ಮಡಿಕೇರಿ, ಜು. ೨೩: ಕೊಡಗು ಜಿಲ್ಲೆಯಲ್ಲಿ ಕಳೆದ ಹತ್ತು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮೈಸೂರು-ಬಂಟ್ವಾಳ ಹೆದ್ದಾರಿಯ ಮಡಿಕೇರಿ-ಸಂಪಾಜೆ ಮಾರ್ಗದ ಕಾಟಕೇರಿ ಬಳಿ, ಮದೆನಾಡು ಬಳಿಯ ಕರ್ತೋಜಿಯಲ್ಲಿ ರಸ್ತೆ ಬಿರುಕು ಹಾಗೂ ಎರಡನೇ ಮೊಣ್ಣಂಗೇರಿ ಬಳಿಯ ಹೆದ್ದಾರಿಯಲ್ಲಿ ಬರೆ ಕುಸಿತ ಉಂಟಾಗಿರುವುದನ್ನು ಶಾಸಕ ಕೆ.ಜಿ.ಬೋಪಯ್ಯ ಅವರು ಶುಕ್ರವಾರ ಪರಿಶೀಲಿಸಿದರು.
ಮದೆನಾಡು ಬಳಿಯ ಕರ್ತೋಜಿಯಲ್ಲಿ ಹೆದ್ದಾರಿಗೆ ಮಣ್ಣು ಕುಸಿದಿದ್ದು, ಈಗಾಗಲೇ ಹೆದ್ದಾರಿಯಲ್ಲಿ ರಸ್ತೆ ಬಿರುಕು ಬಿಟ್ಟಿರುವುದನ್ನು ಶಾಸಕರಾದ ಕೆ.ಜಿ.ಬೋಪಯ್ಯ ಅವರು ವೀಕ್ಷಿಸಿದರು. ಬಳಿಕ ಮಾತನಾಡಿದ ಶಾಸಕರು ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಹೆದ್ದಾರಿಯಲ್ಲಿ ಮಣ್ಣು ಕುಸಿಯುವುದರ ಜೊತೆಗೆ, ಹೆದ್ದಾರಿಯ ರಸ್ತೆ ಬಿರುಕು ಉಂಟಾಗಿದ್ದು, ಸ್ವಲ್ಪಮಟ್ಟಿಗೆ ಅಪಾಯದ ಮಟ್ಟ ತಲುಪುತ್ತಿದೆ.
ಇದೇ ರೀತಿ ಮಳೆ ಮುಂದುವರಿದಲ್ಲಿ ಮಡಿಕೇರಿ-ಮಂಗಳೂರು ಮಾರ್ಗದ ಹೆದ್ದಾರಿಯಲ್ಲಿ ಸಾರಿಗೆ ಸಂಪರ್ಕ ವ್ಯತ್ಯಯವಾಗಲಿದೆ. ೧೬ ಟನ್ ಅಧಿಕ ಭಾರದ ವಾಹನಗಳ ಓಡಾಟವನ್ನು ಸ್ಥಗಿತಗೊಳಿಸುವುದು ಅಗತ್ಯ ಎಂದು ಸಲಹೆ ಮಾಡಿದರು. ಭಾರೀ ವಾಹನಗಳ ಸಂಚಾರವನ್ನು ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ರಸ್ತೆ ಸಂಪೂರ್ಣ ಕುಸಿಯುವ ಸಾಧ್ಯತೆ ಇದೆ. ತಾತ್ಕಾಲಿಕವಾಗಿ ರಸ್ತೆ ದುರಸ್ತಿ ಮಾಡಿದರೂ ಸಹ, ಭಾರೀ ಮಳೆಗೆ ರಸ್ತೆ ಬದಿ ಮಣ್ಣು ಕುಸಿಯುತ್ತಿದೆ, ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ವಾಗಿದೆ ಎಂದು ಅವರು ಹೇಳಿದರು.
ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಚಾರ್ಮಾಡಿ ಘಾಟ್ ರಸ್ತೆ ವಾಹನ ಸಂಚಾರ ನಿಷೇಧಿಸಲಾಗಿದೆ. ಇದರಿಂದ ಮೈಸೂರು -ಬಂಟ್ವಾಳ ಮಾರ್ಗದ ಹೆದ್ದಾರಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತಿವೆ. ಆದ್ದರಿಂದ ಭಾರೀ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು.
ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಚಂದ್ರಪ್ಪ ಅವರು ಮದೆನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಕರ್ತೋಜಿಯಲ್ಲಿ ಭಾರೀ ಮಳೆಯಿಂದಾಗಿ ಮಣ್ಣು ಕುಸಿಯುತ್ತಿದೆ. ಭೂಮಿಯ ಕೆಳಭಾಗದಲ್ಲಿ ನೀರು ಉಕ್ಕುತ್ತಿರುವುದರಿಂದ ಮಣ್ಣು ಉಬ್ಬುತ್ತಿದೆ. ಮಳೆಯ ನೀರು ಸರಾಗವಾಗಿ ಹರಿಯುವಂತೆ ಮಾಡಲಾಗುವುದು, ಎರಡು ದಿನದಲ್ಲಿ ಹೆದ್ದಾರಿಯನ್ನು ಸರಿಪಡಿಸಲಾಗುವುದು ಎಂದು ಹೇಳಿದರು. ಭಾರೀ ವಾಹನ ಗಳು ಸಂಚರಿಸಿದರೆ ಸ್ವಲ್ಪ ಮಟ್ಟಿಗೆ ತೊಂದರೆಯಾಗಬಹುದು. ಈ ಸಂಬAಧ ಜಿಲ್ಲಾಧಿಕಾರಿ ಅವರ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು. ಗುತ್ತಿಗೆದಾರ ಜಗದೀಶ್ ರೈ ಇತರರು ಇದ್ದರು.