ಪAಚಾಯಿತಿ ಅಧ್ಯಕ್ಷ-ಸದಸ್ಯರಿಂದ ದೂರು
ಮಡಿಕೇರಿ, ಜು. ೨೫: ಕೋವಿಡ್ ಸೋಂಕಿನ ಸಂದಿಗ್ಧ ಪರಿಸ್ಥಿತಿಯ ನಡುವೆಯೂ ಮೇಕೇರಿ ಆರೋಗ್ಯ ಕೇಂದ್ರ ಇದ್ದೂ ಇಲ್ಲದಂತ್ತಾಗಿದ್ದು, ಅನಾರೋಗ್ಯ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ಮೇಕೇರಿ ಗ್ರಾ.ಪಂ. ಪ್ರತಿನಿಧಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರ್ತವ್ಯಲೋಪ ಎಸಗುತ್ತಿರುವ ಇಲ್ಲಿನ ಶುಶ್ರೂಷಕಿಯನ್ನು ತಕ್ಷಣ ವರ್ಗಾವಣೆ ಮಾಡದಿದ್ದಲ್ಲಿ ಆರೋಗ್ಯ ಕೇಂದ್ರಕ್ಕೆ ಬೀಗ ಜಡಿಯುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮೋಹನ್ ಅವರಿಗೆ ಮನವಿ ಸಲ್ಲಿಸಿದ ಗ್ರಾ.ಪಂ. ಅಧ್ಯಕ್ಷ ಬಿ.ಬಿ. ದಿನೇಶ್ ಹಾಗೂ ಸದಸ್ಯರುಗಳು ಆರೋಗ್ಯ ಕೇಂದ್ರದ ಅವ್ಯವಸ್ಥೆಗಳ ಬಗ್ಗೆ ವಿವರಿಸಿದರು.
ಕರ್ತವ್ಯಕ್ಕೆ ನಿಯೋಜನೆಗೊಳ್ಳುವ ಶುಶ್ರೂಷಕಿಯರು ಆರೋಗ್ಯ ಕೇಂದ್ರದ ಪಕ್ಕದಲ್ಲೇ ವಾಸವಿರಬೇಕೆನ್ನುವ ನಿಯಮವಿದೆ. ಆದರೆ ಕಳೆದ ಎರಡು ವರ್ಷಗಳಿಂದ ಮೇಕೇರಿ ಆರೋಗ್ಯ ಕೇಂದ್ರದ ಶುಶ್ರೂಷಕಿ ಇಲ್ಲಿ ವಾಸವಾಗಿಲ್ಲ. ಸರ್ಕಾರ ನೀಡಿರುವ ಮನೆಯಲ್ಲಿ ಶುಶ್ರೂಷಕಿಯ ತಮ್ಮ ವಾಸವಿದ್ದು, ಆರೋಗ್ಯ ಕೇಂದ್ರವನ್ನು ಬಾರ್ನಂತೆ ಪರಿವರ್ತಿಸಿಕೊಂಡಿದ್ದಾರೆ. ಅಲ್ಲದೆ ಗ್ರಾಮಸ್ಥರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮೇಕೇರಿ ಸರ್ಕಾರಿ ಶಾಲೆಯಲ್ಲಿ ಜು. ೨೩ ರಂದು ನಡೆದ ಕೋವಿಡ್ ಲಸಿಕಾ ಅಭಿಯಾನಕ್ಕೆ ಸಮಯಕ್ಕೆ ಸರಿಯಾಗಿ ಹಾಜರಾಗದ ಶುಶ್ರೂಷಕಿ ಕರ್ತವ್ಯ ಲೋಪವೆಸಗಿದ್ದಾರೆ. ಈ ಬಗ್ಗೆ ಪಂಚಾಯಿತಿ ಸದಸ್ಯರು ಪ್ರಶ್ನಿಸಿದಾಗ ನನಗೆ ಮಾಹಿತಿ ಇಲ್ಲವೆಂದು ಉಡಾಫೆ ಉತ್ತರ ನೀಡಿದ್ದಾರೆ ಎಂದು ಅವರು ದೂರಿದರು.
ಆರೋಗ್ಯ ಕೇಂದ್ರದ ಸುತ್ತ ಅಶುಚಿತ್ವದ ವಾತಾವರಣವಿದ್ದು, ಗಿಡಗಂಟಿಗಳು ಬೆಳೆದು ಅನಾರೋಗ್ಯ ಕೇಂದ್ರದAತೆ ಆತಂಕವನ್ನು ಮೂಡಿಸುತ್ತಿದೆ. ತಕ್ಷಣ ಇಲ್ಲಿನ ಶುಶ್ರೂಷಕಿಯನ್ನು ವರ್ಗಾವಣೆಗೊಳಿಸಬೇಕು ಮತ್ತು ಗ್ರಾಮಸ್ಥರಿಗೆ ಸ್ಪಂದಿಸುವ ಶುಶ್ರೂಷಕಿಯನ್ನು ನೇಮಕ ಮಾಡಬೇಕೆಂದು ಗ್ರಾ.ಪಂ. ಪ್ರತಿನಿಧಿಗಳು ಒತ್ತಾಯಿಸಿದರು.
ಮುಂದಿನ ಒಂದು ವಾರದೊಳಗಾಗಿ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಗ್ರಾಮಸ್ಥರು ಹಾಗೂ ಪಂಚಾಯಿತಿ ಸದಸ್ಯರು ಒಗ್ಗೂಡಿ ಆರೋಗ್ಯ ಕೇಂದ್ರಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸುವುದಾಗಿ ಅಧ್ಯಕ್ಷ ಬಿ.ಬಿ. ದಿನೇಶ್ ಎಚ್ಚರಿಕೆ ನೀಡಿದರು.
ಮೇಕೇರಿ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಎಂ.ಯು. ಹನೀಫ್, ಸುಶೀಲಾ ಮಧು ಹಾಗೂ ಸರ್ವ ಸದಸ್ಯರು ಸೇರಿದಂತೆ ಸಿಬ್ಬಂದಿ ಟಿ.ಎಂ. ಶ್ರೇಯಸ್ ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು.