ಸೋಮವಾರಪೇಟೆ, ಜು. ೨೨: ಇಲ್ಲಿನ ತಾಲೂಕು ಕಚೇರಿಯ ಒಳಭಾಗ ದಲ್ಲಿ ಇಟ್ಟಿದ್ದ ಕಟ್ಟಡ ನಿರ್ಮಾಣ ಯಂತ್ರೋಪಕರಣಗಳನ್ನು ಕಳವು ಮಾಡಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ. ಮಳೆಹಾನಿ ಪರಿಹಾರ ನಿಧಿಯಡಿ ಸೋಮವಾರಪೇಟೆ ತಾಲೂಕು ಕಚೇರಿಯ ನವೀಕರಣ ಕಾಮಗಾರಿ ಪ್ರಗತಿಯಲ್ಲಿದ್ದು, ಹಲವಷ್ಟು ಯಂತ್ರಗಳನ್ನು ಕೆಲಸಕ್ಕೆ ಬಳಸಿಕೊಳ್ಳ ಲಾಗುತ್ತಿದೆ. ಸಂಜೆಯಾಗುತ್ತಲೇ ಈ ಯಂತ್ರಗಳನ್ನು ತಾಲೂಕು ಕಚೇರಿಯ ಒಳಭಾಗದಲ್ಲಿರುವ ಸಣ್ಣ ಕೊಠಡಿಯಲ್ಲಿ ಇಡಲಾಗುತ್ತಿತ್ತು.

ಅಂತೆಯೇ ನಿನ್ನೆ ದಿನ ೨ ಡ್ರಿಲ್ಲಿಂಗ್ ಯಂತ್ರ, ಕಬ್ಬಿಣ ತುಂಡರಿಸು ವ ಯಂತ್ರಗಳು ೨, ವೆಲ್ಡಿಂಗ್ ಯಂತ್ರ ೧, ಲಿಫ್ಟಿಂಗ್, ವುಡ್ ಕಟ್ಟಿಂಗ್ ಯಂತ್ರಗಳನ್ನು ಕೊಠಡಿಯಲ್ಲಿಟ್ಟು, ಹೊರಗಿನಿಂದ ಬೀಗ ಹಾಕಲಾಗಿತ್ತು. ರಾತ್ರಿ ವೇಳೆ ತಾಲೂಕು ಕಚೇರಿಗೆ ಆಗಮಿಸಿರುವ ಕಳ್ಳರು ಕೊಠಡಿಯ ಬೀಗವನ್ನು ತುಂಡರಿಸಿ ಎಲ್ಲಾ ಯಂತ್ರಗಳನ್ನು ಕಳವು ಮಾಡಿದ್ದಾರೆ.

ಈ ಬಗ್ಗೆ ಗುತ್ತಿಗೆದಾರ ಚೇತನ್ ಅವರು ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸುಮಾರು ೨ ಲಕ್ಷ ಮೌಲ್ಯದ ಯಂತ್ರಗಳು ಕಳುವಾಗಿರುವ ಬಗ್ಗೆ ತಿಳಿಸಿದ್ದಾರೆ. ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ. ಮಹೇಶ್, ಠಾಣಾಧಿಕಾರಿ ಶ್ರೀಧರ್ ಹಾಗೂ ಸಿಬ್ಬಂದಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.

ತಾಲೂಕು ಕಚೇರಿಗೆ ಅಳವಡಿಸಿದ್ದ ಸಿ.ಸಿ. ಕ್ಯಾಮೆರಾ ಕೆಟ್ಟುಹೋಗಿದೆ. ಕಚೇರಿಯ ಸುತ್ತಮುತ್ತ ಬೆಳಕಿನ ವ್ಯವಸ್ಥೆಯೂ ಇಲ್ಲ. ಮುಂಬದಿಯ ಗೇಟ್ ಬಂದ್ ಮಾಡುತ್ತಿಲ್ಲ. ಸಂಜೆಯಾಗುತ್ತಲೇ ಯಾರು ಬೇಕಾದರೂ ಕಚೇರಿಯ ಒಳಗೆ ಹೋಗುವ ಸ್ಥಿತಿಯಲ್ಲಿ ತಾಲೂಕು ಕಚೇರಿ ಇದ್ದು, ಒಳ ಭಾಗದಲ್ಲಿ ಕಂದಾಯ ಇಲಾಖೆಯ ಕಚೇರಿ, ಅಮೂಲ್ಯ ದಾಖಲೆಗಳಿದ್ದರೂ ಸೂಕ್ತ ಭದ್ರತೆ ಇಲ್ಲವಾಗಿದೆ.