ಕಣಿವೆ, ಜು. ೨೩ : ರಾಜ್ಯದ ಬಹುಪಾಲು ಜನಕೋಟಿಯ ದಣಿವಾರಿಸುವುದರೊಂದಿಗೆ ಲಕ್ಷಾಂತರ ಎಕರೆ ಕೃಷಿ ಭೂಮಿಗೆ ನೀರು ಹರಿಸುವ ಕೊಡಗು ಒಂದು ಪಾವನ ಭೂಮಿ ಎಂದು ಸಿದ್ದಗಂಗಾ ಮಠಾಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿ ಹೇಳಿದರು. ನಿನ್ನೆ ಜಿಲ್ಲೆಗೆ ಆಗಮಿಸಿದ್ದ ಶ್ರೀಗಳು ಇಂದು ತುಮಕೂರಿಗೆ ತೆರಳುತ್ತಿದ್ದ ಸಂದರ್ಭ ಕುಶಾಲನಗರದ ತಾವರೆಕೆರೆ ಬಳಿ ಸಿದ್ಧಗಂಗಾ ಭಕ್ತಮಂಡಳಿ ನೀಡಿದ ಭಕ್ತಿಯ ಸ್ವಾಗತ ಸ್ವೀಕರಿಸಿದ ಬಳಿಕ ವಿವೇಕಾನಂದ ಕಾಲೇಜಿಗೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಜಲಾಶಯಗಳು ತುಂಬಿವೆ. ನದಿಗಳು ತುಂಬಿ ಹರಿಯುತ್ತಿವೆ. ಇಲ್ಲಿನ ವನಸಿರಿ ಸಮೃದ್ಧಿಗೊಂಡು ವನಸಿರಿ ಹಚ್ಚಹಸಿರಿನಿಂದ ಕಂಗೊಳಿಸುತ್ತಿದೆ. ಕೊಡಗಿನಲ್ಲಿ ಮಳೆಯಾದರೆ ಮಾತ್ರ ರಾಜ್ಯ ಸುಭೀಕ್ಷವಾಗಲು ಸಾಧ್ಯ ಎಂದು ಕೊಡಗಿನ ಪರಿಸರವನ್ನು ಶ್ರೀಗಳು ವರ್ಣಿಸಿದರು. ಈ ಸಂದರ್ಭ ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ವಿವೇಕಾನಂದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್.ಎನ್. ಶಂಭುಲಿAಗಪ್ಪ, ನಿರ್ದೇಶಕ ನಂಜಪ್ಪ, ಸಿದ್ಧಗಂಗಾ ಭಕ್ತಮಂಡಳಿ ಅಧ್ಯಕ್ಷ ಕೆ.ಎಸ್.ಮೂರ್ತಿ, ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷರೂ ಆದ ಸಿದ್ಧಗಂಗಾ ಭಕ್ತಮಂಡಳಿ ಸದಸ್ಯ ಜಯವರ್ಧನ, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಬಿ.ಸುರೇಶ್, ಬಿ.ನಟರಾಜು, ಪಾಣತ್ತಲೆ ಗಿರೀಶ್, ಪರಮೇಶ್, ಕಲ್ಲೂರು ಚಂದ್ರಶೇಖರ್, ಚೇತನ್ ಯೋಗಾನಂದ, ಮಹೇಶ್ ಅಮೀನ್ ಮೊದಲಾದವರಿದ್ದರು.

ಅರಮೇರಿ ಮಠಕ್ಕೆ ಭೇಟಿ ನೀಡಿದ ಸಿದ್ಧಗಂಗಾ ಶ್ರೀಗಳು

ವೀರಾಜಪೇಟೆ: ವೀರಾಜಪೇಟೆಯ ಅರಮೇರಿ ಕಳಂಚೇರಿ ಮಠಕ್ಕೆ ಬುಧವಾರ ಸಂಜೆ ತುಮಕೂರಿನ ಸಿದ್ಧಗಂಗಾ ಮಠದ ಮಹಾ ಗುರುಗಳಾದ ಸಿದ್ಧಗಂಗಾ ಮಹಾಸ್ವಾಮಿ ಹಾಗೂ ಕರ್ನಾಟಕದ ವಿವಿಧ ಮಠಗಳ ಸುಮಾರು ಹನ್ನೆರಡು ಮಠಾಧೀಶರು ಭೇಟಿ ನೀಡಿದರು. ವೀರಾಜಪೇಟೆಯಲ್ಲಿ ಗುರುವಾರದಂದು ವಿಪರೀತ ಮಳೆ - ಗಾಳಿ ಇದ್ದ ಕಾರಣ, ಅರಮೇರಿ ಮಠದಲ್ಲಿಯೇ ಪೂಜೆ- ಧ್ಯಾನದಲ್ಲಿಯೇ ಸಮಯ ಕಳೆದು ಅರಮೇರಿ ಮಠದ ಆತಿಥ್ಯವನ್ನು ಸ್ವೀಕರಿಸಿದರು. ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಅರಮೇರಿ ಕಳಂಚೇರಿ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿಯವರು ಶ್ರೀಗಳ ಭೇಟಿ ಒಂದು ಖಾಸಗಿ ಭೇಟಿ ಆಗಿದ್ದು, ಒತ್ತಡದ ಕೆಲಸಗಳ ನಡುವೆ ಸ್ವಲ್ಪ ವಿರಾಮ ಪಡೆಯಲು ಕೊಡಗಿಗೆ ಆಗಮಿಸಿದ್ದರು. ಈ ಹಿಂದೆಯೂ ಅನೇಕ ಬಾರಿ ಭೇಟಿ ನೀಡಿದ್ದರು. ಕೊಡಗಿನ ಪ್ರಕೃತಿ ಅವರಿಗೆ ಬಹಳವಾಗಿ ಹಿಡಿಸಿದೆ. ಶುಕ್ರವಾರದಂದು ಪೂಜೆ ಉಪಹಾರದ ಬಳಿಕ ಚಿಕ್ಲಿಹೊಳೆ ಜಲಾಶಯಕ್ಕೆ ಭೇಟಿ ನೀಡಿ ಬಳಿಕ ಕೊಡಗಿನಿಂದ ನಿರ್ಗಮಿಸಿದರು ಎಂದು ತಿಳಿಸಿದರು.

ಚಿಕ್ಲಿಹೊಳೆಗೆ ಸ್ವಾಮೀಜಿ ಭೇಟಿ

ಕಣಿವೆ : ತುಮಕೂರು ಶ್ರೀ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗಾ ಸ್ವಾಮೀಜಿ ಶುಕ್ರವಾರ ಚಿಕ್ಲಿಹೊಳೆ ಜಲಾಶಯಕ್ಕೆ ಭೇಟಿ ನೀಡಿ ಅಲ್ಲಿನ ಜಲಾಶಯದ ಸೌಂದರ್ಯ ಸವಿದರು.

ಬಳಿಕ ‘ಶಕ್ತಿ’ಯೊಂದಿಗೆ ಮಾತನಾಡಿದ ಶ್ರೀಗಳು, ಸುಂದರ ವನಸಿರಿಯೊಳಗೆ ಇರುವ ಚಿಕ್ಕದಾದ ಚಿಕ್ಲಿಹೊಳೆ ಜಲಾಶಯ ಪ್ರವಾಸಿಗರಿಗೆ ಇಂಪು ನೀಡುತ್ತಿದೆ.

ಹಾಗೆಯೇ ರೈತಾಪಿಗಳ ಬದುಕಿಗೆ ಬೆಳಗಾಗುತ್ತಿದೆ ಎಂದರು.

ಕೊಡಗಿನಲ್ಲಿ ವರ್ಷಧಾರೆಯಾದರೆ ಮಾತ್ರ ಬೆಂಗಳೂರಿನ ಜನಕೋಟಿ ದಾಹ ನೀಗುತ್ತಿದೆ. ಮಂಡ್ಯ ಸೇರಿದಂತೆ ನಾಡಿನ ಹಲವು ಜಿಲ್ಲೆಗಳ ಅನ್ನದಾತರ ಬದುಕು ಹಸನಾಗುತ್ತಿದೆ ಎಂದು ಶ್ರೀಗಳು ಹೇಳಿದರು.

ಈ ಸಂದರ್ಭ ವೀರಾಜಪೇಟೆ ಅರಮೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮಿ ಸೇರಿದಂತೆ ವಿವಿಧ ಮಠಾಧಿಪತಿಗಳಿದ್ದರು.