ ವತಿಯಿಂದ ಕೆದಮುಳ್ಳೂರು-ತೋಮರ ಗ್ರಾಮದ ಸಮುದಾಯ ಭವನದಲ್ಲಿ ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ಗ್ರಾಮಸ್ಥರಿಗೆ ಹಸಿ ಕಸವನ್ನು ಸಂಗ್ರಹಿಸಲು ಕಸದ ಬುಟ್ಟಿ ಮತ್ತು ಬಟ್ಟೆ ಬ್ಯಾಗ್‌ಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.

ಗ್ರಾಮ ಪಂಚಾಯಿತಿ ಪಿ.ಡಿ.ಓ. ಪ್ರಮೋದ್ ಮಾತನಾಡಿ, ಈಗಾಗಲೇ ಪಂಚಾಯಿತಿ ವ್ಯಾಪ್ತಿಯ ಬಾರಿಕಾಡ್ ಎಂಬಲ್ಲಿ ಕಸ ವಿಂಗಡಣೆ ಮಾಡುವ ಸುಸಜ್ಜಿತವಾದ ರೂ. ೧೦ ಲಕ್ಷ ವೆಚ್ಚದಲ್ಲಿ ಘಟಕ ನಿರ್ಮಾಣವಾಗಿದೆ. ಅಲ್ಲದೆ ಮನೆಮನೆಯಿಂದ ಕಸವನ್ನು ಸಂಗ್ರಹಿಸಲು ವಿಶೇಷ ಅನುದಾನದಲ್ಲಿ ಸ್ವಚ್ಛ ವಾಹಿನಿ ವಾಹನವು ಕಾರ್ಯಾರಂಭಿಸಿದೆ. ಸ್ವಚ್ಛ ಭಾರತದ ಅಭಿಯಾನದ ಭಾಗವಾಗಿ ಮನೆಯ ಒಣ ಕಸ ಸಂಗ್ರಹಿಸಲು ಬುಟ್ಟಿಗಳನ್ನು ವಿತರಿಸಿದ್ದೇವೆ. ಗ್ರಾಮಸ್ಥರು ಕಸವನ್ನು ಮನೆಯಿಂದ ವಿಲೇವಾರಿ ಮಾಡಿ ಒಣ ಕಸವನ್ನು ಬುಟ್ಟಿಯಲ್ಲಿ ಹಾಕಬೇಕಿದೆ ಅಲ್ಲದೆ ದಿನನಿತ್ಯ ಬಳಕೆಗಾಗಿ ಪ್ಲಾಸ್ಟಿಕ್ ಕೈಚೀಲವನ್ನು ತ್ಯಜಿಸಿ ತಮಗೆ ನೀಡಿರುವ ಬಟ್ಟೆ ಚೀಲವನ್ನು ಉಪಯೋಗಿಸುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಡಿಕೇರಿಯಂಡ ಶೀಲಾ ಮೇದಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಎಂ.ಬಿ. ಮೀನಾಕ್ಷಿ, ತೋಮರ ವಾರ್ಡ್ನ ಜಯಂತಿ ಪಿ.ಜೆ., ಕೆ.ಎಂ. ರಾಮಯ್ಯ, ಸಾಬಾ ಮುತ್ತಪ್ಪ ಮತ್ತು ವಿಮಲ ಹಾಜರಿದ್ದರು.