ಗೋಣಿಕೊಪ್ಪಲು, ಜು. ೨೪: ಶ್ರೀಮಂಗಲ ಗ್ರಾಮ ಪಂಚಾಯತಿ ವ್ಯಾಪ್ತಿಯ ರೈತರ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿದ್ದ ೮ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆ ಯಶಸ್ವಿಯಾಗಿ ನಡೆಯಿತು.

ಮುಂಜಾನೆ ೯ ಗಂಟೆಗೆ ಕುರ್ಚಿ ಗ್ರಾಮದ ಕೋಣೇರಿರ ಜಯ ಚಂಗಪ್ಪನವರ ಕಾಫಿ ತೋಟದಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳ ಗುಂಪನ್ನು ಪತ್ತೆ ಹಚ್ಚಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಸ್ಥಳೀಯ ಗ್ರಾಮಸ್ಥರು ಒಟ್ಟಾಗಿ ಕಾಡಾನೆಗಳನ್ನು ಓಡಿಸುವ ಕಾರ್ಯ ಆರಂಭಿಸಿದರು. ಕಾಡಾನೆಗಳ ಗುಂಪನ್ನು ಪತ್ತೆ ಹಚ್ಚಿದ ಅರಣ್ಯ ಇಲಾಖೆ ಕಾಕೂರು ಭಾಗದಿಂದ ಕಾಯಿಮಾನಿ, ತೈಲ, ಮಂಚಳ್ಳಿ ಮಾರ್ಗದಲ್ಲಿ ಸಂಚರಿಸಿ ಬ್ರಹ್ಮಗಿರಿ ಬೆಟ್ಟ ಸಾಲಿನ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ಕೈಗೊಂಡಿತು.

ಗಾಳಿಯಲ್ಲಿ ಗುಂಡು, ಪಟಾಕಿ ಸಿಡಿಸಿ ಕಾಡಾನೆಗಳ ಹಿಂಡನ್ನು ಓಡಿಸುವ ಪ್ರಯತ್ನ ಮಾಡಲಾಯಿತು. ಬೆಟ್ಟ ಪ್ರದೇಶದ ಕೆಳಗೆ ಕಾಡಾನೆಗಳು ಇಳಿಯಲು ಹಿಂದೇಟು ಹಾಕಿದವು. ಈ ಸಂದರ್ಭ ಸಿಬ್ಬಂದಿಗಳು ಕೆಲಕಾಲ ಗಾಬರಿಗೊಂಡು ಮುಂದಾಗಬಹುದಾಗಿದ್ದ ಅಪಾಯವನ್ನು ಗಮನಿಸಿ ಎಚ್ಚರಿಕೆ ವಹಿಸಿದರು. ಒಂದೇ ಸಮನೆ ಪಟಾಕಿ, ಸಿಡಿಗುಂಡು ಸಿಡಿಸಿ ಬೆಟ್ಟದ ಸಾಲಿನಿಂದ ಕೆಳಗೆ ಇಳಿಸುವಲ್ಲಿ ಯಶಸ್ವಿಯಾದರು.

ಸಂಜೆಯ ವೇಳೆ ಮತ್ತೆ ಕಾರ್ಯಾಚರಣೆ ಆರಂಭಿಸಿದ ಅರಣ್ಯ ಇಲಾಖೆಯ ಆರ್.ಆರ್.ಟಿ. ತಂಡದ ಸದಸ್ಯರು ಸೇರಿದಂತೆ ೨೦ ಅಧಿಕ ಅರಣ್ಯ ಸಿಬ್ಬಂದಿಗಳು, ಶ್ರೀಮಂಗಲ ವಲಯ ಅರಣ್ಯ ಅಧಿಕಾರಿ ವೀರೇಂದ್ರರವರ ಸೂಚನೆ ಮೇರೆ ನಾಗರಹೊಳೆ ರಾಷ್ಟಿçÃಯ ಉದ್ಯಾನದತ್ತ ಅಟ್ಟುವಲ್ಲಿ ಯಶಸ್ವಿಯಾದರು.

ಕಳೆದ ಕೆಲವು ದಿನಗಳಿಂದ ಕಾಡಾನೆಗಳ ಹಿಂಡು ಸುತ್ತಮುತ್ತಲಿನ ಪ್ರದೇಶದ ಕಾಡು, ರೈತರ ಗದ್ದೆ ಹಾಗೂ ಕಾಫಿ ತೋಟದಲ್ಲಿ ನೆಲೆನಿಂತು ನಾಗರಿಕರನ್ನು ಭಯಭೀತಗೊಳಿಸುವುದಲ್ಲದೇ ರೈತರ ಕಾಫಿ, ಬಾಳೆ ಸೇರಿದಂತೆ ಸ್ಪಿçಂಕ್ಲರ್ ಪೈಪು, ಮೋಟಾರುಗಳನ್ನು ಧ್ವ್ವಂಸ ಮಾಡಿದ್ದವು.

ಈ ಬಗ್ಗೆ ‘ಶಕ್ತಿ’ ವರದಿ ಮೂಲಕ ರೈತರು ಕಾಡಾನೆಗಳಿಂದ ಎದುರಿಸುತ್ತಿರುವ ಸಮಸ್ಯೆಗಳನ್ನು ಪ್ರಕಟಿಸಿತ್ತು. ವರದಿಯ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಆರ್.ಆರ್.ಟಿ. ತಂಡ ಒಟ್ಟಾಗಿ ಕಾರ್ಯಾಚರಣೆ ನಡೆಸಿ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಪ್ರಯತ್ನ ಮಾಡಿದರು.

ಕಾಡಾನೆಗಳ ಕಾರ್ಯಾಚರಣೆ ವೇಳೆ ಮುಖ್ಯ ರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರವನ್ನು ತಡೆಹಿಡಿಯಲಾಗಿತ್ತು. - ಹೆಚ್.ಕೆ. ಜಗದೀಶ್